ಬೆಂಗಳೂರು, ಜೂ.8- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಬೆಂಚ್‌ಗಳ ಬದಲಿಗೆ ಕೇರಳ ಮಾದರಿಯ ವೃತ್ತಾಕಾರದ ಅಥವಾ ಯು (U) ಆಕಾರದ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಕೇರಳದ ಮಾದರಿಯು ಈಗಾಗಲೇ ಅಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಇದೇ ಮಾದರಿಯನ್ನು ಆಳವಡಿಸಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದೆ. ಇದು ಕಲಿಕೆಯನ್ನು ಕಂಠಪಾಠದ ಬದಲು ಅರ್ಥಪೂರ್ಣ ಸಂವಾದವನ್ನಾಗಿ ಪರಿವರ್ತಿಸಲು ಒಂದು ದಿಟ್ಟ ಹೆಜ್ಜೆಯಾಗಿದೆ. ಈ ಹೊಸ ಮಾದರಿಯು ಮಕ್ಕಳಲ್ಲಿ ಆತವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅವರಲ್ಲಿ ಅಡಗಿರುವ ಸೃಜನಾತಕತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಸಾಂಪ್ರದಾಯಿಕ ಸಾಲು-ಸಾಲಿನ ಆಸನ ವ್ಯವಸ್ಥೆಗಿಂತ, ಈ ವಿನ್ಯಾಸವು ವಿದ್ಯಾರ್ಥಿಗಳನ್ನು ಪರಸ್ಪರ ಮುಖಾಮುಖಿಯಾಗಿ ಕೂರಿಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಯು ಆಕಾರದ ಆಸನ ವ್ಯವಸ್ಥೆಯಲ್ಲಿ ಶಿಕ್ಷಕರು ತರಗತಿಯ ಕೇಂದ್ರಭಾಗದಲ್ಲಿ ನಿಂತು ಪ್ರತಿಯೊಬ್ಬ ವಿದ್ಯಾರ್ಥಿಯತ್ತ ಗಮನ ಹರಿಸಲು ಸುಲಭವಾಗುತ್ತದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಈ ವ್ಯವಸ್ಥೆಯು ಗುಂಪು ಚರ್ಚೆ, ಪ್ರಾಜೆಕ್ಟ್ ಕೆಲಸಗಳು ಮತ್ತು ಸಹಪಾಠಿಗಳೊಂದಿಗೆ ಕಲಿಕೆಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ. ಬದಲಾದ ಆಸನ ವ್ಯವಸ್ಥೆಯು ತರಗತಿಯ ವಾತಾವರಣವನ್ನು ಹೆಚ್ಚು ಆಕರ್ಷಕ ಮತ್ತು ಜೀವಂತವಾಗಿಸುತ್ತದೆ, ಇದರಿಂದ ವಿದ್ಯಾರ್ಥಿಗಳು ಪಾಠದಲ್ಲಿ ಹೆಚ್ಚು ಆಸಕ್ತಿ ವಹಿಸಲು ಸಾಧ್ಯವಾಗುತ್ತದೆ.
ಎಲ್ಲ ವಿದ್ಯಾರ್ಥಿಗಳೂ ಸಮಾನ ಅಂತರದಲ್ಲಿ ಕುಳಿತುಕೊಳ್ಳುವುದರಿಂದ ತರಗತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಗಮನ ಸಿಗುತ್ತದೆ ಎಂಬ ಭಾವನೆ ಮೂಡುತ್ತದೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಮುಖಾಮುಖಿ ನೋಡಬಲ್ಲರು. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಹಾಗೂ ವಿದ್ಯಾರ್ಥಿಗಳ ನಡುವೆ ಸಂವಹನ ಸುಲಭವಾಗುತ್ತದೆ. ಇದು ಕೇವಲ ಉಪನ್ಯಾಸ ಕೇಳುವ ಪದ್ಧತಿಯನ್ನು ಬದಲಿಸಿ, ತರಗತಿಯಲ್ಲಿ ಚರ್ಚೆಗಳು, ಗುಂಪು ಕೆಲಸಗಳು ಮತ್ತು ವಿಚಾರ ವಿನಿಮಯ ಹೆಚ್ಚಾಗಲು ನೆರವಾಗುತ್ತದೆ. ಶಿಕ್ಷಕರು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸುಲಭವಾಗಿ ಗಮನಿಸಬಹುದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಲು ಸಾಧ್ಯವಾಗುತ್ತದೆ.
ಸಮಾನತೆಯ ಭಾವ :
ಸಾಂಪ್ರದಾಯಿಕ ಸಾಲು ಸಾಲು ಬೆಂಚ್‌ಗಳ ವ್ಯವಸ್ಥೆಗಿಂತ, ಈ ಪದ್ಧತಿಯು ವಿದ್ಯಾರ್ಥಿಗಳಲ್ಲಿ ಸಮಾನತೆಯ ಮತ್ತು ಸಮುದಾಯದ ಭಾವನೆಯನ್ನು ಮೂಡಿಸುತ್ತದೆ.
ಶಿಕ್ಷಕ-ವಿದ್ಯಾರ್ಥಿ ಸಂಬಂಧ :
ಯು ಆಕಾರದ ಆಸನ ವ್ಯವಸ್ಥೆಯಲ್ಲಿ ಶಿಕ್ಷಕರು ತರಗತಿಯ ಕೇಂದ್ರ ಬಿಂದುವಾಗಿರದೆ, ಸುಗಮಕಾರರಾಗಿ ಕಾರ್ಯ ನಿರ್ವಹಿಸಲು ಸುಲಭವಾಗುತ್ತದೆ. ಇದು ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ವೈಯಕ್ತಿಕವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ಶಿಕ್ಷಕರು ಭಾವಿಸಿದ್ದಾರೆ.
ಸಮಾನತೆ ಮತ್ತು ಒಳಗೊಳ್ಳುವಿಕೆ :
ಬೆಂಚ್‌ಗಳ ಮೇಲಿನ ಶ್ರೇಣೀಕೃತವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಹೋಗಲಾಡಿಸಿ, ಎಲ್ಲರೂ ಸಮಾನ ಎತ್ತರದಲ್ಲಿ ಮತ್ತು ಒಂದೇ ವೃತ್ತದ ಆಕಾರಲ್ಲಿ ಕುಳಿತುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ.
ಸೃಜನಾತಕ ಕಲಿಕಾ ವಾತಾವರಣ :
ತರಗತಿಯನ್ನು ಕೇವಲ ಪಾಠ ಕೇಳುವ ಸ್ಥಳವನ್ನಾಗಿ ಮಾಡದೆ, ಅದನ್ನು ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಲು ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ವೃತ್ತಾಕಾರದ ವ್ಯವಸ್ಥೆಯನ್ನು ಅಳವಡಿಸುವುದು ಕಠಿಣವಾಗಬಹುದು.
ಇದಕ್ಕೆ ತರಗತಿಯ ಸ್ಥಳಾವಕಾಶದ ಮರು ವಿನ್ಯಾಸದ ಅಗತ್ಯವಿರುತ್ತದೆ. ಈ ವ್ಯವಸ್ಥೆಯಲ್ಲಿ ಪಾಠ ಬೋಧನೆ ಮಾಡುವ ವಿಧಾನ ಬದಲಾಗಬೇಕಾಗುತ್ತದೆ. ಶಿಕ್ಷಕರಿಗೆ ಹೊಸ ಬೋಧನಾ ತಂತ್ರಗಳ ಕುರಿತು ತರಬೇತಿ ನೀಡುವುದು ಅತ್ಯಗತ್ಯ. ಈಗಾಗಲೇ ಇರುವ ಬೆಂಚ್‌ಗಳನ್ನು ಬದಲಾಯಿಸುವುದು ಅಥವಾ ಪೀಠೋಪಕರಣಗಳ ಮರು ಹೊಂದಾಣಿಕೆ ಮಾಡುವಾಗ ಆರ್ಥಿಕ ಮತ್ತು ನಿರ್ವಹಣಾ ಸವಾಲುಗಳು ಎದುರಾಗಬಹುದು.
