Homeರಾಜ್ಯಅರಮನೆ ಮೈದಾನದ ಬೃಹತ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್‌ ಪದಗ್ರಹಣ

ಅರಮನೆ ಮೈದಾನದ ಬೃಹತ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್‌ ಪದಗ್ರಹಣ

ಬೆಂಗಳೂರು, ಜೂ. 21- ಕೆಪಿಸಿಸಿ ಅಧ್ಯಕ್ಷರಾಗಿ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದ ಸಚಿವರು, ಶಾಸಕರು ಸೇರಿದಂತೆ ಹಲವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಪದಗ್ರಹಣ ಸಮಾರಂಭದಲ್ಲಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಸನಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನಾದ್ಯಂತ ಫ್ಲೆಕ್‌್ಸ, ಬ್ಯಾನರ್‌ಗಳು ರಾರಾಜಿಸುತ್ತಿದ್ದವು.
ಕರ್ನಾಟಕ ಪ್ರದೇಶ ಕಾಂಗ್ರೆಸ್‌‍ನ 22ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದು ಕಾಂಗ್ರೆಸ್‌‍ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಕಾರ್ಯಕರ್ತರಲ್ಲಿ ಸಂಭ್ರಮ ಮೇರೆ ಮೀರಿತ್ತು.
ಅಧಿಕಾರ ಹಸ್ತಾಂತರದ ಪರ್ವದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಆಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ರಾಜೀನಾಮೆ ನೀಡಿದ್ದರು. ಬಿ.ಕೆ.ಹರಿಪ್ರಸಾದ್‌ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ದೆಹಲಿಯಲ್ಲಿ ಬಿ.ಕೆ.ಹರಿಪ್ರಸಾದ್‌ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ರಹಸ್ಯ ಸಭೆ ನಡೆಯಿತು. ಅನಂತರ ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದು, ಜೂನ್‌ 3ರಂದು ಎಐಸಿಸಿ ಅಧ್ಯಕ್ಷರು ಹರಿಪ್ರಸಾದ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದರು. 18 ದಿನಗಳ ಬಳಿಕ ಇಂದು ಹರಿಪ್ರಸಾದ್‌ ಅಧಿಕಾರ ಸ್ವೀಕರಿಸಿದ್ದಾರೆ.

4 ಬಾರಿ ರಾಜ್ಯಸಭೆ ಸದಸ್ಯರಾಗಿ, 1 ಬಾರಿ ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದ ಬಿ.ಕೆ.ಹರಿಪ್ರಸಾದ್‌ ವಿಧಾನಪರಿಷತ್ತಿನ 2ನೇ ಅವಧಿಗೆ ಸದಸ್ಯರಾಗಿ ಇತ್ತೀಚೆಗಷ್ಟೇ ಮರು ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಹರಿಪ್ರಸಾದ್‌ ಅವರು ಗುಜರಾತ್‌, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್‌‍ ಉಸ್ತುವಾರಿ ನಾಯಕರಾಗಿ ಕೆಲಸ ಮಾಡಿದ್ದಾರೆ.
ರಾಜಕಾರಣದಲ್ಲಿ ಕಾಂಗ್ರೆಸ್‌‍ನ ನಿಷ್ಠಾವಂತರಾಗಿ ಗುರುತಿಸಿಕೊಂಡಿರುವ ಹರಿಪ್ರಸಾದ್‌, ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ನ ಕಡು ವಿರೋಧಿ ಎಂದು ಬಿಂಬಿಸಿಕೊಂಡಿದ್ದಾರೆ. ಹೈಕಮಾಂಡ್‌ ಅಳೆದು-ತೂಗಿ ಹರಿಪ್ರಸಾದ್‌ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಘಟನೆಗೆ ಹೊಸ ಸ್ವರೂಪ ನೀಡಲು ಹರಿಪ್ರಸಾದ್‌ ಕಾರ್ಯಾರಂಭಿಸಲಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವರಾದ ರಾಣಿ ಸತೀಶ್‌, ಉಮಾಶ್ರೀ, ಎಚ್‌. ಆಂಜನೇಯ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ಮತ್ತಿತರರು ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಎಸ್‌‍ಐಆರ್‌ ಕುರಿತು ಜಾಗೃತರಾಗಲು ಕರೆ ನೀಡಿದರು. ಬಿ.ಕೆ.ಹರಿಪ್ರಸಾದ್‌ ಅವರ ಅನುಭವ ಮತ್ತು ಸಂಘಟನಾ ಚತುರತೆಯನ್ನು ಕೊಂಡಾಡಲಾಯಿತು.

RELATED ARTICLES
spot_img

Latest News