Homeರಾಷ್ಟ್ರೀಯಪ್ರತಿಭಟನೆಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಸಲಹೆ, ವಿಪಕ್ಷಗಳಿಂದ ಆಕ್ರೋಶ

ಪ್ರತಿಭಟನೆಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಸಲಹೆ, ವಿಪಕ್ಷಗಳಿಂದ ಆಕ್ರೋಶ

Rahul Gandhi slams Delhi University over ‘stay away from Jantar Mantar’ advisory to students

ನವದೆಹಲಿ,ಜು.24- ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಚಳವಳಿ ಹಾಗೂ ರಾಜಕೀಯ ಚಟುವಟಿಕೆಗಳ ಮೇಲಿನ ನಿಯಂತ್ರಣದ ವಿಚಾರವಾಗಿ ದೇಶದಲ್ಲಿ ಮತ್ತೊಮೆ ತೀವ್ರ ರಾಜಕೀಯ ಮತ್ತು ಸಾಮಾಜಿಕ ಚರ್ಚೆ ಮುನ್ನೆಲೆಗೆ ಬಂದಿದೆ.ಕೇಂದ್ರೀಯ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳಿಂದ ದೂರವಿರುವಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ ವಿದ್ಯಾರ್ಥಿಗಳಿಗೆ ಅಧಿಕೃತ ಸಲಹೆ ನೀಡಿರುವುದು ರಾಜಕೀಯ ಗದ್ದಲವನ್ನು ಹೆಚ್ಚಿಸಿದೆ.

ವಿಶ್ವವಿದ್ಯಾನಿಲಯಗಳು ಸಾಮಾಜಿಕ ಮಾಧ್ಯಮ ಹಾಗೂ ಅಧಿಕೃತ ಸುತ್ತೋಲೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿವೆ.ದೆಹಲಿ ವಿಶ್ವವಿದ್ಯಾಲಯ- ಜಂತರ್‌ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಗಳನ್ನು ಕಾನೂನುಬಾಹಿರ ಸಭೆಗಳು ಎಂದು ಉಲ್ಲೇಖಿಸಿರುವ ಡಿಯು, ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನಗಳ ಪ್ರಕಾರ ಇಂತಹ ಸ್ಥಳಗಳು ನಿಯಂತ್ರಿಸಲ್ಪಡುತ್ತವೆ ಎಂದು ತಿಳಿಸಿದೆ. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುರಕ್ಷತೆ ಹಾಗೂ ಭವಿಷ್ಯದ ವೃತ್ತಿಪರ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಕೂಡ ಸಾರ್ವಜನಿಕ ಪ್ರದರ್ಶನಗಳು ಹಾಗೂ ಪ್ರತಿಭಟನೆಗಳಿಂದ ದೂರವಿರಲು ಮನವಿ ಮಾಡಿದೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಸೂಚಿಸಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಮತ್ತು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಐಐಟಿ ರೂರ್ಕಿ – ಕೆಲವು ದಿನಗಳ ಹಿಂದೆ ಐಐಟಿ ರೂರ್ಕಿ ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಂಸ್ಥೆಯ ಅನುಮತಿಯಿಲ್ಲದೆ ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಬಾರದು ಅಥವಾ ರಾಜಕೀಯ ವಿಷಯಗಳ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಬಾರದು ಎಂದು ಸಲಹೆ ನೀಡಿತ್ತು. ಆದರೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾದಾಗ, ಸಂಸ್ಥೆಯು ಇದು ಯಾವುದೇ ಹೊಸ ನೀತಿಯಲ್ಲ, ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ನೀಡಲಾಗುವ ಸಾಮಾನ್ಯ ನಡವಳಿಕೆ ನಿಯಮಗಳ ಭಾಗ ಎಂದು ಸ್ಪಷ್ಟನೆ ನೀಡಿತ್ತು.

ಐಐಟಿ ಮದ್ರಾಸ್‌‍- ಐಐಟಿ ಮದ್ರಾಸ್‌‍ನ ವಿದ್ಯಾರ್ಥಿಯೊಬ್ಬರ ಪ್ರಕಾರ, ಜಂತರ್‌ ಮಂತರ್‌ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿದ್ದ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸಂಸ್ಥೆಯ ಡೀನ್‌ ಸೂಚಿಸಿದ್ದರು ಎಂದು ತಿಳಿದುಬಂದಿದೆ.

ಪ್ರತಿಪಕ್ಷಗಳ ತೀವ್ರ ಖಂಡನೆ
ವಿಶ್ವವಿದ್ಯಾಲಯಗಳ ಈ ಪ್ರಕಟಣೆಗಳು ವಿರೋಧ ಪಕ್ಷಗಳ ನಾಯಕರು ಮತ್ತು ಪ್ರಮುಖ ಗಣ್ಯರ ಆಕ್ರೋಶಕ್ಕೆ ಕಾರಣವಾಗಿವೆ. ವಿದ್ಯಾರ್ಥಿಗಳು ತಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಅವರಿಗೆ ಬೆದರಿಕೆ ಹಾಕಲು ನಿಮಗಷ್ಟು ಧೈರ್ಯವೇ? ಸಮಯ ಬಂದಾಗ ಈ ಕ್ರಮಕ್ಕೆ ವಿಶ್ವವಿದ್ಯಾಲಯಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಖಂಡಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಇಂತಹ ಕ್ರಮಗಳು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದ ಇತರ ಪ್ರಮುಖ ಸಂಸ್ಥೆಗಳಲ್ಲೂ ಇದೇ ರೀತಿಯ ಬೆಳವಣಿಗೆಗಳು ಕಂಡುಬಂದಿವೆ.

ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಮುದಾಯದಲ್ಲಿ ಆಕ್ರೋಶ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ವಿಶ್ವವಿದ್ಯಾಲಯಗಳು ಹೊರಡಿಸಿರುವ ಈ ಸಲಹಾ ಪತ್ರಗಳು ಪರಿಸ್ಥಿತಿಯನ್ನು ಮತ್ತಷ್ಟು ಕಾವೇರುವಂತೆ ಮಾಡಿವೆ. ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಸ್ಥೆಗಳ ಶಿಸ್ತು-ಸುರಕ್ಷತೆಯ ನಡುವಿನ ಈ ಸಂಘರ್ಷ ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News