ಮಂಡ್ಯ,ಜೂ. 17- ಗೆಳೆಯನನ್ನು ಸ್ನೇಹಿತರೇ ಚಾಕು ಇರಿದು ಕೊಲೆ ಮಾಡಿ, ಶವವನ್ನು ಕಾವೇರಿ ನದಿಗೆ ಎಸೆಯಲು ಬೈಕ್‌ನಲ್ಲಿ ಸಾಗಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ವಶವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭೀಮನಹಳ್ಳಿ ಗ್ರಾಮದ ನಿವಾಸಿ, ಮಹೇಶ್(34) ಕೊಲೆಯಾದ ದುರ್ದೈವಿ. ರಾತ್ರಿ ಮನೆಯಲ್ಲಿದ್ದ ಮಹೇಶ್‌ಗೆ ಆತನ ಸ್ನೇಹಿತರು ಫೋನ್ ಕರೆ ಮಾಡಿ ಹೊರಗೆ ಕರೆಸಿಕೊಂಡು ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು, ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಮುಂದೆ ಅರಣ್ಯಪ್ರದೇಶ ಅಥವಾ ಕಾವೇರಿ ನದಿಗೆ ಎಸೆಯಲು ಹಂತಕರು ಸಂಚು ರೂಪಿಸಿದ್ದರು. ಅದರಂತೆ ಇಬ್ಬರು ಆರೋಪಿಗಳು ಮಹೇಶ್ ಶವವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಳವಳ್ಳಿ ಮಾರ್ಗವಾಗಿ ಕೊಳ್ಳೇಗಾಲ ರಸ್ತೆಯ ಕಡೆಗೆ ಹೋಗುತ್ತಿದ್ದರು.
ಈ ವೇಳೆ ಮಳವಳ್ಳಿ ಪಟ್ಟಣದ ಹೊರವಲಯದ ಕೆಇಬಿ ಕಚೇರಿ ಬಳಿ ಪೆಟ್ರೋಲ್ ಖಾಲಿಯಾಗಿ ಬೈಕ್ ನಿಂತುಬಿಟ್ಟಿದೆ. ಬೈಕ್‌ನ ಮಧ್ಯೆ ಕುಳಿತ್ತಿದ್ದ ವ್ಯಕ್ತಿ ರಕ್ತಸಿಕ್ತವಾಗಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಅಪಘಾತದಲ್ಲಿ ಸ್ನೇಹಿತ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಸಹಾಯ ಮಾಡಿ ಎಂದು ನಂಬಿಸಿದ್ದಾರೆ.
ಕೂಡಲೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಶವದ ಸ್ಥಿತಿ ಹಾಗೂ ಆರೋಪಿಗಳ ವರ್ತನೆ ಕಂಡು ಅನುಮಾನಗೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಳವಳ್ಳಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಬಿ.ಎಸ್.ಶ್ರೀಧರ್ ಹಾಗೂ ಕಿರುಗಾವಲು ಪಿಎಸ್‌ಐ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
