ಲಂಡನ್,ಜು.24-ವಿಶ್ವದ ಅತ್ಯಂತ ಸುರಕ್ಷಿತ ಹಾಗೂ ಐಷಾರಾಮಿ ಪ್ರದೇಶವೆಂದೇ ಹೆಸರಾದ ಲಂಡನ್‌ನ ಕೆನ್ಸಿಂಗ್ಟನ್ ಮೂಲದ ಮ್ಯಾರಿಯಟ್ ಹೋಟೆಲ್‌ನಲ್ಲಿ ನಡೆದ ಸೌದಿ ಅರೇಬಿಯಾದ ರಾಜಕುಮಾರನ ದುರಂತ ಸಾವು ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೌದಿ ಅರೇಬಿಯಾದ 29 ವರ್ಷದ ರಾಜಕುಮಾರ ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲಾಜೀಜ್ ಬಿನ್ ಜಲವಿ ಅಲ್ ಸೌದ್ ಅವರ ಮೃತದೇಹ ಹೋಟೆಲ್ ಕೋಣೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೋನರ್ ನ್ಯಾಯಾಲಯದ ತನಿಖಾ ವರದಿ ಬಹಿರಂಗಗೊಂಡಿದ್ದು, ರಾಜಕುಮಾರನ ಸಾವು ಅತಿಯಾದ ಮದ್ಯ ಮತ್ತು ಮಾರಕ ಡ್ರಗ್ಸ್ ಸೇವನೆಯಿಂದ ಸಂಭವಿಸಿದ ಹೃದಯಾಘಾತದಿಂದ ಆಗಿದೆ ಎಂದು ದೃಢಪಟ್ಟಿದೆ. ತಜ್ಞರು ನ್ಯಾಯಾಲಯಕ್ಕೆ ಸಲ್ಲಿಸಿದ ವೈದ್ಯಕೀಯ ಮತ್ತು ವಿಷಶಾಸ್ತ್ರದ ವರದಿಯ ಪ್ರಕಾರ, ರಾಜಕುಮಾರನ ದೇಹದಲ್ಲಿ ಅನಿಯಂತ್ರಿತ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ.
ಮಿತಿಮೀರಿದ ಆಲ್ಕೋಹಾಲ್:
ರಾಜಕುಮಾರನ ರಕ್ತದಲ್ಲಿ ಪ್ರತಿ 100 ಮಿಲಿ ಲೀಟರ್‌ಗೆ 222 ಮಿಗ್ರಾಂ ಆಲ್ಕೋಹಾಲ್ ಪತ್ತೆಯಾಗಿದೆ. ಇದು ಇಂಗ್ಲೆಂಡ್‌ನ ಕಾನೂನುಬದ್ಧ ಚಾಲನಾ ಮಿತಿಗಿಂತ ಮೂರು ಪಟ್ಟು ಹೆಚ್ಚಾಗಿದ್ದು, ಸಾಧಾರಣ ವ್ಯಕ್ತಿಯನ್ನು ತಕ್ಷಣವೇ ಕೋಮಾಗೆ ತಳ್ಳುವಷ್ಟು ತೀವ್ರವಾಗಿತ್ತು.
ಪಾರ್ಟಿಗಳಲ್ಲಿ ಬಳಸಲಾಗುವ ಅತ್ಯಂತ ಅಪಾಯಕಾರಿ ಕೆಮಿಕಲ್ ಡ್ರಗ್ ಉಊಃ (ಗಾಮಾ-ಹೈಡ್ರಾಕ್ಸಿಬ್ಯುಟೈರೇಟ್) ಮಾರಕ ಪ್ರಮಾಣದಲ್ಲಿ ದೇಹ ಸೇರಿತ್ತು. ಇದರ ಜೊತೆಗೆ ಗಾಂಜಾ, ಕ್ಸಾನಾಕ್‌್ಸ ಹಾಗೂ ಇತರ ಆತಂಕ-ವಿರೋಧಿ ಮಾತ್ರೆಗಳ ಕುರುಹುಗಳು ಪತ್ತೆಯಾಗಿವೆ. ಈ ಎಲ್ಲಾ ವಿಷಕಾರಿ ರಾಸಾಯನಿಕಗಳು ಮತ್ತು ಮದ್ಯ ಒಂದೇ ಸಮಯದಲ್ಲಿ ದೇಹವನ್ನು ಸೇರಿದಾಗ ಉಂಟಾದ ತೀವ್ರ ಪ್ರಕ್ರಿಯೆಯಿಂದಾಗಿ ದಿಢೀರ್ ಹೃದಯ ಸ್ತಂಭನ ಸಂಭವಿಸಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ವಿಚಾರಣೆ ವೇಳೆ ಬಹಿರಂಗವಾದ ಮತ್ತೊಂದು ಆತಂಕಕಾರಿ ವಿಷಯವೆಂದರೆ ರಾಜಕುಮಾರ ಅಬ್ದುಲ್ಲಾ ಅವರು ಸುದೀರ್ಘ ಕಾಲದಿಂದ ತೀವ್ರ ಖಿನ್ನತೆ ಮತ್ತು ಮಾದಕ ವ್ಯಸನದಿಂದ ಬಳಲುತ್ತಿದ್ದರು.
ಆಗಸ್ಟ್ 2025ರಲ್ಲಿ ಅವರು ರೋಹ್ಯಾಂಪ್ಟನ್‌ನ ಪ್ರಸಿದ್ಧ ೞಪ್ರಿಯರಿ ಚಿಕಿತ್ಸಾಲಯಕ್ಕೆ ದಾಖಲಾಗಿ ಆಲ್ಕೋಹಾಲ್ ಹಾಗೂ ಪ್ರಿಸ್ಕಿಪ್ಷನ್ ಔಷಧಿಗಳ (ಬೆಂಜೊಡಿಯಜೆಪೈನ್‌ಗಳು) ದಾಸ್ಯದಿಂದ ಹೊರಬರಲು ಚಿಕಿತ್ಸೆ ಪಡೆದಿದ್ದರು. ತದನಂತರ ಮರ್ಸಿಸೈಡ್‌ನ ೞರೇನ್‌ಫೋರ್ಡ್ ಹಾಲ್ ಕ್ಲಿನಿಕ್‌ೞನಲ್ಲೂ ಪುನಶ್ಚೇತನ ಚಿಕಿತ್ಸೆ ಮುಂದುವರಿಸಿದ್ದರು. ಆದರೆ, ಚಿಕಿತ್ಸೆಯ ನಂತರ ವೈದ್ಯರು ನಿಗದಿಪಡಿಸಿದ್ದ ಪರಿಶೀಲನಾ ಭೇಟಿಗಳನ್ನು ಅವರು ನಿರ್ಲಕ್ಷಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ಆಳವಾಗಿ ಪರಿಶೀಲಿಸಿದ ಸಹಾಯಕ ಕರೋನರ್ ಜೀನ್ ಹಾರ್ಕಿನ್, ಇದೊಂದು ದುರಂತಮಯ ಸಾವು ಎಂದು ತೀರ್ಪು ನೀಡಿದ್ದಾರೆ. ರಾಜಕುಮಾರ ಆತಹತ್ಯೆ ಮಾಡಿಕೊಂಡಿದ್ದಾರೆ ಎನ್ನಲು ಯಾವುದೇ ಡೆತ್‌ನೋಟ್ ಆಗಲಿ ಅಥವಾ ಮುನ್ಸೂಚನೆಯಾಗಲಿ ಸಿಕ್ಕಿಲ್ಲ. ಜೊತೆಗೆ ಘಟನೆಯಲ್ಲಿ ಮೂರನೇ ವ್ಯಕ್ತಿಯ ಭಾಗವಹಿಸುವಿಕೆ ಅಥವಾ ಕೊಲೆಯ ಯತ್ನದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನೊಂದೆಡೆ, ಸೌದಿ ರಾಯಲ್ ಕೋರ್ಟ್ ಅಧಿಕೃತ ಹೇಳಿಕೆಯಲ್ಲಿ ರಾಜಕುಮಾರನ ಮರಣವನ್ನು ದೃಢಪಡಿಸಿದ್ದು, ರಿಯಾದ್‌ನ ಪ್ರಸಿದ್ಧ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಂತಿಮ ಸಂಸ್ಕಾರದ ಪ್ರಾರ್ಥನೆಗಳನ್ನು ನೆರವೇರಿಸುವುದಾಗಿ ತಿಳಿಸಿದೆ.
ವಿಶ್ಲೇಷಣೆ: ವೈಭವೋಪೇತ ಜೀವನ, ಅಗಾಧ ಸಂಪತ್ತು ಇದ್ದಾಗ್ಯೂ ಯುವ ಪೀಳಿಗೆಯು ಮಾನಸಿಕ ಖಿನ್ನತೆ ಮತ್ತು ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗುತ್ತಿರುವುದಕ್ಕೆ ಈ ಘಟನೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಕಣ್ಣು ತೆರೆಸುವ ಉದಾಹರಣೆಯಾಗಿ ಹೊರಹೊಮಿದೆ.
