Homeಬೆಂಗಳೂರುಕೇರಳ ವ್ಯಾಪಾರಿಗಳಿಂದ 20 ಲಕ್ಷ ದೋಚಿ ಸಿಐಡಿ ಇನ್ಸ್‌ಪೆಕ್ಟರ್ & ಟೀಮ್ ಪರಾರಿ

ಕೇರಳ ವ್ಯಾಪಾರಿಗಳಿಂದ 20 ಲಕ್ಷ ದೋಚಿ ಸಿಐಡಿ ಇನ್ಸ್‌ಪೆಕ್ಟರ್ & ಟೀಮ್ ಪರಾರಿ

ಬೆಂಗಳೂರು, ಜೂ.19- ರಕ್ಷಕರೇ ಭಕ್ಷಕರಾದರೇ ಸಾಮಾನ್ಯ ಜನರಿಗೆ ರಕ್ಷಣೆ ಕೊಡುವವರು ಯಾರು ? ನಗರಕ್ಕೆ ವ್ಯಾಪಾರಕ್ಕೆಂದು ಬರುವ ಹೊರ ರಾಜ್ಯದ ವ್ಯಾಪಾರಿಗಳಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಅವರನ್ನು ಬೆದರಿಸಿ 20 ಲಕ್ಷ ರೂ. ಹಣ ದೋಚಿರುವ ಘಟನೆ ಮಡಿವಾಳ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಡಿವಾಳದ ಸಿಲ್‌್ಕಬೋರ್ಡ್‌ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ಟ್ರೇಡಿಂಗ್‌ ವ್ಯಾಪಾರಿಗಳನ್ನು ಬೆದರಿಸಿರುವ ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದ ದರೋಡೆಕೋರರ ತಂಡ 20 ಲಕ್ಷ ಹಣದೊಂದಿಗೆ ಪರಾರಿಯಾಗಿದೆ.

ದರೋಡೆ ಪ್ರಕರಣದ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಕೇರಳ ವ್ಯಾಪಾರಿಗಳನ್ನು ಬೆದರಿಸಿ 20 ಲಕ್ಷ ರೂ. ದೋಚಿ ಪರಾರಿಯಾಗಿರುವ ಸಿಐಡಿ ಇನ್‌್ಸಪೆಕ್ಟರ್‌ ನೇತೃತ್ವದ ತಂಡದ ಇಬ್ಬರು ಸದಸ್ಯರನ್ನು ಬಂಧಿಸಿ ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆ ನಡೆದಿದ್ದು ಹೀಗೆ: ನಗರದಲ್ಲಿ ವ್ಯಾಪಾರಕ್ಕೆಂದು ಬಂದಿದ್ದ ಕೇರಳ ವ್ಯಾಪಾರಿಗಳ ತಂಡ ಮಡಿವಾಳದ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಇದರ ಮಾಹಿತಿ ಅರಿತ ಸಿಐಡಿ ಇನ್‌್ಸಪೆಕ್ಟರ್‌ ಹಾಗೂ ನಾಲ್ಕು ಮಂದಿ ದರೋಡೆಕೋರರು ಹೋಟೆಲ್‌ ಬಳಿಗೆ ಬಂದರು. ಇನ್ಸ್‌ಪೆಕ್ಟರ್ ಜೀಪಿನಲ್ಲೇ ಕುಳಿತಿದ್ದಾಗ ಉಳಿದ ನಾಲ್ವರು ದರೋಡೆಕೋರರು ಇನ್ಸ್‌ಪೆಕ್ಟರ್ ಐಡಿ ಕಾರ್ಡಿನೊಂದಿಗೆ ವ್ಯಾಪಾರಿಗಳು ತಂಗಿದ್ದ ರೂಮ್‌ಗೆ ಹೋಗಿ ನೀವು ಕಾನೂನುಬಾಹಿರವಾಗಿ ಟ್ರೇಡಿಂಗ್‌ ನಡೆಸುತ್ತಿದ್ದೀರಾ ಎಂದು ಬೆದರಿಸಿ ಅವರ ಬಳಿ ಇದ್ದ 20 ಲಕ್ಷ ರೂ.ಗಳನ್ನು ಪಡೆದುಕೊಂಡು ಹೊರ ಬಂದಿದ್ದಾರೆ. ನಂತರ ಸಿಐಡಿ ಪೊಲೀಸರ ತಂಡ ಜೀಪಿನಲ್ಲಿ ಪರಾರಿಯಾಗಿದೆ. ಆದರೆ, ದರೋಡೆಕೋರರ ವರ್ತನೆಯಿಂದ ಅನುಮಾನಗೊಂಡ ಕೇರಳ ವ್ಯಾಪಾರಿಗಳು ಸಮೀಪದ ಮಡಿವಾಳ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಮಡಿವಾಳ ಪೊಲೀಸರು ತನಿಖೆ ಚುರುಕುಗೊಳಿಸಿ, ಹೋಟೆಲ್‌ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರು ಜೀಪಿನಲ್ಲಿ ಬಂದಿರುವುದು ಪತ್ತೆಯಾಗಿದೆ ತಕ್ಷಣ ಕಾರ್ಯಚರಣೆಗೆ ಇಳಿದ ಪೊಲೀಸರು ರಾಬರಿಗೆ ಬಳಸಿದ್ದ ಜೀಪ್‌ ಹಾಗೂ ಇಬ್ಬರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ತೀವ್ರಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಬರಿ ತಂಡದ ನೇತೃತ್ವವಹಿಸಿದ್ದ ಸಿಐಡಿ ಇನ್ಸ್‌ಪೆಕ್ಟರ್ ಹಾಗೂ ಇತರ ಇಬ್ಬರು ದರೋಡೆಕೋರರು ನಾಪತ್ತೆಯಾಗಿದ್ದಾರೆ. ರಕ್ಷಕರ ವೇಷದಲ್ಲಿ ಭಕ್ಷಕರಾಗಿ ವರ್ತಿಸುತ್ತಿದ್ದ ಸಿಐಡಿ ತಂಡದ ಬಂಧನಕ್ಕೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.

ತಂಡ ರಚನೆ: ಕೇರಳ ವ್ಯಾಪಾರಿಗಳನ್ನು ವಂಚಿಸಿ 20 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿರುವ ರಾಬರಿಕೋರರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ವಿಶೇಷ ಪೊಲೀಸರಿಗೆ ಈಗಾಗಲೇ ರಾಬರಿಕೋರರ ಬಗ್ಗೆ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಅವರನ್ನು ಬಂಧಿಸಲಿದ್ದಾರೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News