Homeಇದೀಗ ಬಂದ ಸುದ್ದಿಬಿಡದಿ ಟೌನ್‌ಶಿಪ್‌ ಅಧಿಸೂಚನೆ ರದ್ದತಿಗೆ ಜೆಡಿಎಸ್‌‍ ಆಗ್ರಹ

ಬಿಡದಿ ಟೌನ್‌ಶಿಪ್‌ ಅಧಿಸೂಚನೆ ರದ್ದತಿಗೆ ಜೆಡಿಎಸ್‌‍ ಆಗ್ರಹ

ಬೆಂಗಳೂರು, ಜೂ.19- ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌‍ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್‌‍ ನಿಯೋಗ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಿದೆ.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ಗೌಡ, ಬಿಡದಿ ಟೌನ್‌ಶಿಪ್‌ಗೆ 7,500 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು. ಮಾಸಿಕ 6 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ರೇಷೆ, ತೋಟಗಾರಿಕೆ ಅವಲಂಬಿಸಿರುವ ರೈತರು ಟೌನ್‌ಶಿಪ್‌ ಅನ್ನು ವಿರೋಧಿಸುತ್ತಿದ್ದಾರೆ ಎಂದರು. ಟೌನ್‌ಶಿಪ್‌ ವಿರೋಧಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರೈತರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಹಠಕ್ಕೆ ಬಿದ್ದು ಯೋಜನೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದ ಬಿಡಿಎ, ಬಿಎಂಆರ್‌ಡಿಎ, ಕೆಎಚ್‌ಬಿ ಇದ್ದರೂ ಖಾಸಗಿ ಸಹಭಾಗಿತ್ವದಲ್ಲಿ ಟೌನ್‌ಶಿಪ್‌ ಮಾಡಲು ಸರ್ಕಾರ ಮುಂದಾಗಿದೆ. ಖಾಸಗಿಯವರು ಪಡೆಯುವ ಬ್ಯಾಂಕ್‌ ಸಾಲಕ್ಕೆ ಸರ್ಕಾರವೇ ಖಾತ್ರಿ ಕೊಡಬೇಕಿದೆ ಎಂದರು. ಈಗಾಗಲೇ ಆರಂಭಿಸಿದ ಅರ್ಕಾವತಿ, ಶಿವರಾಮ ಕಾರಂತ ಬಡಾವಣೆಗಳೇ ಪೂರ್ಣಗೊಂಡಿಲ್ಲ. ಅಲ್ಲಿ ಜಮೀನು ಕಳೆದುಕೊಂಡವರು ಇನ್ನೂ ಸಂಕಷ್ಟದಲ್ಲಿದ್ದಾರೆ. ಬಿಡದಿ ಭಾಗದ ರೈತರನ್ನು ಟೌನ್‌ಶಿಪ್‌ ಮೂಲಕ ಮತ್ತಷ್ಟು ಸಂಕಷ್ಟದ ಕೂಪಕ್ಕೆ ತಳ್ಳಲಾಗುತ್ತದೆ ಎಂದು ಆರೋಪಿಸಿದರು.

ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ವಾಸ್ತವಾಂಶವನ್ನು ತಿಳಿಸಬೇಕು ಎಂದು ಆಗ್ರಹಿಸಿದ ಅವರು, ಜೂ. 20 ರಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ.ಮಂಜುನಾಥ್‌ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ ಎಂದರು. ಟೌನ್‌ಶಿಪ್‌ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹಾಗೂ ರಾಜ್ಯಪಾಲರಿಗೂ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಈ ಯೋಜನೆಗೆ 33,562 ಕೋಟಿ ರೂ. ವೆಚ್ಚವಾಗಲಿದ್ದು, 10 ಲಕ್ಷಕ್ಕೂ ಹೆಚ್ಚು ಮರಗಳು ನಾಶವಾಗಲಿವೆ. ಈ ಯೋಜನೆ ಮೂಲಕ ರಿಯಲ್‌ ಎಸ್ಟೇಟ್‌ ದಂಧೆ ನಡೆಸಿ ದುಡ್ಡು ಮಾಡುವ ಹುನ್ನಾರ ಅಡಗಿದೆ ಎಂದು ಅವರು ಟೀಕಿಸಿದರು. ಕೇಂದ್ರ ಸಚಿವ ಎಚ್‌ಡಿಕೆ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಅಂಟಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಆರ್‌.ಪ್ರಕಾಶ್‌, ಟಿ.ತಿಮೇಗೌಡ, ಎಚ್‌.ಸಿ.ಕೃಷ್ಣ, ನಟರಾಜ್‌, ಗಂಗಾಧರ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News