Homeಇದೀಗ ಬಂದ ಸುದ್ದಿವಿಚಾರಣೆಗೆ ಸ್ಪಂಧಿಸದ ಸಿಐಡಿ ಇನ್‌ಸ್ಪೆಕ್ಟರ್‌ : ತಾಂತ್ರಿಕ ಸಾಕ್ಷಿಗಳ ಮೊರೆ ಹೋದ ಪೊಲೀಸರು

ವಿಚಾರಣೆಗೆ ಸ್ಪಂಧಿಸದ ಸಿಐಡಿ ಇನ್‌ಸ್ಪೆಕ್ಟರ್‌ : ತಾಂತ್ರಿಕ ಸಾಕ್ಷಿಗಳ ಮೊರೆ ಹೋದ ಪೊಲೀಸರು

ಬೆಂಗಳೂರು, ಜೂ.21- ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿಐಡಿ ಇನ್‌ಸ್ಪೆಕ್ಟರ್‌ ಮಹೇಶ್‌ ಕನಕಗಿರಿ ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಕಾರಣ ಮಡಿವಾಳ ಉಪವಿಭಾಗದ ಪೊಲೀಸರು ತಾಂತ್ರಿಕ ಸಾಕ್ಷಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮಹೇಶ್‌ ಕನಕಗಿರಿ ಮತ್ತು ಬಂಧಿತರಾಗಿರುವ ಇಬ್ಬರು ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಎಫ್‌ಎಸ್‌‍ಎಲ್‌ಗೆ ಕಳುಹಿಸಿದ್ದಾರೆ.
ದರೋಡೆ ನಡೆದ ಮಡಿವಾಳದ ಸಿಲ್ಕ್ ಬೋರ್ಡ್ ಸಮೀಪವಿರುವ ಖಾಸಗಿ ಹೋಟೆಲ್‌ನ ಹಾಗೂ ಆ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ.

ಆರೋಪಿ ಸಿಐಡಿ ಇನ್‌ಸ್ಪೆಕ್ಟರ್‌ ಮಹೇಶ್‌ ಕನಕಗಿರಿ ವಿಚಾರಣೆ ವೇಳೆ 20 ಲಕ್ಷ ರೂ. ದರೋಡೆ ಬಗ್ಗೆ ನನಗೇನೂ ಗೊತ್ತಿಲ್ಲ, ಕುಪೇಂದ್ರ ರೆಡ್ಡಿ ನನಗೆ ಪರಿಚಯ. ಹಾಗಾಗಿ ನಾನು ಹೋಟೆಲ್‌ ಬಳಿ ಹೋಗಿದ್ದೆ. ನೀವು ಹೇಳಿದಾಗಲೇ ನನಗೆ ದರೋಡೆ ಬಗ್ಗೆ ಗೊತ್ತಾಗಿರುವುದು ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಐಡಿ ಕಾರ್ಡ್‌ ದುರ್ಬಳಕೆ ಬಗ್ಗೆ ಕೇಳಿದಾಗ, ನನ್ನ ಜೀಪಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೇ ಅದನ್ನು ಇವರುಗಳು ತೆಗೆದುಕೊಂಡು ಹೋಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಾನು ದೂರು ಕೊಡುತ್ತೇನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆಂದು ಗೊತ್ತಾಗಿದೆ.

ಬಂಧಿತ ಇಬ್ಬರು ಆರೋಪಿಗಳನ್ನು ವಿಚಾರಣೆ ಮಾಡಿದಾಗ ಇನ್‌ಸ್ಪೆಕ್ಟರ್‌ ಹೇಳಿದಂತೆಯೇ ನಾವು ದರೋಡೆ ಮಾಡಿದ್ದೇವೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಬಂಧಿತವಾಗಿರುವ ಇನ್‌ಸ್ಪೆಕ್ಟರ್‌ ಹಾಗೂ ಇನ್ನಿಬ್ಬರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಲೆ ಮರೆಸಿಕೊಂಡಿರುವ ಉಳಿದ ದರೋಡೆಕೋರರಿಗೆ ಮಡಿವಾಳ ಉಪವಿಭಾಗದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೂವರನ್ನು ಬಂಧಿಸಿರುವ ಪೊಲೀಸರು 14 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES
spot_img

Latest News