Homeಇದೀಗ ಬಂದ ಸುದ್ದಿಚಿನ್ನ - ಬೆಳ್ಳಿ ಸತತ ಇಳಿಮುಖ

ಚಿನ್ನ – ಬೆಳ್ಳಿ ಸತತ ಇಳಿಮುಖ

ಬೆಂಗಳೂರು, ಜೂ.19- ಕಳೆದ ನಾಲ್ಕು ದಿನಗಳಿಂದ ಚಿನ್ನದ ದರ ನಿರಂತರವಾಗಿ ಕುಸಿತ ಕಂಡಿದೆ. ಅದೇ ರೀತಿ ಬೆಳ್ಳಿದರವೂ ಕುಸಿತವಾಗಿದೆ. ಜೂನ್‌ ತಿಂಗಳ ಆರಂಭದಿಂದಲೂ ಇಳಿಮುಖವಾಗಿದ್ದ ಚಿನ್ನದ ದರ ಜೂ.12 ರಿಂದ ಜೂ.15ರವರೆಗೆ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿತ್ತು. ಅನಂತರ ಇಳಿಮುಖವಾಗಿ ಸಾಗಿದ ಚಿನ್ನದ ದರವು ಇಂದೂ ಕೂಡ ಕುಸಿತ ಕಂಡಿದೆ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 365 ರೂ.ಗಳಷ್ಟು ಇಳಿಕೆಯಾಗಿ 14,586 ರೂ.ಗಳಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 335 ರೂ.ಗಳಷ್ಟು ಕಡಿಮೆಯಾಗಿದ್ದು, 13,370 ರೂ.ಗಳಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 274 ರೂ.ನಷ್ಟು ಇಳಿಕೆಯಾಗಿದ್ದು, 10,939 ರೂ.ನಷ್ಟಿದೆ. ಪ್ಲಾಟಿನಂ ದರವು 10 ಗ್ರಾಂಗೆ 3,040 ರೂ. ಇಳಿಕೆಯಾಗಿದ್ದು, 50,400 ರೂ.ನಷ್ಟಿದೆ.

ಇನ್ನು ಬೆಳ್ಳಿ ದರವು ಕಳೆದೆರಡು ದಿನಗಳಿಂದ ಇಳಿಮುಖದ ಹಾದಿ ಹಿಡಿದಿದೆ. ಜೂನ್‌ ಆರಂಭದಿಂದಲೂ ನಿರಂತರ ಇಳಿಕೆಯತ್ತ ಸಾಗಿದ್ದ ಬೆಳ್ಳಿಯು ಜೂ.12 ರಂದು ಒಂದು ಕೆಜಿಗೆ 10 ಸಾವಿರ ರೂ.ಗಳಷ್ಟು ಏರಿಕೆಯಾಗಿತ್ತು. ಅನಂತರ ಎರಡು ದಿನ ಸ್ಥಿರವಾಗಿದ್ದ ದರವು ಜೂ.15 ರಂದು ಮತ್ತೆ 5 ಸಾವಿರ ರೂ.ನಷ್ಟು ಏರಿಕೆಯಾಗಿತ್ತು. ಅನಂತರ 2 ದಿನ ಸ್ಥಿರವಾಗಿದ್ದ ಬೆಳ್ಳಿದರವು ನಿನ್ನೆ ಒಂದು ಕೆಜಿಗೆ 5 ಸಾವಿರ ರೂ. ಹಾಗೂ ಇಂದು 10 ಸಾವಿರ ರೂ.ಗಳಷ್ಟು ಇಳಿಕೆಯಾಗಿದೆ. ಪ್ರಸ್ತುತ 2,50,000 ರೂ.ನಷ್ಟಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗುವ ವಿದ್ಯಮಾನಗಳು ಹಾಗೂ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮ ಚಿನಿವಾರ ಪೇಟೆಯ ಮೇಲೂ ಆಗಲಿದ್ದು, ಆಗಾಗ್ಗೆ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ವ್ಯತ್ಯಾಸಗಳಾಗುವುದು ಸಹಜ ಎಂಬ ಅಭಿಪ್ರಾಯ ವರ್ತಕರಲ್ಲಿದೆ. ಆದರೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ದರಗಳಲ್ಲಿ ತುಸು ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರು ಹಾಗೂ ಗ್ರಾಹಕರಲ್ಲಿ ಸ್ವಲ್ಪ ಸಮಾಧಾನ ತಂದಿದೆ.

RELATED ARTICLES

Latest News