ಬೆಂಗಳೂರು,ಜೂ.19- ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಕೆಲವು ಶಾಸಕರು ಅಡ್ಡ ಮತದಾನ ನಡೆಸಿರುವ ಹಿನ್ನೆಲೆಯಲ್ಲಿ ಸತ್ಯಸತ್ಯತೆ ತಿಳಿಯಲು ಬಿಜೆಪಿ ಶೋಧನಾ ತಂಡವನ್ನು ರಚಿಸಿದೆ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಗೂ ಶಾಸಕ ಮಹೇಶ್ ತೆಂಗಿನಕಾಯಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈ ಮೂವರು ನೇತೃತ್ವದ ಸಮಿತಿಯು ವಿಧಾನಪರಿಷತ್ನ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಮಾಡಿರುವ ಕುರಿತು ಇದೇ 25ರೊಳಗೆ ವರದಿಯನ್ನು ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚಿಸಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಕೇಂದ್ರ ವರಿಷ್ಠರು, ಪಕ್ಷದ ಶಿಸ್ತನ್ನು ಮರುಸ್ಥಾಪಿಸಲು ಬಂಡಾಯ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಬಂಡಾಯ ಶಾಸಕರ ವಿರುದ್ಧ ಶಿಸ್ತುಕ್ರಮಕ್ಕೆ ಬಿಜೆಪಿ ಸಿದ್ಧತೆ : ಶಿಸ್ತುಕ್ರಮದ ಭಾಗವಾಗಿ ಉಚ್ಚಾಟನೆ ಅಥವಾ ನೋಟಿಸ್ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಹಿಂದೆ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಂತಹ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿಸಿದ ಮಾದರಿಯಲ್ಲೇ, ಈ ಬಾರಿ ಅಡ್ಡ ಮತದಾನ ಮಾಡಿದ ಶಾಸಕರ ಮೇಲೂ ಇದೇ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರಸ್ತುತ, ಪಕ್ಷದ ವರಿಷ್ಠರು ಈ ಬಗ್ಗೆ ಆಂತರಿಕ ತನಿಖೆ ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ಬಿಜೆಪಿಯ ಕೆಲವು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದು ರಾಜ್ಯ ಬಿಜೆಪಿಗೆ ದೊಡ್ಡ ಹಿನ್ನಡೆಯನ್ನು ತಂದೊಡ್ಡಿದೆ.ಈ ವಿದ್ಯಮಾನವನ್ನು ಬಿಜೆಪಿ ವರಿಷ್ಠರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಡ್ಡ ಮತದಾನ ಮಾಡಿದ ಶಾಸಕರ ವಿವರವನ್ನು ಸಂಗ್ರಹಿಸಿ ರಾಷ್ಟ್ರೀಯ ನಾಯಕರಿಗೆ ವರದಿ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ಬಿಗಿ ತಂತ್ರಗಳನ್ನು ಹೆಣೆದಿತ್ತು. ಪಕ್ಷದ ಎಲ್ಲಾ ಶಾಸಕರಿಗೆ ಕಡ್ಡಾಯವಾಗಿ ವಿಪ್ ಜಾರಿಗೊಳಿಸಲಾಗಿತ್ತು. ಆದರೆ, ಮತ ಎಣಿಕೆಯ ನಂತರ ಬಿಜೆಪಿಯ ಕೆಲವು ಶಾಸಕರು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ನೀಡದೆ, ವಿರೋಧ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಅಡ್ಡ ಮತದಾನವು ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿದೆ. ಪಕ್ಷದ ಆಂತರಿಕ ಶಿಸ್ತನ್ನು ಹದಗೆಡಿಸಿರುವ ಶಾಸಕರನ್ನು ಕೇವಲ ಅಮಾನತುಗೊಳಿಸದೆ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವ ಕುರಿತು ರಾಷ್ಟ್ರೀಯ ನಾಯಕರು ಗಂಭೀರವಾಗಿ ಚರ್ಚಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಶಿಸ್ತು ಪಾಲನೆ ಕಡ್ಡಾಯ ಎಂಬ ಕಠಿಣ ಸಂದೇಶವನ್ನು ಇತರ ಶಾಸಕರಿಗೆ ರವಾನಿಸುವುದು ಹೈಕಮಾಂಡ್ನ ಉದ್ದೇಶವಾಗಿದೆ. ರಾಜ್ಯ ಘಟಕದಿಂದ ಅಡ್ಡ ಮತದಾನ ಮಾಡಿದ ಶಾಸಕರ ಪಟ್ಟಿ ಹಾಗೂ ಅವರ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಮತ್ತು ಸಾಂವಿಧಾನಿಕ ಕ್ರಮಗಳ ಬಗ್ಗೆ ವರದಿಯನ್ನು ಕೇಂದ್ರ ವರಿಷ್ಠರು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ಚುನಾವಣೆಗಳಿಂದಲೂ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಮತ್ತು ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ. ಆಪರೇಷನ್ ಕಮಲ ಅಥವಾ ಇತರ ಮೂಲಗಳಿಂದ ಪಕ್ಷಕ್ಕೆ ಬಂದ ಶಾಸಕರ ನಿಷ್ಠೆಯ ಬಗ್ಗೆ ಪಕ್ಷದೊಳಗೇ ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಾರಿಯ ಅಡ್ಡ ಮತದಾನವು ಪಕ್ಷದ ಸಂಘಟನಾತಕ ವೈಫಲ್ಯವನ್ನೂ ಎತ್ತಿ ತೋರಿಸಿದೆ. ಬಿಜೆಪಿ ಹೈಕಮಾಂಡ್ ಈಗ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಾಗ ಪಕ್ಷದ ಸಂಖ್ಯಾಬಲ ಮತ್ತು ಕಾನೂನು ತೊಡಕುಗಳನ್ನು ಸಹ ಗಮನಿಸಬೇಕಿದೆ.
ಹಿನ್ನೆಲೆ:
ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗಾಗಿ ಮತಗಳ ಕ್ರೋಢೀಕರಣ ಮಾಡಲಾಗಿತ್ತು. ಆದರೆ, ಮೈತ್ರಿ ಅಭ್ಯರ್ಥಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ಸಿಗದಿರುವುದು ಅಡ್ಡ ಮತದಾನ ನಡೆದಿರುವುದನ್ನು ದೃಢಪಡಿಸಿದೆ.
ಅಡ್ಡ ಮತದಾನದ ಆರೋಪ:
ಬಿಜೆಪಿ ತನ್ನ ಶಾಸಕರಿಗೆ ನೀಡಿದ್ದ ಮತಗಳನ್ನು ಮೈತ್ರಿ ಅಭ್ಯರ್ಥಿಗೆ ಚಲಾಯಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅಂದಾಜು 3 ರಿಂದ 6 ಬಿಜೆಪಿ ಶಾಸಕರು ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ (ಅಡ್ಡ ಮತದಾನ ಮಾಡಿದ್ದಾರೆ) ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆಯು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬೆಂಗಳೂರು ನಗರ ಪಾಲಿಕೆ ಚುನಾವಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಇದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ರಾಜಕೀಯ ಬೆಳವಣಿಗೆಯು ರಾಜ್ಯ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಮತ್ತು ಶಿಸ್ತಿನ ಕೊರತೆಯನ್ನು ಎತ್ತಿ ತೋರಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷವು ಯಾವ ರೀತಿಯ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಯಾವ ಶಾಸಕರ ಮೇಲೆ ಕ್ರಮ?
- ಉದಯ ಗರುಡಚಾರ್( ಚಿಕ್ಕಪೇಟೆ)
- ಬೈರತಿ ಬಸವರಾಜ್ ( ಕೆ.ಆರ್ ಪುರಂ)
- ದಿನಕರ್ ಶೆಟ್ಟಿ( ಕುಮಟ)
- ಹೆಚ್.ಕೆ ಸುರೇಶ್ (ಬೇಲೂರು)
- ಚಂದ್ರು ಲಮಾಣಿ (ಶಿರಹಟ್ಟಿ)
