Homeಆರೋಗ್ಯ / ಜೀವನಶೈಲಿದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ ‘ಬೈಕ್ ಎಬಿಎಸ್‌’ ಉತ್ಪಾದನೆ

ಬೆಂಗಳೂರು: ಭಾರತ ವಿಶ್ವದಲ್ಲೇ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದ್ದು, ಇಲ್ಲಿ ಬರೋಬ್ಬರಿ 2.5 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿವೆ. ದಿನದಿಂದ ದಿನಕ್ಕೆ ಈ ಬೈಕ್‌ಗಳಲ್ಲಿ ಸುರಕ್ಷತಾ ಫೀಚರ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡಿರುವ ಜಾಗತಿಕ ಬ್ರೇಕಿಂಗ್ ತಂತ್ರಜ್ಞಾನದ ದೈತ್ಯ ಕಂಪನಿ ‘ಬ್ರೆಂಬೊ’ ಮತ್ತು ಚೀನಾದ ಖ್ಯಾತ ಕಂಪನಿ ‘ನಿಂಗ್ಬೊ ಸೇಫ್ ಬ್ರೇಕ್ಸ್ ಸಿಸ್ಟಮ್ಸ್’, ಭಾರತದಲ್ಲಿ ಜಂಟಿ ಕಾರ್ಯಾಚರಣೆಗೆ ಮುಂದಾಗಿವೆ.

ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ಮೋಟಾರ್‌ಸೈಕಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಗಳನ್ನು ಉತ್ಪಾದಿಸಲು ಈ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, ‘BRSF ಆಕ್ಟೀವ್ ಸೇಫ್ಟಿ ಸೊಲ್ಯೂಷನ್ಸ್’ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿವೆ.

ಹೇಗಿರಲಿದೆ ಪಾಲುದಾರಿಕೆ? ಈ ಹೊಸ ಜಂಟಿ ಒಪ್ಪಂದದಲ್ಲಿ ಇಟಲಿ ಮೂಲದ ‘ಬ್ರೆಂಬೊ’ ಸಂಸ್ಥೆಯು ಶೇ.60ರಷ್ಟು ಬಹುಪಾಲು ಷೇರನ್ನು ಹೊಂದಿರಲಿದೆ. ಭಾರತದ ಪ್ರಮುಖ ಆಟೋಮೊಬೈಲ್ ಕೈಗಾರಿಕಾ ಕೇಂದ್ರವಾಗಿರುವ ಪುಣೆಯ ‘ಚಾಕನ್’ನಲ್ಲಿ (ಬ್ರೆಂಬೊ ಇಂಡಿಯಾ ಘಟಕದ ಪಕ್ಕದಲ್ಲೇ) ಈ ನೂತನ ಉತ್ಪಾದನಾ ಘಟಕ ತಲೆ ಎತ್ತಲಿದೆ.

ಅತ್ಯಾಧುನಿಕ ಹಾಗೂ ಸ್ವಯಂಚಾಲಿತ ಯಂತ್ರಗಳ ಮೂಲಕ ಇಲ್ಲಿ ಎಬಿಎಸ್ ಅಸೆಂಬ್ಲಿ ಮಾಡಲಾಗುತ್ತದೆ. ಆರಂಭದಲ್ಲಿ ಸುಮಾರು 50 ಜನರಿಗೆ ಉದ್ಯೋಗಾವಕಾಶ ಸಿಗಲಿದ್ದು, ಉತ್ಪಾದನೆ ಹೆಚ್ಚಾದಂತೆ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಲಿದೆ.

ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್‌ ಉತ್ಪಾದನೆ : ಈ ಘಟಕದಲ್ಲಿ ಭಾರತೀಯ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ‘ಸಿಂಗಲ್-ಚಾನೆಲ್’ ಮತ್ತು ‘ಡ್ಯುಯಲ್-ಚಾನೆಲ್’ ಎಬಿಎಸ್ ಸಿಸ್ಟಮ್‌ಗಳನ್ನು ತಯಾರಿಸಿ ದ್ವಿಚಕ್ರ ವಾಹನ ಕಂಪನಿಗಳಿಗೆ ಪೂರೈಸಲಾಗುತ್ತದೆ. ಈಗಾಗಲೇ ಭಾರತದಲ್ಲಿ ಬ್ರೆಂಬೊ ಸಂಸ್ಥೆ ‘BYBRE’ ಬ್ರ್ಯಾಂಡ್‌ನಡಿ ಬ್ರೇಕಿಂಗ್ ಪರಿಹಾರಗಳನ್ನು ನೀಡುತ್ತಿದ್ದು, ಜನಪ್ರಿಯತೆ ಗಳಿಸಿದೆ. ಈ ಹೊಸ ಎಬಿಎಸ್‌ ಸಿಸ್ಟಂಗಳು ಇದನ್ನು ಮತ್ತಷ್ಟು ಬಲಪಡಿಸಲಿದೆ. ಭವಿಷ್ಯದಲ್ಲಿ ಭಾರತದ ರಸ್ತೆ ಸುರಕ್ಷತಾ ನಿಯಮಗಳು ಬದಲಾದಂತೆ, ಅದಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಲೂ ಈ ಜಂಟಿ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.

ಬ್ರೆಂಬೊ ಮೋಟಾರ್‌ಸೈಕಲ್ ವಿಭಾಗದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆಂಡ್ರಿಯಾ ಪಗನೆಸ್ಸಿ ಮಾತನಾಡಿ, “ಭಾರತದಲ್ಲಿ ಬೈಕ್ ಸುರಕ್ಷತಾ ಮಾನದಂಡಗಳನ್ನು ಮೇಲ್ದರ್ಜೆಗೇರಿಸುವ ನಮ್ಮ ಬದ್ಧತೆಯನ್ನು ಈ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ. ಸ್ಥಳೀಯ ಉತ್ಪಾದನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಆಧುನಿಕ ಬ್ರೇಕಿಂಗ್ ಪರಿಹಾರಗಳನ್ನು ನಾವು ಮಾರುಕಟ್ಟೆಗೆ ತರುತ್ತೇವೆ,” ಎಂದಿದ್ದಾರೆ.

ನಿಂಗ್ಬೊ ಸೇಫ್ ಬ್ರೇಕ್ಸ್ ಸಿಸ್ಟಮ್ಸ್‌ನ ಸಂಸ್ಥಾಪಕ ಹಿಲ್ ಶಾನ್ ಪ್ರತಿಕ್ರಿಯಿಸಿ, “ಬ್ರೆಂಬೊ ಜೊತೆಗೂಡಿ, ಭಾರತೀಯ ಬೈಕ್ ಮಾರುಕಟ್ಟೆಯ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಮೇಲೆ ಗಮನ ಕೇಂದ್ರೀಕರಿಸಿ ಉತ್ಪಾದನಾ ವೇದಿಕೆಯನ್ನು ನಾವು ಸ್ಥಾಪಿಸುತ್ತಿದ್ದೇವೆ,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಈ ಎರಡು ಬಲಿಷ್ಠ ಕಂಪನಿಗಳ ಒಕ್ಕೂಟದಿಂದಾಗಿ ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ಉನ್ನತ ದರ್ಜೆಯ ಬ್ರೇಕಿಂಗ್ ತಂತ್ರಜ್ಞಾನ ಲಭ್ಯವಾಗಲಿದ್ದು, ಅಪಘಾತಗಳನ್ನು ತಡೆಯುವಲ್ಲಿ ಇದು ಬಹುದೊಡ್ಡ ಪಾತ್ರ ವಹಿಸಲಿದೆ.

RELATED ARTICLES

Latest News