ಬೆಂಗಳೂರು, ಜೂ.23- ನಗರದ ರಸ್ತೆಗಳು 20-30 ವರ್ಷ ಬಾಳಿಕೆ ಬರಬೇಕು. ಇನ್ನಾದರೂ ಗುಣಮಟ್ಟದಿಂದ ಕೂಡಿದ ಕಾಮಗಾರಿ ನಡೆಸಿ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇಂದು ಬೆಳಿಗ್ಗೆ ತಮ್ಮ ನಿವಾಸದಿಂದ ವಿಧಾನಸೌಧದ ಕಡೆಗೆ ಬರುವಾಗ ಮೊಬೈಲ್ ಮೂಲಕವೇ ಜಿಬಿಎ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ವಲಯ ಆಯುಕ್ತರು, ಮುಖ್ಯ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್‌ಗಳು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರಿನಲ್ಲೇ ಸಭೆ ನಡೆಸಿದ ಕೃಷ್ಣ ಭೈರೇಗೌಡರು, ನಾನು ಸಾವಿರ ಬಾರಿ ನಿಮ ಬಳಿ ರಸ್ತೆ ನಿಯಮಗಳ ಬಗ್ಗೆ ಹೇಳಿದ್ದೇನೆ. ಆದರೆ ಅದರ ಬಗ್ಗೆ ನೀವು ಗಮನವೇ ಹರಿಸಿಲ್ಲ ಎಂದು ಛೇಡಿಸಿದರು.
ರಸ್ತೆಗಳನ್ನು ನಿರ್ಮಿಸುವಾಗ ಲೇನ್‌ಗಳನ್ನು ಸರಿಯಾಗಿ ಬರೆಸಬೇಕು. ಇದರಿಂದ ವಾಹನ ಸವಾರರಿಗೂ ಅದು ಅರ್ಥವಾಗುತ್ತದೆ. ನೀವು ಕೇವಲ ಅಕ್ಕಪಕ್ಕದಲ್ಲಿ ಮಾತ್ರ ಬಿಳಿ-ಕಪ್ಪು ಬಣ್ಣ ಬಳಿಯುತ್ತೀರ. ಆದರೆ ಮಧ್ಯಭಾಗದಲ್ಲಿ ಲೇನ್‌ಗಳನ್ನು ಬರೆಯುವುದನ್ನು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಚಿಕ್ಕರಸ್ತೆಗಳನ್ನು ಬಿಡಿ. 40 ಅಡಿ ರಸ್ತೆಗಳಲ್ಲಿ ಕಡ್ಡಾಯವಾಗಿ ಲೇನ್‌ಗಳನ್ನು ಬರೆಸಬೇಕು. ಇನ್ನು ರಸ್ತೆಗಳು ಕೆಲವೆಡೆ ಗುಂಡಿ ಬಿದ್ದಿದ್ದು, ಇದನ್ನು ತುರ್ತಾಗಿ ಮುಚ್ಚುವತ್ತ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.
4 ಮೀಟರ್‌ಗಿಂತ ಕಡಿಮೆ ಅಗಲವಿದ್ದರೂ ಸೆಂಟರ್ ಮಾರ್ಕಿಂಗ್ ಮಾಡಬೇಕು. ಶೀಘ್ರದಲ್ಲಿಯೇ ಗುಂಡಿಗಳನ್ನು ಮುಚ್ಚಿ ವರದಿ ನೀಡಿ ಎಂದು ಸಚಿವರು ಆದೇಶಿಸಿದ್ದಾರೆ.ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಕೆಲವೆಡೆ ಮೋರಿಗಳಲ್ಲಿ ಹೂಳು ತುಂಬಿ ಅಥವಾ ಕೆಲ ಕಟ್ಟಡಗಳನ್ನು ನಿರ್ಮಿಸುವುದರಿಂದ ಉಂಟಾಗುವ ತ್ಯಾಜ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆಯಾ ವಾರ್ಡ್‌ನ ಎಇಗಳು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಈಗಾಗಲೇ ವಿಶೇಷ ಆಯುಕ್ತರು ಇದರ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅದಕ್ಕೆ ಸಹಮತವಿದೆ. ಆದರೆ ಕೂಡಲೇ ವಾರ್ಡ್ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
