Homeರಾಜ್ಯರಾಜ್ಯದಲ್ಲಿ ಸರ್ಕಾರ ಇದ್ದರೂ ಕಳೆದೊಂದು ತಿಂಗಳಿನಿಂದ ಆಡಳಿತ ಸ್ತಬ್ಧ!

ರಾಜ್ಯದಲ್ಲಿ ಸರ್ಕಾರ ಇದ್ದರೂ ಕಳೆದೊಂದು ತಿಂಗಳಿನಿಂದ ಆಡಳಿತ ಸ್ತಬ್ಧ!

Despite the government in the state, the administration has been quiet for the past one month!

ಬೆಂಗಳೂರು, ಜೂ.7- ಅಧಿಕಾರ ಹಂಚಿಕೆಯ ಗೊಂದಲ, ಅನಂತರ ಸಂಭ್ರಮಾಚರಣೆಗಳಿಂದಾಗಿ ಸುಮಾರು ಒಂದು ತಿಂಗಳಿನಿಂದಲೂ ರಾಜ್ಯದಲ್ಲಿ ಆಡಳಿತ ನಿಶ್ಯಬ್ಧವಾಗಿದೆ. ಉಪಚುನಾವಣೆಯ ಕಾರಣಕ್ಕಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಸಚಿವರು ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳತ್ತ ಹೆಚ್ಚು ಗಮನಹರಿಸಿದ್ದರು. ಅನಂತರ ಪಂಚರಾಜ್ಯಗಳ ಚುನಾವಣೆಯ ಕಾರಣಕ್ಕಾಗಿ ನೆರೆಯ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕೆಲ ಸಚಿವರು ಪ್ರವಾಸದಲ್ಲಿದ್ದರು. ಅದಾದ ಬಳಿಕ ಅಧಿಕಾರ ಹಂಚಿಕೆಯ ಚರ್ಚೆಗಳು ತೀವ್ರಗೊಂಡವು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ದೆಹಲಿಗೆ ಆಹ್ವಾನಿಸಿತ್ತು. 3 ದಿನಗಳ ಕಾಲ ಈ ಚರ್ಚೆಯಲ್ಲೇ ಕಾಲಹರಣವಾಯಿತು. ಅನಂತರ ಶಾಸಕಾಂಗ ಸಭೆ, ಹೊಸ ನಾಯಕನ ಆಯ್ಕೆ ಎಂದು ಮತ್ತಷ್ಟು ಕಾಲಹರಣವಾಯಿತು.

ಸಂಪುಟ ರಚನೆಯ ಕಸರತ್ತು 4 ದಿನ, ಹೀಗೆ ಸತತವಾಗಿ ಸರಿ ಸುಮಾರು 15 ದಿನಗಳ ಕಾಲ ಯಾವುದೇ ಚಟುವಟಿಕೆ ಇಲ್ಲದೇ ಸರ್ಕಾರ ನಿಷ್ಕ್ರಿಯವಾಗಿತ್ತು.ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರಗೊಂಡು ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸುವವರೆಗೂ ಸಚಿವ ಸಂಪುಟವೇ ಅಸ್ತಿತ್ವದಲ್ಲಿರಲಿಲ್ಲ. ಸಂಪುಟ ರಚನೆಯಾದ ಬಳಿಕವಾದರೂ ಸರ್ಕಾರ ಚುರುಕಾಗಬಹುದು ಎಂಬ ನಿರೀಕ್ಷೆಗಳಿದ್ದವು.

ಖಾತೆ ಹಂಚಿಕೆ ಮತ್ತೊಂದು ದಿನ ತಡವಾಗಿತ್ತು. 3 ದಿನಗಳ ಹಿಂದೆ ಖಾತೆ ಹಂಚಿಕೆಯೂ ಆಗಿದೆ. ಆದರೆ ಈವರೆಗೂ ಬಹಳಷ್ಟು ಸಚಿವರು ತಮ ಇಲಾಖೆಯ ಕಾರ್ಯಭಾರ ಆರಂಭಿಸಿಲ್ಲ.
ಈ ಮೊದಲಿನ ಖಾತೆಯನ್ನೇ ಪಡೆದುಕೊಂಡಿದ್ದ ಎಂ.ಬಿ.ಪಾಟೀಲ್‌ ಅವರಂಥವರ ನಿಗದಿತ ಕಾರ್ಯ ಚಟುವಟಿಕೆಗಳನ್ನು ಹೊರತು ಪಡಿಸಿದರೇ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ.
ಬೆಂಗಳೂರು ನಗಾರಭಿವೃದ್ಧಿ ಮತ್ತು ಜಲ ಸಂಪನೂಲ ಖಾತೆಯ ಹಂಚಿಕೆ ವಿಚಾರವಾಗಿ ಏರ್ಪಟ್ಟಿದ್ದ ಗೊಂದಲ ಮೂರು ದಿನದಿಂದಲೂ ಕಸರತ್ತಿನಂತೆ ನಡೆಯುತ್ತಿದೆ.

ಈ ನಡುವೆ ರಾಜ್ಯಸಭೆ, ವಿಧಾನ ಪರಿಷತ್ತಿನ ನಾಮಪತ್ರಗಳ ಸಲ್ಲಿಕೆಯ ಭರಾಟೆ, ಸಂಭ್ರಮಾಚರಣೆ, ದೇವರ ದರ್ಶನದಂತಹ ಚಟುವಟಿಕೆಗಳಲ್ಲೇ ಕಾಲಹರಣವಾಗುತ್ತಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯ ದರ್ಶಿಗಳನ್ನೊಳಗೊಂಡಂತೆ ಪೊಲೀಸ್‌‍, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿ, ಔಪಚಾರಿಕ ಸೂಚನೆ ನೀಡಿದ್ದರು. ಅನಂತರ ಸಚಿವರುಗಳು ಎಂದಿನಂತೆ ತಮ ಪಾಡಿಗೆ ತಾವು ತವರು ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಸೀಮಿತವಾಗಿ ಪ್ರವಾಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ತಮ ತವರು ಕ್ಷೇತ್ರ ಕನಕಪುರಕ್ಕೆ ತೆರಳಿ ಮತದಾದರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಂತರ ಜಿಲ್ಲಾವಾರು ಪ್ರವಾಸ ಕೈಗೊಂಡು ರೋಡ್‌ ಶೋ ನಡೆಸಲಿದ್ದಾರೆ. ಈ ನಡುವೆ ಶ್ರೀ ಸಾಮಾನ್ಯರಿಗೂ ರಾಜಕೀಯ ಹೈಡ್ರಾಮಗಳನ್ನು ನೋಡುತ್ತಾ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಪರಿಕಲ್ಪನೆಯೇ ಮರೆತುಹೋಗಿದೆ.

ರಾಜಕೀಯ ಅಸ್ಥಿರತೆಯ ಲಾಭ ಪಡೆದ ಅಧಿಕಾರಿಗಳು ನಿದ್ರಾಸ್ಥಿತಿಯಲ್ಲಿದ್ದಂತಿದೆ. ಬಹಳಷ್ಟು ಇಲಾಖೆಗಳಲ್ಲಿ ಹಣದ ಕೊರತೆಯಿದೆ ಎಂದು ನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳನ್ನು ಕುಂಠಿತಗೊಳಿಸಲಾಗಿದೆ. ರಾಜಕೀಯ ಪ್ರಹಸನದಿಂದಾಗಿ ಆಡಳಿತ ಮತ್ತಷ್ಟು ದುರ್ಗತಿಗೆ ತಲುಪಿದೆ.

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದಕ್ಷ ಹಾಗೂ ಖಡಕ್‌ ಆಡಳಿತಗಾರರೆಂದು ಹೆಸರು ಪಡೆದಿದ್ದು, ಖಾಸಗಿ ಕಾರ್ಯಕ್ರಮಗಳ ಬಳಿಕ ಆಡಳಿತದತ್ತ ಗಮನ ಹರಿಸಲಾರಂಭಿಸಿದರೆ, ಹಳಿ ತಪ್ಪಿದ ವ್ಯವಸ್ಥೆ ಮತ್ತೆ ಸರಿ ದಾರಿಗೆ ಬರುವ ನಿರೀಕ್ಷೆಗಳಿವೆ.

RELATED ARTICLES

Latest News