ಬಲಿಯಾ,ಜೂ.18: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಗೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ ದುರ್ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ .
ರಸ್ರಾ ಕೋಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗಢಿಯಾ ರೈಲ್ವೆ ಕ್ರಾಸಿಂಗ್ ಸಮೀಪ ಈ ಅಪಘಾತ ಸಂಭವಿಸಿದೆ. ಪೈಕೌಲಿ ಪತೇಪುರ ಗ್ರಾಮದ ವಿನೋದ್ ಪ್ರಜಾಪತಿ (35)ಅವರ ಪತ್ನಿ ಮುನ್ನಿ ದೇವಿ (30) ಮೃತ ದಂಪತಿ.
ಕೆಲಸ ಮುಗಿಸಿ ಮೌನಲ್ಲಿರುವ ತಮ ಮನೆಗೆ ಮೋಟಾರ್ಸೈಕಲ್ನಲ್ಲಿ ದಂಪತಿ ಹಿಂದಿರುಗುತ್ತಿದ್ದರು. ಈ ವೇಳೆ ರಸ್ರಾ-ಮೌ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಗೆ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಿನೋದ್ ಪ್ರಜಾಪತಿ ಮತ್ತು ಮುನ್ನಿ ದೇವಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ರಸ್ರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ರಾ ಕೋಟ್ವಾಲಿ ಠಾಣೆಯ ಪ್ರಭಾರಿ ಯೋಗೇಂದ್ರ ಬಹದ್ದೂರ್ ಸಿಂಗ್ ಅವರ ಪ್ರಕಾರ, ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
