Homeರಾಷ್ಟ್ರೀಯಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕರಾಗಿ ಮಹೇಶ್‌ ದೀಕ್ಷಿತ್‌ ನೇಮಕ

ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕರಾಗಿ ಮಹೇಶ್‌ ದೀಕ್ಷಿತ್‌ ನೇಮಕ

Mahesh Dixit appointed as Intelligence Bureau chief

ನವದೆಹಲಿ, ಜೂ.26- ಹಿರಿಯ ಐಪಿಎಸ್‌‍ ಅಧಿಕಾರಿ ಮಹೇಶ್‌ ದೀಕ್ಷಿತ್‌ ಅವರನ್ನು ದೇಶದ ಪ್ರಮುಖ ಆಂತರಿಕ ಗುಪ್ತಚರ ಸಂಸ್ಥೆಯಾದ ಇಂಟೆಲಿಜೆನ್ಸ್ ಬ್ಯೂರೋ (ಐಬಿ)ಯ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.ಹಾಲಿ ನಿರ್ದೇಶಕ ತಪನ್‌ ಕುಮಾರ್‌ ದೇಕಾ ಅವರ ಸ್ಥಾನವನ್ನು ದೀಕ್ಷಿತ್‌ ಅಲಂಕರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ನಿನ್ನೆ ಈ ನೇಮಕಾತಿಗೆ ಅನುಮೋದನೆ ನೀಡಿದ್ದು, ದೀಕ್ಷಿತ್‌ ಅವರಿಗೆ ಎರಡು ವರ್ಷಗಳ ಅವಧಿ ನಿಗದಿಪಡಿಸಲಾಗಿದೆ. ಆಂಧ್ರ ಪ್ರದೇಶ ಕೇಡರ್‌ನ 1993ರ ಬ್ಯಾಚ್‌ನ ಭಾರತೀಯ ಪೊಲೀಸ್‌‍ ಸೇವೆ (ಐಪಿಎಸ್‌‍) ಅಧಿಕಾರಿಯಾಗಿರುವ ಮಹೇಶ್‌ ದೀಕ್ಷಿತ್‌, ಈವರೆಗೆ ಐಬಿಯಲ್ಲಿ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ವೈದ್ಯಕೀಯ ಪದವಿ ಪಡೆದಿರುವ ದೀಕ್ಷಿತ್‌ ಬಳಿಕ ಪೊಲೀಸ್‌‍ ಸೇವೆಗೆ ಸೇರ್ಪಡೆಗೊಂಡಿದ್ದರು. ಸುಮಾರು ಮೂರು ದಶಕಗಳ ಕಾಲ ಐಬಿಯಲ್ಲಿ ಸೇವೆ ಸಲ್ಲಿಸಿರುವ ಅವರು, ಈಶಾನ್ಯ ರಾಜ್ಯಗಳು, ಲಡಾಖ್‌, ನಕ್ಸಲ್‌ ವಿರೋಧಿ ಕಾರ್ಯಾಚರಣೆ ಸೇರಿದಂತೆ ಹಲವು ಸೂಕ್ಷ್ಮ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭದ್ರತಾ ವಲಯದಲ್ಲಿ ಬಲಿಷ್ಠ ಗುಪ್ತಚರ ಜಾಲ ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ಅಧಿಕಾರಿಯಾಗಿ ಮಹೇಶ್‌ ದೀಕ್ಷಿತ್‌ ಗುರುತಿಸಿಕೊಂಡಿದ್ದಾರೆ.

ಅವರು ಶ್ರೀನಗರದಲ್ಲಿನ ಸಬ್ಸಿಡಿಯರಿ ಇಂಟೆಲಿಜೆನ್‌್ಸ ಬ್ಯೂರೋ (ಎಸ್‌‍ಐಬಿ) ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ, ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಜಮು-ಕಾಶೀರದಲ್ಲಿ ಆಂತರಿಕ ಸ್ಥಿರತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವರ್ಷ ಶ್ರೀನಗರ ಪೊಲೀಸರಿಂದ ದೊರೆತ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ವೈಟ್‌ ಕಾಲರ್‌ ಭಯೋತ್ಪಾದಕ ಜಾಲವೊಂದನ್ನು ಭೇದಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಮಹೇಶ್‌ ದೀಕ್ಷಿತ್‌ ಅವರು ಜೂ.30ರಂದು ಐಬಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದು, 1988ರ ಬ್ಯಾಚ್‌ನ ಐಪಿಎಸ್‌‍ ಅಧಿಕಾರಿ ತಪನ್‌ ಕುಮಾರ್‌ ದೇಕಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ತಪನ್‌ ಕುಮಾರ್‌ ದೇಕಾ ಅವರು ಜೂನ್‌ 2022ರಲ್ಲಿ ಐಬಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ಅಧಿಕಾರಾವಧಿಯನ್ನು 2024 ಮತ್ತು 2025ರಲ್ಲಿ ತಲಾ ಒಂದು ಬಾರಿ ವಿಸ್ತರಿಸಲಾಗಿತ್ತು.

ದೇಶದ ಗಡಿಭಾಗಗಳಲ್ಲಿ ಅಕ್ರಮ ನುಸುಳುವಿಕೆ ತಡೆ ಹಾಗೂ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಮಹೇಶ್‌ ದೀಕ್ಷಿತ್‌ ಅವರ ನೇಮಕ ಮಹತ್ವ ಪಡೆದುಕೊಂಡಿದೆ.

ತಪನ್‌ ಕುಮಾರ್‌ ದೇಕಾ ಅವರು ದೇಶದ ಭದ್ರತಾ ವಲಯದಲ್ಲಿ ಸಂಕಷ್ಟ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.ಜಮು-ಕಾಶೀರ ಮತ್ತು ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 2008ರ ಮುಂಬೈ 26/11 ಉಗ್ರ ದಾಳಿಯ ವೇಳೆ ನಡೆದ ಪ್ರತಿದಾಳಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯಲ್ಲೂ ಅವರು ಭಾಗಿಯಾಗಿದ್ದರು.

ಇದಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಸರಣಿ ಸ್ಫೋಟಗಳಿಗೆ ಕಾರಣವಾಗಿದ್ದ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ವಿರುದ್ಧದ ಕಾರ್ಯಾಚರಣೆಗಳಿಗೂ ಅವರು ನೇತೃತ್ವ ನೀಡಿದ್ದರು.ಕೇಂದ್ರ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಐಬಿ, ರಿಸರ್ಚ್‌ ಅಂಡ್‌ ಅನಾಲಿಸಿಸ್‌‍ ವಿಂಗ್‌ (ರಾ), ಗೃಹ ಕಾರ್ಯದರ್ಶಿ, ಸಚಿವ ಸಂಪುಟ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಹುದ್ದೆಗಳ ಅಧಿಕಾರಿಗಳಿಗೆ 60 ವರ್ಷಗಳ ನಿವೃತ್ತಿ ವಯಸ್ಸಿನ ನಂತರವೂ ಸೇವಾ ವಿಸ್ತರಣೆ ನೀಡುವ ಅಧಿಕಾರವನ್ನು ಹೊಂದಿದೆ.

RELATED ARTICLES

Latest News