ಬೆಂಗಳೂರು, ಜೂ. 19- ವಿಧಾನ ಪರಿಷತ್ತಿನ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ 2ನೇ ಹಂತದ ವಿಸ್ತರಣೆಯ ಚರ್ಚೆಗಳು ಆರಂಭಗೊಂಡಿದ್ದು, ಅಲ್ಪಸಂಖ್ಯಾತರ ಪೈಕಿ ಮುಸ್ಲಿಂ ಪ್ರಾಬಲ್ಯಕ್ಕೆ ಭಾರೀ ಪೈಪೋಟಿಗಳು ನಡೆಯುತ್ತಿವೆ. ಹದಿನಾರನೇ ವಿಧಾನಸಭೆಗೆ 10 ಮಂದಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಅಷ್ಟೂ ಮಂದಿ ಕಾಂಗ್ರೆಸ್ ಪಕ್ಷದವರೇ ಆಗಿರುವುದು ವಿಶೇಷ. ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ನೀಡಿರಲಿಲ್ಲ, ಜೆಡಿಎಸ್‌ಯಿಂದ ಕೆಲವರಿಗೆ ಬಿ ಫಾರಂ ನೀಡಲಾಗಿತ್ತಾದರೂ ಯಾರೂ ಗೆದ್ದಿಲ್ಲ.
ಕಾಂಗ್ರೆಸ್‌ನಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಆಸಿಫ್ ಸೇಠ್, ಕಲ್ಬುರ್ಗಿ ಉತ್ತರ ಕ್ಷೇತ್ರದಲ್ಲಿ ಕನೀಜ್ ಫಾತಿಮಾ, ಬೀದರ್‌ನಲ್ಲಿ ರಹೀಂಖಾನ್, ಬೆಂಗಳೂರಿನ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್, ಶಾಂತಿನಗರದಲ್ಲಿ ಎನ್.ಎ.ಹ್ಯಾರೀಸ್, ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಖಾನ್, ರಾಮನಗರದಲ್ಲಿ ಎಚ್.ಎ.ಇಕ್ಬಾಲ್‌ಹುಸೇನ್, ಮಂಗಳೂರಿನಲ್ಲಿ ಯು.ಟಿ.ಖಾದರ್, ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಖಾನ್, ಅಹಮದ್ ಖಾನ್, ಪಠಾಣ್ ಗೆಲುವು ಸಾಧಿಸಿದ್ದಾರೆ.
ಈ 10 ಮಂದಿ ಮುಸ್ಲಿಂ ಶಾಸಕರ ಪೈಕಿ ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್, ರಹೀಂಖಾನ್ ಸಚಿವರಾಗಿದ್ದರು.
ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದು, ಡಿ.ಕೆ.ಶಿವಕುಮಾರ್ ಅವರ ವಿರುದ್ಧವೇ ಕೆಲವು ಸಂದರ್ಭಗಳಲ್ಲಿ ಹೇಳಿಕೆ ನೀಡುವ ಮೂಲಕ ಸವಾಲು ಎಸೆದಿದ್ದರು. ಮುಸ್ಲಿಂ ಸಮುದಾಯಕ್ಕೆ ತಾವೇ ಏಕಮೇವಾದ್ವಿತೀಯ ನಾಯಕ ಎಂಬಂತೆ ಬಿಂಬಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್ ಆರಂಭದಿಂದಲೂ ಜಮೀರ್ ಮೇಲೆ ಒಂದು ಕಣ್ಣಿಟ್ಟಿದ್ದರು. ಶಿಗ್ಗಾಂವಿಯ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೇ ಗೆಲ್ಲಿಸಿಕೊಂಡು ಬರುವುದಾಗಿ ಜಮೀರ್ ಹೇಳಿಕೊಂಡು ತಿರುಗುತ್ತಿದ್ದರು. ಅದರಂತೆ ಯಾಸಿರ್ ಪಠಾಣ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ಪುತ್ರನನ್ನೇ ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಇದರಿಂದ ಮತ್ತಷ್ಟು ಉತ್ತೇಜಿತರಾದಂತೆ ಕಂಡು ಬಂದ ಜಮೀರ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ್ತೇ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು.
ಸುದೀರ್ಘ ಕಾಲ ಪಕ್ಷವನ್ನು ಪ್ರತಿನಿಧಿಸಿದ್ದ ಪಕ್ಷದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡಲು ವರಿಷ್ಠರು ತೀರ್ಮಾನಿಸಿದಾಗ, ಜಮೀರ್ ತಿರುಗಿ ಬಿದ್ದಿದ್ದರು. ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ನೆಪದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರದಿಂದ ದೂರ ಉಳಿದಿದ್ದರು. ಮುಸ್ಲಿಮರ ಬಾಹುಳ್ಯ ಇರುವ ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡರೆ, ಪಕ್ಷಕ್ಕೆ ತಾವು ಅನಿವಾರ್ಯ ಎಂಬ ಸಂದೇಶ ರವಾನೆಯಾಗುತ್ತದೆ ಎಂಬುವುದು ಜಮೀರ್ ಅವರ ಲೆಕ್ಕಾಚಾರವಾಗಿತ್ತು. ಆದರೆ ಅಲ್ಲಿ ಸಮರ್ಥ್ ಶ್ಯಾಮನೂರು ಗೆಲುವು ಮೂಲಕ ಜಮೀರ್ ಅವರ ಅಂದಾಜುಗಳು ತಲೆ ಕೆಳಗಾದವು.
ಡಿ.ಕೆ.ಶಿವಕುಮಾರ್ ಅವರ ಹೊಸ ಸರ್ಕಾರದಲ್ಲಿ ಜಮೀರ್ ಸಂಪುಟದಿಂದ ಹೊರಗುಳಿದಿದ್ದಾರೆ. ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿ, ಕಾಂಗ್ರೆಸ್ ನಾಯಕರು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಜಮೀರ್ ಅವರಿಗೆ ಅರ್ಧಚಂದ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಜಮೀರ್ ಅವಕಾಶ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಕಾಂಗ್ರೆಸ್‌ನಲ್ಲೇ ಇರುವ ಮುಸ್ಲಿಂ ನಾಯಕರು ಟಕ್ಕರ್ ನೀಡುತ್ತಿದ್ದಾರೆ. ಮಾಜಿ ಸಚಿವರಾದ ತನ್ವೀರ್ ಸೇಠ್, ರಹೀಂಖಾನ್ ಮರಳಿ ಸಂಪುಟ ಸೇರುವ ಹವಣಿಕೆಯಲ್ಲಿದ್ದಾರೆ.
ಮೈಸೂರಿನಿಂದ ಈಗಾಗಲೇ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅದೇ ಜಿಲ್ಲೆಯ ತನ್ವೀರ್ ಸೇಠ್‌ಗೆ ಅವಕಾಶ ನೀಡಿದರೆ, ತಮ ಪುತ್ರನ ರಾಜಕೀಯ ಶ್ರೇಯಸ್ಸಿಗೆ ತೊಡಕ್ಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ತೊಡಗಿದ್ದಾರೆ ಎನ್ನಲಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಲಿಂಗಾಯತ ಸಮುದಾಯದ ಶರಣಪ್ರಕಾಶ್ ಪಾಟೀಲ್ ಸಚಿವರಾಗಿದ್ದಾರೆ. ಹೀಗಾಗಿ ಕನೀಜ್ ಫಾತಿಮಾ ಅವರಿಗೆ ಅವಕಾಶ ಸಿಗುವುದು ಕಷ್ಟಸಾಧ್ಯವಾಗಿದೆ. ಇಕ್ಬಾಲ್ ಹುಸೇನ್, ಯಾಸೀರ್ ಪಠಾಣ್, ಆಸೀಫ್ ಸೇಠ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಹೀಗಾಗಿ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
ಇನ್ನು ಎನ್.ಎ.ಹ್ಯಾರೀಸ್ ಮತ್ತು ರಿಜ್ವಾನ್ ಅರ್ಷದ್ ನಡುವೆ ಭಾರೀ ಪೈಪೋಟಿ ಇದೆ. ಎನ್.ಎ.ಹ್ಯಾರೀಸ್ 4ನೇ ಬಾರಿ ಶಾಸಕರಾಗಿದ್ದು, ಬಿಡಿಎ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ರಿಜ್ವಾನ್ ಅರ್ಷದ್ ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಬೆಳೆದು ಬಂದ ನಾಯಕರು. ಮೂಲತಃ ಮೈಸೂರಿನವರಾಗಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 2 ಬಾರಿ ಸ್ಪರ್ಧಿಸಿದ್ದರು.
2029ರಲ್ಲಿ ರೋಷನ್ ಬೇಗ್ ಅವರ ಆತುರದ ರಾಜೀನಾಮೆಯಿಂದ ತೆರವಾದ ಶಿವಾಜಿನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2023ರಲ್ಲೂ ಮರು ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ಶಾಸಕರಾಗಿರುವ ಅವರು, ಸಂಪುಟ ಸೇರಲು ತೀವ್ರ ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ರಿಜ್ವಾನ್ ಕಾಣಿಸಿಕೊಂಡಿದ್ದಾರೆ.
ವಿಧಾನಸಭೆಯ ಶಾಸಕರ ಜೊತೆಗೆ ವಿಧಾನ ಪರಿಷತ್ತಿನ ಸದಸ್ಯರು ಕೂಡ ತೀವ್ರ ಪೈಪೋಟಿ ನೀಡಲಾರಂಭಿಸಿದ್ದಾರೆ. ಸಲೀಂ ಅಹಮದ್ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾಗಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಬೆಳೆದು ಬಂದಿರುವ ಸಲೀಂ, ಡಿ.ಕೆ.ಶಿವಕುಮಾರ್ ಅವರ ಸಮಕಾಲಿನರು. ಇತ್ತೀಚೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಮೀರ್ ಅವರಿಗೆ ಪರ್ಯಾಯವಾಗಿ ಸಲೀಂ ಮತ್ತು ರಿಜ್ವಾನ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು.
ಒಟ್ಟು ವಿಧಾನಸಭೆಯ ಸಂಖ್ಯಾಬಲದಲ್ಲಿ ಮುಸ್ಲಿಂ ಶಾಸಕರ ಪಾಲು ಶೇ.4 ಕ್ಕಿಂತಲೂ ಹೆಚ್ಚಿದೆ. ಹೀಗಾಗಿ ಸಂಪುಟದಲ್ಲಿ ಮೂವರಿಗಾದರೂ ಅವಕಾಶ ನೀಡಬೇಕೆಂಬುದು ಮುಸ್ಲಿಂ ಮುಖಂಡರ ಹಕ್ಕೋತ್ತಾಯ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಯು.ಟಿ.ಖಾದರ್ ಜೊತೆಗೆ ಮತ್ತೊಂದು ಸ್ಥಾನ ನೀಡುವುದೇ ತ್ರಾಸದ ಕೆಲಸವಾಗಿದೆ. ದೊರೆಯಬಹುದಾದ ಒಂದು ಸ್ಥಾನಕ್ಕೆ ಜಮೀರ್, ರಿಜ್ವಾನ್, ತನ್ವೀರ್, ಹ್ಯಾರೀಸ್, ರಹೀಂಖಾನ್ ನಡುವೆ ಭಾರೀ ಪೈಪೋಟಿಗಳಿವೆ. ಡಿ.ಕೆ.ಶಿವಕುಮಾರ್ ಅವರು ತಮ ಆಪ್ತ ಹ್ಯಾರೀಸ್‌ಗೆ ಮಣೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
