Homeರಾಜ್ಯಮುಂಗಾರು ಕೊರತೆ : ಜಲಾಶಯಗಳು ಖಾಲಿ ಖಾಲಿ, ರಾಜ್ಯದಲ್ಲಿ ಬರದ ಛಾಯೆ

ಮುಂಗಾರು ಕೊರತೆ : ಜಲಾಶಯಗಳು ಖಾಲಿ ಖಾಲಿ, ರಾಜ್ಯದಲ್ಲಿ ಬರದ ಛಾಯೆ

Monsoon deficit: Reservoirs empty, drought looms over the state

ಬೆಂಗಳೂರು, ಜೂ.12- ನೈಋತ್ಯ ಮುಂಗಾರು ಆರಂಭದಲ್ಲೇ ದುರ್ಬಲಗೊಂಡು ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿಲ್ಲ.

ಆರಂಭದಲ್ಲೇ ಬರದ ಛಾಯೆ ಆವರಿಸುವ ಲಕ್ಷಣಗಳು ಗೋಚರಿಸತೊಡಗಿವೆ. ಈ ಬಾರಿಯ ಮುಂಗಾರು ವಾಡಿಕೆಗಿಂತ ಕಡಿಮೆಯಾಗಲಿದೆ ಎಂಬ ಹವಾಮಾನ ಮುನ್ಸೂಚನೆಯಂತೆ ಮಳೆಯೂ ಕೂಡಾ ಕಣ್ಣಾಮುಚ್ಚಾಲೆ ಆಟ ಮುಂದುವರೆಸಿದೆ. ಇದರಿಂದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಬಗ್ಗೆ ಸಾರ್ವಜನಿಕವಾಗಿ ಸಂದೇಹ ವ್ಯಕ್ತವಾಗುತ್ತಿದೆ. ಅವಧಿಗೂ ಮುನ್ನ ಮುಂಗಾರು ಆರಂಭವಾಗಲಿದೆ ಎಂಬ ಮುನ್ಸೂಚನೆ ಇದ್ದರೂ ಈ ಬಾರಿ ಒಂದು ವಾರ ತಡವಾಗಿ ಪ್ರಾರಂಭವಾಗಿದೆ. ಆದರೂ ವಾಡಿಕೆ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.

ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ.23 ರಷ್ಟು ಮಾತ್ರ ನೀರಿನ ಸಂಗ್ರಹವಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 207.57 ಟಿಎಂಸಿ ಅಡಿ ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 340.22 ಟಿಎಂಸಿ ಅಡಿಯಷ್ಟು ನೀರಿತ್ತು.

ಅಂದರೆ 133 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಇದೆ. ಇದಕ್ಕೆ ಪ್ರಮುಖ ಕಾರಣ ಮುಂಗಾರು ದುರ್ಬಲವಾಗಿರುವುದು. ಜೂ.1 ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 57 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಆದರೆ ಕೇವಲ 50 ಮಿ.ಮೀ.ನಷ್ಟು ಮಾತ್ರ ಮಳೆಯಾಗಿತ್ತು. ಶೇ.12 ರಷ್ಟು ಮಳೆ ಕೊರತೆ ಉಂಟಾಗಿದೆ.

ಉ.ಕರ್ನಾಟಕ ಹೊರತುಪಡಿಸಿ ಉಳಿದೆಲ್ಲಾ ಭಾಗಗಳಲ್ಲೂ ಮಳೆ ಕೊರತೆ ಕಂಡುಬಂದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.19, ಮಲೆನಾಡು ಭಾಗದಲ್ಲಿ ಶೇ.15 ಹಾಗೂ ಕರಾವಳಿ ಭಾಗದಲ್ಲಿ ಶೇ.28 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಪೂರ್ವ ಮುಂಗಾರು ಮಳೆಯೂ ಕೂಡ ಮೇನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಳಲಿಲ್ಲ. ಅಲ್ಲದೆ ಬಿರುಬೇಸಿಗೆಯಿಂದಾಗಿ ಜಲಾಶಯಗಳಲ್ಲಿ ಸಂಗ್ರಹವಿದ್ದ ನೀರು ಸಾಕಷ್ಟು ಖರ್ಚಾಗಿದೆ. ಇದರಿಂದ ಜಲಾಶಯಗಳ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ.

ನಾರಾಯಣಪುರ ಜಲಾಶಯ ಹೊರತುಪಡಿಸಿ ರಾಜ್ಯದ ಯಾವುದೇ ಜಲಾಶಯಕ್ಕೆ ಇನ್ನೂ 5 ಸಾವಿರ ಕ್ಯೂಸೆಕ್‌್ಸನಷ್ಟು ನೀರು ಒಳಹರಿವಿಲ್ಲ. ರಾಜ್ಯದ ಜೀವನಾಡಿ ಕಾವೇರಿ ಜಲಾನಯನ ಭಾಗದಲ್ಲಿ ಕಬಿನಿ ಜಲಾಶಯಕ್ಕೆ ಮಾತ್ರ 2,446 ಕ್ಯೂಸೆಕ್‌್ಸನಷ್ಟು ಮಾತ್ರ ಒಳಹರಿವಿದೆ. ಹಾರಂಗಿಗೆ ಕೇವಲ 350, ಹೇಮಾವತಿಗೆ ಕೇವಲ 498 ಹಾಗೂ ಕೆಆರ್‌ಎಸ್‌‍ಗೆ ಕೇವಲ 581 ಕ್ಯೂಸೆಕ್‌್ಸನಷ್ಟು ಮಾತ್ರ ಒಳಹರಿವು ಇದೆ.

ಈ ನಾಲ್ಕೂ ಜಲಾಶಯಗಳಲ್ಲಿ ಕೇವಲ ಶೇ.29 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 43 ಟಿಎಂಸಿಯಷ್ಟು ನೀರು ಸಂಗ್ರಹ ಕಡಿಮೆ ಇದೆ. ಅಂದರೆ ಕಳೆದ ವರ್ಷ ಸಂಗ್ರಹವಾಗಿದ್ದ ನೀರಿನಲ್ಲಿ ಅರ್ಧಕ್ಕಿಂತಲೂ ಕಡಿಮೆ ಇದೆ. ಕಾವೇರಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯೂ ಆಗುತ್ತಿಲ್ಲ. ಹೀಗಾಗಿ ಆ ಭಾಗದ ರೈತರು ಹಾಗೂ ಜನರಿಗೆ ಆತಂಕ ಎದುರಾಗಿದೆ.

ಕೆಆರ್‌ಎಸ್‌‍ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 108.50 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಅಂದರೆ 30.24 ಟಿಎಂಸಿ ಅಡಿ ನೀರಿತ್ತು. ಈ ವರ್ಷ 81.36 ಅಡಿಯಷ್ಟು ನೀರಿದ್ದು, ಕೇವಲ 11.40 ಟಿಎಂಸಿ ನೀರು ಮಾತ್ರ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ 11, ಕೆಆರ್‌ಎಸ್‌‍ ಜಲಾಶಯದಲ್ಲಿ 19, ಹೇಮಾವತಿ ಜಲಾಶಯದಲ್ಲಿ 10 ಹಾಗೂ ಹಾರಂಗಿ ಜಲಾಶಯದಲ್ಲಿ 3 ಟಿಎಂಸಿ ಅಡಿ ನೀರು ಕಡಿಮೆ ಇದೆ.

ಇದೇ ಪರಿಸ್ಥಿತಿ ಕಾವೇರಿ ಜಲಾನಯನ ಭಾಗದಲ್ಲಿ ಮುಂದುವರೆದು ಉತ್ತಮ ಮಳೆಯಾಗದಿದ್ದರೆ ಕೃಷಿ ಹಾಗೂ ಕುಡಿಯುವ ನೀರಿಗೆ ತೊಂದರೆ ಎದುರಾಗಬಹುದು.ಮುಂಗಾರು ಚೇತರಿಸಿಕೊಂಡು ಜಲಾನಯನ ಭಾಗದಲ್ಲಿ ಸಾಕಷ್ಟು ಮಳೆಯಾಗದಿದ್ದರೆ ಬೆಂಗಳೂರು ಸೇರಿದಂತೆ ಕಾವೇರಿ ನದಿ ಪಾತ್ರದ ನಗರ ಪಟ್ಟಣಗಳಿಗೆ ಕುಡಿಯುವ ನೀರಿಗೂ ಸಂಕಷ್ಟ ಉಂಟಾಗಬಹುದು.

ಜಲ ವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವಾರಾಹಿ ಜಲಾಶಯಗಳಲ್ಲಿ ಕೇವಲ ಶೇ.17 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 22 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಇದೆ. ಈ ಬಾರಿ ಕೇವಲ 3,077 ಕ್ಯೂಸೆಕ್ಸ್ ನಷ್ಟು ನೀರು ಮಾತ್ರ ಜಲಾಶಯಕ್ಕೆ ಹರಿದುಬರುತ್ತಿದೆ. ಕೃಷ್ಣಾ ಕೊಳ್ಳದ ಜಲಾಶಯಗಳಲ್ಲೂ ಒಳಹರಿವಿಲ್ಲ. ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಕೇವಲ ಶೇ.23 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಕಳೆದ ವರ್ಷ 161 ಟಿಎಂಸಿಗೂ ಹೆಚ್ಚು ನೀರು ಈ ಜಲಾಶಯಗಳಲ್ಲಿ ಸಂಗ್ರಹವಾಗಿತ್ತು. ಈ ವರ್ಷ ಕೇವಲ 95 ಟಿಎಂಸಿಯಷ್ಟು ಮಾತ್ರ ನೀರು ಇದೆ. ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಜಲಾಶಯಗಳಿಗೆ ಇನ್ನೂ ಒಳ ಹರಿವೇ ಪ್ರಾರಂಭವಾಗಿಲ್ಲ. ಭದ್ರಾ ಜಲಾಶಯಕ್ಕೆ ಕೇವಲ 128 ಕ್ಯೂಸೆಕ್ಸ್, ತುಂಗಭದ್ರಾ ಜಲಾಶಯಕ್ಕೆ 367 ಕ್ಯೂಸೆಕ್‌್ಸನಷ್ಟು ಮಾತ್ರ ಒಳಹರಿವಿದೆ.

ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ 15 ಟಿಎಂಸಿಯಷ್ಟು ನೀರಿನ ಕಡಿಮೆ ಸಂಗ್ರಹವಿದೆ. ಮುಂಗಾರು ಆರಂಭಗೊಂಡು 2ನೇ ವಾರಕ್ಕೆ ಪದಾರ್ಪಣೆಯಾಗಿದ್ದರೂ ರಾಜ್ಯಾದ್ಯಂತ ವ್ಯಾಪಕ ಹಾಗೂ ಉತ್ತಮ ಮಳೆಯಾಗಿಲ್ಲ. ಕೆಲವೆಡೆ ಮಳೆಯಾಗಿದ್ದರೆ ಮತ್ತೆ ಕೆಲವೆಡೆ ಮಳೆ ಕೊರತೆ ಉಂಟಾಗಿದೆ. ಜಲಾನಯನ ಭಾಗಗಳಲ್ಲೂ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

RELATED ARTICLES

Latest News