Homeಜಿಲ್ಲಾ ಸುದ್ದಿಗಳುಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 48 ಗಂಟೆಯಲ್ಲಿ 12ಕ್ಕೂ ಹೆಚ್ಚು ಮಂದಿ ಸಾವು..!

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 48 ಗಂಟೆಯಲ್ಲಿ 12ಕ್ಕೂ ಹೆಚ್ಚು ಮಂದಿ ಸಾವು..!

More than 12 people die in 48 hours at Jayadeva Hospital in Mysore

ಮೈಸೂರು, ಜೂ.17- ನಗರದ ಕೆ.ಆರ್‌.ಎಸ್‌‍ ರಸ್ತೆಯಲ್ಲಿರುವ ಪ್ರಸಿದ್ಧ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 48 ಗಂಟೆಗಳಲ್ಲಿ ಆಸ್ಪತ್ರೆಯಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸರಣಿ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆಸ್ಪತ್ರೆಯೊಳಗಿನ ಪರಿಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಈಗ ತೀವ್ರ ಸಂಚಲನ ಮೂಡಿಸಿದೆ.

ರಾತ್ರಿ ಪಾಳಿಯಲ್ಲಿ ಹಿರಿಯ ವೈದ್ಯರೇ ಇರುವುದಿಲ್ಲ. ಬೆಳಿಗ್ಗೆ ಪಾಳಿಯಲ್ಲೂ ಸರಿಯಾದ ಸಮಯಕ್ಕೆ ವೈದ್ಯರು ಬರುವುದಿಲ್ಲ. ಎಮರ್ಜೆನ್ಸಿ ಕೇಸ್‌‍ ನೋಡೋರು ಯಾರೂ ಇಲ್ಲ ಎಂದು ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೃದಯಾಘಾತವಾಗಿ ಬಂದವರಿಗೆ ಗೋಲ್ಡನ್‌ ಅವರ್‌ನಲ್ಲಿ (ಅತಿ ಮುಖ್ಯ ಅವಧಿ) ಚಿಕಿತ್ಸೆ ಸಿಗಬೇಕು. ಆದರೆ ಇಲ್ಲಿ ವೈದ್ಯರು ಸಿಗುವುದೇ ಪುಣ್ಯ ಎಂಬಂತಾತಿದೆ. ನರ್ಸ್‌ಗಳೇ ಎಲ್ಲವನ್ನೂ ನೋಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಕಿಡಿಕಾರಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8ರವರೆಗೆ ವಾರ್ಡ್‌ನಲ್ಲಿ ಯಾವುದೇ ಹಿರಿಯ ವೈದ್ಯರು ಲಭ್ಯವಿರುವುದಿಲ್ಲ. ಬೆಳಿಗ್ಗೆ ಪಾಳಿಯಲ್ಲಿ ವೈದ್ಯರು 9.30 ಅಥವಾ 10 ಗಂಟೆಯಾದರೂ ರೌಂಡ್‌ಗೆ ಬರುವುದಿಲ್ಲ. ತುರ್ತು ವಿಭಾಗಕ್ಕೆ ಬರುವ ಗಂಭೀರ ರೋಗಿಗಳನ್ನು ತಕ್ಷಣವೇ ತಪಾಸಣೆ ನಡೆಸಲು ವೈದ್ಯರ ಕೊರತೆಯಿದೆ ಎಂದು ದೂರಿದ್ದಾರೆ.

ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ 2 ದಿನಗಳಲ್ಲಿ 12ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ ಎಂಬ ಎಲ್ಲಾ ಆರೋಪಗಳನ್ನು ಜಯದೇವ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ಆಸ್ಪತ್ರೆಯಲ್ಲಿ 24*7 ತುರ್ತು ಸೇವೆ ಲಭ್ಯವಿದೆ. ಪ್ರತಿ ಪಾಳಿಯದಲ್ಲೂ ಡ್ಯೂಟಿ ವೈದ್ಯರು, ಕಾರ್ಡಿಯಾಲಜಿಸ್ಟ್‌ ಹಾಗೂ ಪಿಜಿ ವೈದ್ಯರು ಇರುತ್ತಾರೆ. 12 ಮಂದಿಯ ಸಾವಾಗಿರುವುದು ನಿಜ. ಆದರೆ ಅವರೆಲ್ಲರೂ ಕೊನೆಯ ಹಂತದಲ್ಲಿ ಅತಿ ಗಂಭೀರ ಸ್ಥಿತಿಯಲ್ಲಿ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ದಾಖಲಾದವರಾಗಿದ್ದಾರೆ. ಆಸ್ಪತ್ರೆಯಲ್ಲಿ ಸಂಭವಿಸುವ ಪ್ರತಿ ಸಾವಿಗೂ ಡೆತ್‌ ಆಡಿಟ್‌ ನಡೆಯುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು ಮಾಡಿರುವ ವಿಡಿಯೋದಲ್ಲಿ ಕಂಡುಬಂದ ಘಟನೆಯ ಸಮಯದ ಡ್ಯೂಟಿ ರೋಸ್ಟರ್‌ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ ಯಾರಾದರೂ ಕರ್ತವ್ಯಲೋಪ ಎಸಗಿರುವುದು ಸಾಬೀತಾದರೆ ದಯೆ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿಗಳು ಪ್ರಕರಣದಲ್ಲಿ ನೇರವಾಗಿ ಮಧ್ಯಪ್ರವೇಶಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿರುವ ಡಿಸಿ, 24 ಗಂಟೆಯೊಳಗೆ ಆಸ್ಪತ್ರೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಖಡಕ್‌ ಸೂಚನೆ ನೀಡಿದ್ದಾರೆ.

ರೋಸ್ಟರ್‌ ಪ್ರಕಾರ ವೈದ್ಯರು ಹಾಜರಿದ್ದರೇ? ಸಿಸಿಟಿವಿ ದೃಶ್ಯಾವಳಿಗಳು ಏನು ಹೇಳುತ್ತವೆ? ಮತ್ತು ಮೃತರ ಕೇಸ್‌‍ಶೀಟ್‌ಗಳಲ್ಲಿ ಏನಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಸತ್ಯಾಂಶ ಹೊರತರುತ್ತೇವೆ. ಒಂದು ವೇಳೆ ವೈದ್ಯರ ಕೊರತೆ ಇರುವುದು ಕಂಡುಬಂದರೆ ತಕ್ಷಣವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಮೈಸೂರಿನ ಜಯದೇವ ಆಸ್ಪತ್ರೆಯ ವಿಭಾಗದಲ್ಲಿ ಮಂಜೂರಾದ ಒಟ್ಟು 42 ವೈದ್ಯರ ಹುದ್ದೆಗಳಲ್ಲಿ ಸದ್ಯ 11 ಹುದ್ದೆಗಳು ಖಾಲಿ ಇವೆ. 350 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಗೆ ಪ್ರತಿದಿನ ಸರಾಸರಿ 800 ರಿಂದ 900 ಹೊರರೋಗಿಗಳು ಹಾಗೂ 80ರಿಂದ 100 ತುರ್ತು ಪ್ರಕರಣಗಳು ಬರುತ್ತವೆ. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರು ಮಾತನಾಡಿ, ಆಸ್ಪತ್ರೆಯಲ್ಲಿ ಕೆಲಸದ ಒತ್ತಡ ವಿಪರೀತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಡವರ ಪಾಲಿನ ಸಂಜೀವಿನ ಎಂದೇ ಹೆಸರಾಗಿರುವ ಜಯದೇವ ಆಸ್ಪತ್ರೆಯಲ್ಲೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಅತ್ಯಂತ ವಿಷಾದನೀಯ. ಜಿಲ್ಲಾಡಳಿತ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬಂದು, ಆಡಳಿತಾತಕ ಲೋಪದೋಷಗಳು ಸರಿಹೋದರೆ ಮಾತ್ರ ಸಂಸ್ಥೆಯ ಮೇಲಿಟ್ಟಿರುವ ಜನರ ವಿಶ್ವಾಸ ಉಳಿಯಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
spot_img

Latest News