ಬೆಂಗಳೂರು, ಜೂ.8- ಬಹುನಿರೀಕ್ಷಿತ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮರುಸ್ಪರ್ಧೆಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಕು ಮೂಡಿವ ಸಾಧ್ಯತೆ ಇದೆ. ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಸಂಘಟಿಸಲು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಟಿಕೆಟ್ ನೀಡದಿರುವುದು ಬರುವ ದಿನಗಳಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂಬ ಮಾತು ಕೇಳಿಬರುತ್ತದೆ.
ಅದರಲ್ಲೂ ಜೆಡಿಎಸ್ ವರೀಷ್ಠ ದೇವೇಗೌಡ ಅವರಿಗೆ ಟಿಕೆಟ್ ಕೊಡದಿರುವುದು ಬಿಜೆಪಿ ಜೆಡಿಎಸ್ ಮೈತ್ರಿಕೂಟದಲ್ಲಿ ಯಾವುದು ಸರಿ ಇಲ್ಲ ಎಂಬುದು ಮತ್ತೊಮೆ ಜಗಜ್ಜಾಹೀರವಾಗಿದೆ. ಗೌಡರಿಗೆ ಟಿಕೆಟ್ ಕೈತಪ್ಪಿದ್ದರೂ, ಕಡೆ ಪಕ್ಷ ಬಿಜೆಪಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡಿದ್ದರೆ, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುತ್ತಿತ್ತು ಎನ್ನುವುದು ಬಹುತೇಕ ಕಾರ್ಯಕರ್ತರ ಅಭಿಲಾಷೆಯಾಗಿತ್ತು.
ಹೀಗಾಗಿ ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಅವರು, ಸ್ಪರ್ಧೆ ಮಾಡಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ , ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮತ್ತಿತರ ಬಗೆಗಳಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಕಾರ್ಯಕರ್ತರು ನಂಬಿದ್ದರು.
ಕೊನೆ ಕ್ಷಣದಲ್ಲಿ ಕೇಂದ್ರ ಬಿಜೆಪಿ ವರೀಷ್ಠರು ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ಪ್ರೆ.ನಾಗರಾಜ್ ಅವರಿಗೆ ಮಣೆ ಹಾಕಿರುವುದು ಸ್ವತಃ ಕಾರ್ಯಕರ್ತರಲ್ಲಿ ಹೈಕಮಾಂಡ್ ಲೆಕ್ಕಾಚಾರದ ಬಗ್ಗೆ ಅಸಮಾಧಾನ ಮೂಡಿದೆ.ಈ ಬಾರಿ ದೇವೇಗೌಡರಿಗೆ ಅಸ್ಸಾಂ ಇಲ್ಲವೇ ಮಹಾರಾಷ್ಟ್ರದಿಂದ ಸ್ಪರ್ಧೆ ಮಾಡುವಂತೆ ದೆಹಲಿ ನಾಯಕರು ಮನವಿ ಮಾಡಿಕೊಂಡಿದ್ದರು. ಆದರೆ, ಇದನ್ನು ಅಷ್ಟೇ ನಯವಾಗಿ ತಿರಸ್ಕರಿಸಿದ ದೊಡ್ಡ ಗೌಡರು ನನಗೆ ಕೊಡುವುದಿದ್ದರೆ ಕರ್ನಾಟಕದಿಂದ ಟಿಕೆಟ್ ಕೊಡಿ. ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ ನಾನು ಮಹಾರಾಷ್ಟ್ರ ಇಲ್ಲವೇ ಅಸ್ಸಾಂನಿಂದ ಸ್ಪರ್ಧೆ ಮಾಡಲಾರೆ. ಒಂದುವೇಳೆ ಅಲ್ಲಿಂದ ಸ್ಪರ್ಧಿಸಿದರೆ,ಕಾರ್ಯಕರ್ತರಿಗೆ ಬೇರೆಯದೇ ಆದ ಸಂದೇಶ ಹೋಗುತ್ತದೆ. ಅದರ ಬದಲು ಟಿಕೆಟ್ ನೀಡದಿದ್ದರೂ ನನಗೆ ಬೇಸರವಿಲ್ಲ ಎಂದು ಖುದ್ದು ದೆಹಲಿ ನಾಯಕರ ಬಳಿ ಹೇಳಿಕೊಂಡಿದ್ದರಂತೆ.
ಭಾನುವಾರ ರಾತ್ರಿಯವರೆಗೂ ದೇವೇಗೌಡರು ಬಿಜೆಪಿ -ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಸೋಮವಾರ ಗೌಡರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಗುಸು-ಗುಸು ಹಬ್ಬಿತ್ತು. ಯಾವಾಗಲೂ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಎದುರಾಳಿಗಳಿಗೆ ಶಾಕ್ ಕೊಡುವ ಬಿಜೆಪಿ ಈ ಬಾರಿಯೂ ಅದೇ ತಂತ್ರವನ್ನೇ ಅನುಸರಿಸಿದೆ. ದೇವೇಗೌಡರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಭವಿಷ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಸಂಕಷ್ಟದ ದಿನಗಳು ಎದುರಾಗಬಹುದು ಎನ್ನಲಾಗುತ್ತದೆ.
ಏನಾಗಲಿದೆ ಪರಿಣಾಮ ? :
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಆಂತರಿಕವಾಗಿ ಅಸಮಾಧಾನಗಳು ಇದ್ದೇ ಇದೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ, ಬದಲಾಗಿ ರಾಷ್ಟ್ರ ನಾಯಕರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಅಭಿಪ್ರಾಯ ಇದೆ. ಜೆಡಿಎಸ್ ಪ್ರಮುಖರ ಈ ನಡೆಯ ಬಗ್ಗೆ ರಾಜ್ಯದಲ್ಲಿ ಒಂದಿಷ್ಟು ಕಮಲ ನಾಯಕರಿಗೆ ಅಸಮಾಧಾನ ಇದ್ದೇ ಇದೆ.
ಕರ್ನಾಟಕ ಬಿಜೆಪಿ ಮಾಡುವ ಶಿಫಾರಸುಗಳನ್ನು ಬಿಜೆಪಿ ಹೈಕಮಾಂಡ್ ನಾಯಕತ್ವ ಒಪ್ಪದೆ ಇರುವ ಹಲವು ನಿದರ್ಶನಗಳು ನಡೆದಿವೆ. ಆದರೆ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಸದ್ಯ ರಾಜ್ಯದ ರಾಜಕೀಯ ಚಿತ್ರಣ ಕೂಡಾ ಬದಲಾವಣೆ ಆಗಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಗಾರಿಕೆಯನ್ನು ಬಿಜೆಪಿ ಮತ್ತು ಜೆಡಿಎಸ್ ಅಳವಡಿಸಿಕೊಳ್ಳಬೇಕಾಗಿದೆ. ಈ ನಡುವೆ ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಮತ್ತು ದೇವೇಗೌಡರಿಗೆ ಸಿಗದ ಅವಕಾಶ ಜೆಡಿಎಸ್ ನಲ್ಲಿ ಚರ್ಚೆಯನ್ನು ಹುಟ್ಟು ಹಾಕಲಿದೆ. ಇದು ಮೈತ್ರಿ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಕೂಡಾ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ.
ನಿರೀಕ್ಷೆ ಹುಸಿ :
ಎಚ್.ಡಿ.ದೇವೇಗೌಡ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ ಮೈತ್ರಿ ಗಟ್ಟಿ ಸಂದೇಶ ರವಾನೆ ಮಾಡುವ ನಿರೀಕ್ಷೆ ಇತ್ತು. ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಅದ ಹಿನ್ನೆಲೆಯಲ್ಲಿ 2028ರ ವಿಧಾನಸಭೆ ಚುನಾವಣೆಗೂ ಮಹತ್ವವಾಗಿದೆ. ಒಕ್ಕಲಿಗ ಸಮುದಾಯದ ಮತಗಳನ್ನು ಡಿಕೆ ಶಿವಕುಮಾರ್ ಸೆಳೆಯುವ ಸಾಧ್ಯತೆ ಇದೀಗ ಹೆಚ್ಚಾಗಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಗಟ್ಟಿಯಾಗುವುದು ಅನಿವಾರ್ಯವಾಗಿದೆ.
ಹಾಗಾಗಿ ಹಿರಿಯರಾದ ದೇವೇಗೌಡ ಅವರಿಗೆ ಮತ್ತೊಮೆ ಮಣೆ ಹಾಕುವ ಸಾಧ್ಯತೆಯ ಬಗ್ಗೆ ಜೆಡಿಎಸ್ ನಾಯಕರಲ್ಲಿ ನಿರೀಕ್ಷೆ ಇದ್ದವು. ಆದರೆ ದೇವೇಗೌಡರಿಗೆ ಮತ್ತೊಮೆ ಅವಕಾಶ ನೀಡುವ ಬಗ್ಗೆ ಬಿಜೆಪಿಯಲ್ಲಿ ಭಿನ್ನ ಅಭಿಪ್ರಾಯ ಇತ್ತು. ಬಿಜೆಪಿ ಪಕ್ಷದ ಕೆಲವು ನಾಯಕರು ಇದಕ್ಕೆ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದರು.ಬಹಿರಂಗವಾಗಿ ಯಾರೂ ಹೇಳಿಕೆ ನೀಡದೆ ಇದ್ದರೂ ಆಂತರಿಕವಾಗಿ ಅಸಮಾಧಾನಗಳು ಕಾಣಿಸಿಕೊಂಡಿದ್ದವು. ಇದೀಗ ವಯಸ್ಸು ಮತ್ತು ಅನಾರೋಗ್ಯ ಕಾರಣ ನೀಡಿ ರಾಜ್ಯಸಭೆಗೆ ದೇವೇಗೌಡರ ಆಯ್ಕೆ ಕೈತಪ್ಪಿದೆ. ಬಿಜೆಪಿ ನಾಯಕರು ಇದೇ ಕಾರಣವನ್ನು ನೀಡುತ್ತಿದ್ದಾರೆ. ಜೂ.18 ರಂದು 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಆದರೆ ಬಿಜೆಪಿ ನಾಯಕತ್ವ ದೇವೇಗೌಡರ ಬದಲಾಗಿ ಪ್ರೆ. ಎಂ. ನಾಗರಾಜ ಅವರಿಗೆ ಮಣೆ ಹಾಕಿದೆ. ವರಿಷ್ಠರ ಈ ನಿಲುವು ದಳಪತಿಗಳಿಗೆ ಒಂದು ರೀತಿಯಲ್ಲಿ ಆದ ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ತ್ಯಾಗ ಮಾಡಿದ ಮಾಜಿ ಸಂಸದೆ ಸುಮಲತಾ ಅವರ ಹೆಸರು ಕೂಡ ಕೇಳಿ ಬಂದಿತ್ತು. ದೆಹಲಿ ಮಟ್ಟದಲ್ಲಿ ಸುಮಲತಾ ಲಾಬಿ ಕೂಡ ನಡೆಸಿದ್ದರು.. ಆದರೆ ಬಿಜೆಪಿ ಸುಮಲತಾ ಅವರನ್ನೂ ಕೂಡ ಆಯ್ಕೆ ಮಾಡಿಲ್ಲ. ಇದರಿಂದ ಮಂಡ್ಯ ಮೈತ್ರಿಯಲ್ಲಿ ಮಹಾಬಿರುಕು ಮೂಡುವ ಸಾಧ್ಯತೆ ಇದೆ. ಅಸಮಾಧಾನ ಸ್ಫೋಟಗೊಂಡಿದೆ.
ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸದಾನಂದಗೌಡರಿಗೂ ಬಿಜೆಪಿ ಮಣೆ ಹಾಕಿಲ್ಲ. ಇದೀಗ ರಾಜ್ಯಸಭೆ ಕೈ ತಪ್ಪಿದ್ದಕ್ಕೆ ಪಕ್ಷದಿಂದ ಸುಮಲತಾ ಅಂಬರೀಶ್ ಹಾಗೂ ಸದಾನಂದಗೌಡ್ರು ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡಲಾಗುವುದು ಎಂಬ ನಿರೀಕ್ಷೆ ಹುಸಿಯಾಗಿದೆ.2026ರ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಎನ್ಡಿಎ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಚ್.ಡಿ.ದೇವೇಗೌಡರ ಹೆಸರು ಇಲ್ಲವಾಗಿದೆ. ಬದಲಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಪ್ರೆ. ಎಂ.ನಾಗರಾಜ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದ್ದರೂ ಎಚ್ಡಿಡಿಗೆ ಮಣೆ ಹಾಕದೆ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎಚ್.ಡಿ.ದೇವೇಗೌಡ ಅವರನ್ನು ಕಳೆದ ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಆದರೆ ಮೈತ್ರಿ ಕಾರಣಕ್ಕಾಗಿ ಮತ್ತು 2028ರ ಕರ್ನಾಟಕ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಮರು ಆಯ್ಕೆ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಜ್ಜೆ ಇಟ್ಟಿದೆ. ಎಚ್.ಡಿ.ದೇವೇಗೌಡ ಅವರ ಬದಲಾಗಿ ಪ್ರೆ.ಎಂ.ನಾಗರಾಜ ನಾಮನಿರ್ದೇಶನ ಮಾಡಲಾಗಿದೆ. ಈ ಮೂಲಕ ಬಿಜೆಪಿ ವರಿಷ್ಠರು ತಮದೇ ಆದ ಲೆಕ್ಕಾಚಾರವನ್ನು ಹೊರಹಾಕಿದ್ದಾರೆ.
