Homeರಾಜ್ಯಬಿಡದಿ ಟೌನ್ ಶಿಪ್ ಯೋಜನೆ : ಪರಿಹಾರದ ಪ್ರಮಾಣ ಹೆಚ್ಚಿಸುವಂತೆ ರೈತರ ಬೇಡಿಕೆ

ಬಿಡದಿ ಟೌನ್ ಶಿಪ್ ಯೋಜನೆ : ಪರಿಹಾರದ ಪ್ರಮಾಣ ಹೆಚ್ಚಿಸುವಂತೆ ರೈತರ ಬೇಡಿಕೆ

Bidadi Township Project: Farmers demand increase in compensation amount

ಬೆಂಗಳೂರು, ಜೂ.27- ಬಿಡದಿ ಬಳಿಯ ಉಪನಗರ ನಿರ್ಮಾಣ ಯೋಜನೆಗೆ ಭೂ ಸ್ವಾಧೀನ ಪರವಾಗಿ ಧರಣಿ ನಡೆಸುತ್ತಿರುವ ರೈತರು, ಪರಿಹಾರದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಎದುರಾಗಿ ಮತ್ತೊಂದು ಬಣ ಧರಣಿ ಆರಂಭಿಸಿದೆ. ಇದರಿಂದ ಸ್ಥಳದಲ್ಲಿ ಕಾವೇರಿದ ವಾತಾವಣ ನಿರ್ಮಾಣವಾಗಿದೆ.

ಬಿಡದಿ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳನ್ನು ಉಪನಗರಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ವರ್ಷಕ್ಕಿಂತಲೂ ಹೆಚ್ಚು ಕಾಲ ಹೋರಾಟ ನಡೆಸಲಾಗುತ್ತಿದೆ.ಯೋಜನೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ಪತ್ರ ಸಮರ, ಬಹಿರಂಗ ಟೀಕೆಗಳು ನಡೆಯುತ್ತಲೇ ಇವೆ.

ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ಅವರ ಕುಮಾರಸ್ವಾಮಿಯವರಿಗೆ ಪತ್ರ ಬರೆದು ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಐದು ಜನ ಪ್ರತಿನಿಧಿಗಳ ಜೊತೆಗೆ ವಿಧಾನಸೌಧಕ್ಕೆ ಚರ್ಚೆಗೆ ಆಗಮಿಸುವಂತೆ ಆಹ್ವಾನಿಸಿದರು.

ಅದನ್ನು ತಳ್ಳಿ ಹಾಕಿದ ಕುಮಾರಸ್ವಾಮಿಯವರು, ವಿಧಾನಸೌಧದಲ್ಲಿ ನಾಲ್ಕು ಗೋಡೆಗಳ ನಡುವೆ ಚರ್ಚೆ ಬೇಡ. ಅದರ ಬದಲು ನಿರಂತರವಾಗಿ ಹೋರಾಟ ನಡೆಸುತ್ತಿರುವ ಬೈರಮಂಗಲ ಗ್ರಾಮದಲ್ಲಿ ರೈತರ ಸಮುಖದಲ್ಲೇ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಪ್ರತಿ ಆಹ್ವಾನ ನೀಡಿದ್ದರು. ಚರ್ಚೆಗೆ ಇಂದು ದಿನ ಹಾಗೂ ಸಮಯವನ್ನು ಕುಮಾರಸ್ವಾಮಿ ನಿಗದಿ ಪಡಿಸಿದ್ದರು.

ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆಯಲ್ಲಿ ಮುಖ್ಯಮಂತ್ರಿಯವರು ಇಂದು ಬೆಳಗ್ಗೆಯಿಂದಲೂ ತೊಡಗಿಸಿಕೊಂಡಿದ್ದಾರೆ. ಅತ್ತ ಕುಮಾರಸ್ವಾಮಿಯವರು ಬೈರಮಂಗಲಕ್ಕೆ ಭೇಟಿ ನೀಡಿ, ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿಯವರು ಚರ್ಚೆಗೆ ಬರಬೇಕು ಎಂದು ಹೇಳಿರುವ ಕುಮಾರಸ್ವಾಮಿಯವರು, ಮುಖ್ಯಮಂತ್ರಿಯವರ ಬರುವಿಕೆಗಾಗಿ ಮಧ್ಯಾಹ್ನ 11 ಗಂಟೆಯವರೆಗೂ ಕಾಯುವುದಾಗಿ ಹೇಳಿದ್ದಾರೆ.

ಉಪನಗರ ನಿರ್ಮಾಣವನ್ನು ಬೆಂಬಲಿಸುವ ರೈತರ ಗುಂಪೊಂದು ಇದ್ದಕ್ಕಿದ್ದಂತೆ ಪ್ರತಿ ಧರಣಿ ಆರಂಭಿಸಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಿಡದಿ ಉಪನಗರ ನಿರ್ಮಾಣಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಅಧಿಸೂಚನೆ ಹೊರಡಿಸಿ, ರೆಡ್‌ ಝೋನ್‌ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಭೂ ಸ್ವಾಧೀನ ಪರವಾಗಿರುವ ರೈತರು ಧರಣಿ ನಡೆಸುತ್ತಿರುವುದು ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು. ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್‌ ಆಯೋಜಿಸಲಾಗಿದೆ.ಯೋಜನೆ ಪರವಾಗಿರುವ ರೈತರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯೋಜನೆಗಾಗಿ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ. ಹೊರಗಿನಿಂದ ಬಂದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ರೈತರೊಬ್ಬರು ಮಾತನಾಡಿ, ನಾವು ಹತ್ತಾರು ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದೇವು, ಈಗ ಸುತ್ತಲೂ ನಗರ ಪ್ರದೇಶವಾಗಿದೆ. ಜೊತೆಗೆ ಕೃಷಿ ಕೂಲಿ ಕಾರ್ಮಿಕರ ಕೊರತೆಯಾಗಿದೆ. ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಕೆರೆಯಲ್ಲೂ ಹೂಳು ತುಂಬಿ, ಕಳೆ ಬೆಳೆದು, ನೀರಿಲ್ಲವಾಗಿದೆ ಎಂದಿದ್ದಾರೆ.

ಕುಮಾರಸ್ವಾಮಿ ಹಾಸನ ಮೂಲದವರು, ಇಲ್ಲಿನ ಸ್ಥಳೀಕರಲ್ಲ. ಅಲ್ಲಿಂದ ಬಂದ ಅವರಿಗೆ ನಮ ಭಾಗದ ರೈತರು ಜಾಗ ಕೊಟ್ಟಿದ್ದಾರೆ. ಮತ ಹಾಕಿ ಗೆಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಕುಮಾರಸ್ವಾಮಿ ಯೋಜನೆಗೆ ವಿರೋಧ ಮಾಡಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಬಹುತೇಕ ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡಿಕೊಂಡಿದ್ದಾರೆ. ಕೃಷಿ ಮಾಡಿ ಆದಾಯ ಗಳಿಸಲಾಗುತ್ತಿಲ್ಲ. ಮಕ್ಕಳ ಮದುವೆ ಹಾಗೂ ಇತರ ವೆಚ್ಚಗಳಿಗೆ ಪ್ರತಿ ಗುಂಟೆ ಭೂಮಿಗೆ ತಲಾ 50 ಸಾವಿರ, ಲಕ್ಷ ರೂಪಾಯಿಂತೆ ಮಾರಾಟ ಮಾಡಿಕೊಂಡಿದ್ದೇವೆ. ಹತ್ತಾರು ಎಕರೆ ಹೊಂದಿದ್ದವರು ಈಗ ಗುಂಟೆ ಲೆಕ್ಕದಲ್ಲಿ ಭೂಮಿ ಇಟ್ಟುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ರೈತರು, ಸ್ಥಳಕ್ಕೆ ಬರುವ ಕುಮಾರಸ್ವಾಮಿಯವರಿಗೆ ನಾವು ಯಾವುದೇ ಪ್ರಶ್ನೆ ಕೇಳುವುದಿಲ್ಲ, ತೊಂದರೆಯನ್ನು ನೀಡುವುದಿಲ್ಲ. ಧರಣಿ ನಡೆಸುತ್ತಿರುವ ನಮ ಕಷ್ಟವನ್ನು ಅವರು ಇಲ್ಲಿಗೆ ಬಂದು ಕೇಳಬೇಕು ಎಂದು ಆಗ್ರಹಿಸಿದರು.

ಭೂ ಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿರುವವರು ಮತ್ತು ಪರವಾಗಿರುವವರ ನಡುವೆ ಜಗಳ ತಂದಿಡಲಾಗಿದೆ. ರೈತರು ಅಣ್ಣ-ತಮಂದಿರಂತಿದ್ದೇವು. ಕುಮಾರಸ್ವಾಮಿ ಗ್ರಿನ್‌ ಬೆಲ್‌್ಟ ಭೂಮಿಯನ್ನು ರೆಡ್‌ ಝೋನ್‌ ಮಾಡಿದ್ದರಿಂದ ಇಂದು ವನವಾಸ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.ಭೂ ಸ್ವಾಧೀನಕ್ಕೆ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚಿಸಲು ಕುಮಾರಸ್ವಾಮಿಯವರು ಒತ್ತಾಯ ಮಾಡಲಿ, ನಾವು ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು ಕೆಲ ರೈತರು ಹೇಳಿದ್ದಾರೆ.

RELATED ARTICLES

Latest News