Homeಇದೀಗ ಬಂದ ಸುದ್ದಿಸಿಎಂ ಮೊದಲ ಚಮಕ್‌ಗೆ ಬೆದರಿದ ದೋಸ್ತಿಗಳು.. ರಾಜಕೀಯ ಸಂಘರ್ಷಕ್ಕೆ ಪಂಥಾಹ್ವಾನ ಕೊಟ್ಟ ಡಿಕೆ

ಸಿಎಂ ಮೊದಲ ಚಮಕ್‌ಗೆ ಬೆದರಿದ ದೋಸ್ತಿಗಳು.. ರಾಜಕೀಯ ಸಂಘರ್ಷಕ್ಕೆ ಪಂಥಾಹ್ವಾನ ಕೊಟ್ಟ ಡಿಕೆ

ಬೆಂಗಳೂರು, ಜೂ. 19- ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ ಬುಟ್ಟಿಯಿಂದ ನಿರೀಕ್ಷೆ ಮೀರಿದ ಮತಗಳನ್ನು ಕಸಿಯುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರೋಧ ಪಕ್ಷಗಳಿಗೆ ಪಂಥಾಹ್ವಾನ ನೀಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಬಿಜೆಪಿಯ ಅಧಿಕೃತ ಅಭ್ಯರ್ಥಿಯೇ ಸೋಲುವ ಸನ್ನಿವೇಶ ನಿನ್ನೆ ಸೃಷ್ಟಿಯಾಗಿತ್ತು. ಇದು ರಾಷ್ಟ್ರ ಮಟ್ಟದಲ್ಲೇ ಗಮನ ಸೆಳೆದು, ಬಿಜೆಪಿಗೆ ಟಕ್ಕರ್‌ ನೀಡುವ ರಾಜಕೀಯ ದಾಷ್ಠ್ಯವನ್ನು ಸೃಷ್ಟಿಸುತ್ತಿತ್ತು. ದೇಶದ ಎಲ್ಲೆಡೆ ಬಿಜೆಪಿ, ಕಾಂಗ್ರೆಸ್‌‍ ಹಾಗೂ ಇತರ ಪಕ್ಷಗಳ ಮತಬುಟ್ಟಿಗೆ ಕೈ ಹಾಕಿ ಕಂಗಾಲಾಗುವಂತಹ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್‌, ಬಿಜೆಪಿಯ ಕೋಟೆಗೆ ಕನ್ನಹಾಕಿ ಕಂಗಾಲಾಗುವಂತೆ ಮಾಡಿದ್ದಾರೆ.

ಜೆಡಿಎಸ್‌‍ನಿಂದ ಮೂರ್ನಾಲ್ಕು ಮಂದಿ ಶಾಸಕರು ಕಾಂಗ್ರೆಸ್‌‍ನ 5ನೇ ಅಭ್ಯರ್ಥಿಗೆ ಮತದಾನ ಮಾಡಬಹುದು ಎಂಬ ಅಂದಾಜುಗಳಿದ್ದವು. ಆದರೆ 4 ಮಂದಿ ಮತ ಹಾಕಿರುವುದು ದಳಪತಿಗಳನ್ನು ಕಂಗಾಲಾಗುವಂತೆ ಮಾಡಿದೆ. ಬಿಜೆಪಿಯನ್ನು ಪಾರ್ಟಿ ವಿತ್‌ ಡಿಫರೆನ್‌್ಸ ಎಂದು ಹೇಳಲಾಗುತ್ತದೆ. ಬಿಜೆಪಿಯ ಶಾಸಕರು, ಕಾರ್ಯಕರ್ತರು ಹಣ, ಅಧಿಕಾರಕ್ಕಿಂತಲೂ ಸೈದ್ಧಾಂತಿಕ ನಿಲುವುಗಳಿಗೆ ಹೆಚ್ಚು ಒತ್ತು ನೀಡುತ್ತಾರೆ ಎಂಬುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಪ್ರತೀತಿ.

ಆದರೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 11 ಮಂದಿ ಕಾಂಗ್ರೆಸ್‌‍ ಅಭ್ಯರ್ಥಿ ಮತ ಹಾಕಿರುವುದು ಕಮಲ ಪಡೆಯನ್ನೂ ವಿಚಲಿತ ಗೊಳಿಸಿದೆ. ಆಡಳಿತಾರೂಢ ಪಕ್ಷಗಳು ಇಂತಹ ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ಶಾಸಕರನ್ನು ಸೆಳೆಯುವುದು, ರಾಜಕೀಯ ಲಾಭ ಮಾಡಿಕೊಳ್ಳುವುದು ಸಹಜ ಮತ್ತು ಸಾಮಾನ್ಯ ಎಂಬುದು ಆಡು ಮಾತು. ಎನ್‌ಡಿಎ ಪ್ರತಿನಿಧಿಸಿದ್ದ ಜೆಡಿಎಸ್‌‍ನ ಅಭ್ಯರ್ಥಿ ಗೋವಿಂದರಾಜ್‌ ಅವರ ಸ್ಪರ್ಧೆ ನೆಪ ಮಾತ್ರಕ್ಕೆ ಸೀಮಿತವಾಗಿದ್ದು, ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಜೆಡಿಎಸ್‌‍ನ ಶಾಸಕರ ಪಕ್ಷ ನಿಷ್ಠೆಯನ್ನು ಪರೀಕ್ಷಿಸಲು ಸ್ಪರ್ಧೆ ಮಾಡಲಾಗಿತ್ತು ಎಂಬೆಲ್ಲಾ ಸಬೂಬುಗಳು ಕೇಳಿ ಬರುತ್ತಿವೆ. ಆದರೆ ಚುನಾವಣೆ ಎಂದ ಮೇಲೆ ಅಲ್ಲಿ ಸೋಲು ಗೆಲುವುಗಳು ಮಾತ್ರ ಮುಖ್ಯವಾಗುತ್ತವೆ. ಉಳಿದೆಲ್ಲಾ ಕಾರಣಗಳು, ಸಬೂಬುಗಳು ನಗಣ್ಯವಾಗುತ್ತದೆ. ಹಾಗೆ ನೋಡಿದರೆ, ಜೆಡಿಎಸ್‌‍ ಬಿಜೆಪಿ ಎರಡು ಪಕ್ಷಗಳಿಗೂ ವಿಧಾನಪರಿಷತ್‌ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೆಪಿಸಿಸಿಯ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರ ಜೋಡಿಗೆ 5ನೇ ಅಭ್ಯರ್ಥಿಯ ಗೆಲುವು ಸವಾಲಾಗಿತ್ತು. ಡಿ.ಕೆ.ಶಿವಕುಮಾರ್‌ ಅವರು ತಮ ಆಪ್ತ ವಿನಯ್‌ ಕಾರ್ತಿಕ್‌ ಅವರನ್ನೇ ಕಣಕ್ಕಿಳಿಸಿದ್ದರಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಆ ಒತ್ತಡವನ್ನು ಎಲ್ಲಿಯೂ ತೋರಿಸಿಕೊಳ್ಳದೇ ಡಿ.ಕೆ.ಶಿವಕುಮಾರ್‌ ಶಾಂತ ಸ್ಥಿತಿಯಲ್ಲಿದ್ದು, ಒಳಗೊಳಗೆ ರಣತಂತ್ರಗಳನ್ನು ರೂಪಿಸಿದ್ದಾರೆ.

ಉಚ್ಛಾಟಿತ ಶಾಸಕರಾದ ಎಸ್‌‍.ಟಿ.ಸೋಮಶೇಖರ್‌, ಶಿವರಾಮ್‌ಹೆಬ್ಬಾರ್‌ ಮೂಲಕ ಬಿಜೆಪಿ ಮತ್ತು ಜೆಡಿಎಸ್‌‍ನ ಘಟಾನುಘಟಿ ನಾಯಕರನ್ನೇ ಕಾಂಗ್ರೆಸ್‌‍ಗೆ ಮತ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ ಫಲಿತಾಂಶದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ತಾವು ತೋಳ್ಬಲ, ಹಣಬಲವನ್ನು ಎದುರಿಸಬೇಕಾಗಿರುವುದು ಅನಿವಾರ್ಯ ಎಂದು ಸೂಚನೆ ನೀಡಿದ್ದಾರೆ.

ಈ ಹಿಂದೆ ಕಾಂಗ್ರೆಸ್‌‍ ಪಕ್ಷದಲ್ಲೂ ಅಡ್ಡ ಮತದಾನ ನಡೆದು ಅಧಿಕೃತ ಅಭ್ಯರ್ಥಿ ಸೋತು ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದರು. ಆಗ ಅಡ್ಡ ಮತದಾನದ ಹಿಂದೆ ನಿಂತಿದ್ದ ಸಿದ್ದರಾಮಯ್ಯ ಅವರ ನಾಯಕತ್ವ ಗಟ್ಟಿಯಾಗಿತ್ತು. ಭವಿಷ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮಟ್ಟಿಗೂ ಅದು ಬೆಳೆದಿತ್ತು. ಈಗ ಬಿಜೆಪಿಯಲ್ಲಿ ಅಡ್ಡ ಮತದಾನವಾಗಿರುವುದು ನಾಯಕತ್ವದ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಕೇಂದ್ರದ ಕೆಂಗಣ್ಣು:
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷಗಳ ಸಮಯಾವಕಾಶ ಇದೆ. ಆದರೆ ಈಗಾಗಲೇ ಬಿಜೆಪಿ ವಿಧಾನಸಭೆ ಚುನಾವಣೆಯ ತಾಲೀಮು ಆರಂಭಿಸಿದೆ. ಕರ್ನಾಟಕವನ್ನು ಕೇಂದ್ರ ಬಿಜೆಪಿ ನಾಯಕರು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಂತಿದೆ. ಕೇಂದ್ರ ಸಚಿವರುಗಳ ರಾಜ್ಯ ಪ್ರವಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಮೊದಲು ವಿವಿಧ ರಾಜ್ಯಗಳ ಚುನಾವಣೆ ಕಾರಣಕ್ಕಾಗಿ ಆಕಡೆಗೆ ಗಮನ ನೀಡಿದ್ದ ಕೇಂದ್ರ ಸಚಿವರು, ಕರ್ನಾಟಕದತ್ತ ಮುಖ ಹಾಕಿರಲಿಲ್ಲ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಭವಿಷ್ಯದ ಸವಾಲುಗಳನ್ನು ಅಂದಾಜಿಸಿ, ಕರ್ನಾಟಕದತ್ತ ಹೆಚ್ಚಿನ ಗಮನ ಆರಂಭಿಸಲಿದ್ದಾರೆ. ಇದಕ್ಕೆ ತಾಳಮೇಳ ಎಂಬಂತೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌, ಬಿಜೆಪಿಯ 7 ಶಾಸಕರನ್ನು ಸೆಳೆಯುವ ಮೂಲಕ ಮುಂದಿನ ರಾಜಕೀಯ ಸಂಘರ್ಷಕ್ಕೆ ಪಂಥಾಹ್ವಾನ ನೀಡಿದ್ದಾರೆ.

RELATED ARTICLES
spot_img

Latest News