ಯಲಹಂಕ : , ಸುರಕ್ಷಿತ ಸಂಚಾರ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 12 ಸಾವಿರ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್‌ಗಳ ವಿತರಣೆ, ಬೃಹತ್ ರಕ್ತದಾನ ಮತ್ತು ನೇತ್ರಧಾನ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ, ಹೊಲಿಗೆ ಯಂತ್ರಗಳ ವಿತರಣೆ, ಪತ್ರಿಕಾ ವಿತರಕರಿಗೆ ಬೈಸಿಕಲ್ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ, ಪೌರ ಕಾರ್ಮಿಕರಿಗೆ ಲೇಬರ್ ಕಿಟ್ ವಿತರಣೆ, ಒಂಟಿ ಮನೆಗಳ ಹಕ್ಕುಪತ್ರ ವಿತರಣೆ, ಕುಕ್ಕರ್ ವಿತರಣೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳ ಮೂಲಕ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಜನ್ಮದಿನಾಚರಣೆ ಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಹೊನ್ನೇನಹಳ್ಳಿ ಸಮೀಪದ ರಮಡ ಹೋಟೆಲ್ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡರು, ವಿಶ್ವನಾಥ್ ಅವರ ಹಿತೈಷಿಗಳು, ಸ್ನೇಹಿತರು ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು, ವಿಶ್ವನಾಥ್ ಅವರಿಗೆ ಶುಭ ಹಾರೈಸಿದರು.
ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಜನ್ಮದನಾಚರಣೆ ಎಂಬುದು ನೆಪಮಾತ್ರವಷ್ಟೆ, ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ಎಲ್ಲಾ ಒಂದೆಡೆ ಕಲೆತು, ಜನ್ಮದಿನಾಚರಣೆಯ ನೆಪದಲ್ಲಿ ಬಡವರಿಗಾಗಿ ಒಂದಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳುವುದು, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗಿನ ನಮ್ಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು, ಪಕ್ಷವನ್ನು ಸದೃಢಗೊಳಿಸುವುದಷ್ಟೇ ಈ ಕಾರ್ಯಕ್ರಮದ ಮುಖ್ಯಧ್ಯೇಯವಾಗಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ಸಹಕರಿಸಿರುವುದಕ್ಕೆ ನಾನು ಎಷ್ಟು ಚಿರ ಋಣಿಯಾಗಿದ್ದರೂ ಸಾಲದು, ಅವರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ, ಇಂದಿನ ಈ ಕಾರ್ಯಕ್ರಮದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ನನಗಾಗಿ ಮೀಸಲಿಟ್ಟು ಕಾರ್ಯಕ್ರಮಕ್ಕೆ ಆಗಮಿಸಿ ಜನ್ಮದಿನದ ಶುಭ ಹಾರೈಸಿರುವ ಎಲ್ಲಾ ಗಣ್ಯರು, ಹಿತೈಷಿಗಳು, ಮುಖಂಡರು, ಅಭಿಮಾನಿಗಳಿಗೆ ಅನಂತ ಧನ್ಯವಾದಗಳು ಎಂದರು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ವಿಶ್ವನಾಥ್ ಅವರಿಗೆ ಜನ್ಮದಿನದ ಶುಭ ಹಾರೈಸಿದ ನಂತರ ಮಾತನಾಡಿ ‘ವಿಶ್ವನಾಥ್ ಅವರು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಮುಖಂಡರಾಗಿ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ನಾಲ್ಕು ಬಾರಿ ಶಾಸಕರಾಗಿ, ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬಿಜೆಪಿ ಪಕ್ಷದ ಕಟ್ಟಾಳಾಗಿದ್ದು, ಮುಂಬರುವ ಚುನಾವಣೆಯಲ್ಲಿ ಐದನೆಯ ಭಾರಿಯೂ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇರಳ ಸಂಸದ ಸುರೇಶ್ ಕಿರಣ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶಾಸಕ ವಿಶ್ವನಾಥ್ ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್, ಪತ್ನಿ ಅಪೂರ್ವ ಸಂಜಯ್, ಉದ್ಯಮಿ ಪುರುಷೋತ್ತಮ್ ರೆಡ್ಡಿ, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಎಂ.ಜಿ.ರಾಮಮೂರ್ತಿ, ಎಂ.ಮುನಿರಾಜು, ವಿಶ್ವನಾಥಪುರ ಮಂಜುನಾಥ್, ಸೋಮಶೇಖರ್, ಪ್ರಶಾಂತ್ ರೆಡ್ಡಿ, ಇಟಗಲ್ ಪುರ ಮೋಹನ್, ಕೆ.ಬಾಬು, ಮಲ್ಲೇಶ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೆ.ಎ.ಮುನೀಂದ್ರಕುಮಾರ್ ಸೇರಿದಂತೆ ಹಲವು ಗಣ್ಯರಿದ್ದರು.

