Homeಇದೀಗ ಬಂದ ಸುದ್ದಿಬೆಳ್ಳಂ ಬೆಳಿಗ್ಗೆ ದೊಡ್ಡಬಳ್ಳಾಪುರ ರೌಡಿ ಶೀಟರ್‌ಗಳ ಮನೆ ಮೇಲೆ ಪೊಲೀಸರಿಂದ ದಾಳಿ

ಬೆಳ್ಳಂ ಬೆಳಿಗ್ಗೆ ದೊಡ್ಡಬಳ್ಳಾಪುರ ರೌಡಿ ಶೀಟರ್‌ಗಳ ಮನೆ ಮೇಲೆ ಪೊಲೀಸರಿಂದ ದಾಳಿ

ದೊಡ್ಡಬಳ್ಳಾಪುರ, ಜೂ.21- ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೊಡ್ಡಬಳ್ಳಾಪುರ ಪೊಲೀಸ್‌‍ ಉಪವಿಭಾಗದ ವ್ಯಾಪ್ತಿಯ ವಿವಿಧ ಠಾಣೆಗಳ ಪೊಲೀಸರು ಇಂದು ಮುಂಜಾನೆ ದಿಡೀರ್‌ ಕಾರ್ಯಾಚರಣೆ ನಡೆಸಿ 45 ರೌಡಿ ಆಸಾಮಿಗಳ ಮನೆಗಳ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಳಗ್ಗಿನ ಜಾವವೇ ಆರಂಭವಾದ ಈ ಅನಿರೀಕ್ಷಿತ ಕಾರ್ಯಾಚರಣೆ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಅಪರಾಧ ಚಟುವಟಿಕೆಗಳ ಮೇಲಿನ ಪೊಲೀಸ್‌‍ ನಿಗಾ ಮತ್ತಷ್ಟು ಬಿಗಿಯಾಗಿರುವ ಸಂದೇಶವನ್ನು ರವಾನಿಸಿದೆ.

ಪೊಲೀಸ್‌‍ ಮೂಲಗಳ ಪ್ರಕಾರ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 11, ಹೊಸಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2, ನಗರ ಠಾಣೆಯಲ್ಲಿ 7, ದೊಡ್ಡಬೆಳವಂಗಲ ಠಾಣೆಯಲ್ಲಿ 15 ಸೇರಿದಂತೆ ಮಹಿಳಾ ಠಾಣೆ ಹಾಗೂ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ, ಚನ್ನರಾಯಪಟ್ಟಣ, ವಿಜಯಪುರ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳ ಮನೆಗಳನ್ನು ಶೋಧಿಸಲಾಗಿದೆ. ಕಾರ್ಯಾಚರಣೆಯನ್ನು ಯೋಜಿತವಾಗಿ ನಡೆಸಲು ಪ್ರತಿ ಠಾಣೆಯಿಂದ 3 ರಿಂದ 4 ವಿಶೇಷ ತಂಡಗಳನ್ನು ರಚಿಸಿ ಒಂದೇ ಸಮಯದಲ್ಲಿ ವಿವಿಧ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ.

ಈ ಕಾರ್ಯಾಚರಣೆಯ ವೇಳೆ ರೌಡಿ ಶೀಟರ್‌ಗಳ ಪ್ರಸ್ತುತ ಚಟುವಟಿಕೆಗಳು, ಅವರ ಓಡಾಟ, ಸಂಪರ್ಕ ವಲಯ ಹಾಗೂ ಸಮಾಜದಲ್ಲಿ ಅವರ ನಡೆನುಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸವೂ ನಡೆದಿರುವುದಾಗಿ ತಿಳಿದು ಬಂದಿದೆ. ಕೆಲವರ ಮನೆಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ದೊಡ್ಡಬಳ್ಳಾಪುರ ಪೊಲೀಸ್‌‍ ಉಪವಿಭಾಗದ ಡಿವೈಎಸ್‌‍ಪಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕೆಲವು ರೌಡಿ ಆಸಾಮಿಗಳ ಮನೆಗಳಿಗೆ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗುವಂತಹ ನಡೆಗಳಿಗೆ ಅವಕಾಶ ನೀಡಬಾರದು, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಘಟನೆಗಳಲ್ಲಿ ಭಾಗಿಯಾಗಬಾರದು ಹಾಗೂ ಕಾನೂನು ಪಾಲನೆಯೊಂದಿಗೆ ಗೌರವಯುತ ಬದುಕು ಕಟ್ಟಿಕೊಳ್ಳುವಂತೆ ಸಂಬಂಧಿತ ರೌಡಿ ಶೀಟರ್‌ಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಇನ್‌್ಸಪೆಕ್ಟರ್‌ಗಳಾದ ಡಾ. ನವೀನ್‌ ಕುಮಾರ್‌ ಎಂ.ಬಿ., ಅಮರೇಶ್‌ ಗೌಡ, ಕಲ್ಲಪ್ಪ ಖರಾತ, ಮುತ್ತುರಾಜ್‌ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್‌‍ ಸಿಬ್ಬಂದಿಗಳು ಭಾಗವಹಿಸಿದ್ದರು.
ರೌಡಿ ಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಿದ ತಂಡಗಳು, ಅವರ ಹಾಜರಾತಿ ಹಾಗೂ ಚಟುವಟಿಕೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿದ್ದು, ಅಗತ್ಯವಿರುವ ಕಡೆಗಳಲ್ಲಿ ಮುಂದಿನ ನಿಗಾ ಕ್ರಮಗಳಿಗೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

RELATED ARTICLES
spot_img

Latest News