ಬೆಂಗಳೂರು, ಜೂ.27- ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವೇಗವಾಗಿ ವಿಸ್ತರಣೆಯಾಗುತ್ತಿರುವ ನಗರವಾಗಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಲಂಬಾಕಾರವಾಗಿ ಬೆಳೆಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಬೆಂಗಳೂರು ಉತ್ತರ ತಾಲ್ಲುಕು ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ವಿಶ್ವ ಇಂದು ಬೆಂಗಳೂರಿನ ಮುಖಾಂತರ ಭಾರತವನ್ನು ನೋಡಲಾಗುತ್ತಿದೆ.
ಈ ವರ್ಷ ಕೆಂಪೇಗೌಡ ಲೇಔಟ್ ನಲ್ಲಿ ದೊಡ್ಡ ರಸ್ತೆ ನಿರ್ಮಿಸಿ ಎಸ್.ಎಂ.ಕೃಷ್ಣ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಬಗ್ಗೆ ಪ್ರತಿ ವರ್ಷ ಜನಾಕರ್ಷಣೆ ಹೆಚ್ಚಾಗುತ್ತಿದೆ. ಜೀವನೋಪಾಯ ಹಾಗೂ ಉದ್ಯೋಗಕ್ಕಾಗಿ ವಿವಿಧ ರೀತಿಯ ಜನರು ದೇಶ ಎಲ್ಲೆಡೆಯಿಂದ ಇಲ್ಲಿಗೆ ಬರುತ್ತಿದ್ದಾರೆ ಎಂದರು.
ಬೆಂಗಳೂರು ಬೆಳೆಸಲು ನಮದೆ ಆದ ಪ್ರಯತ್ನ ಮಾಡಬೇಕಿದೆ. ಇನ್ನು ಮುಂದೆ ಲಂಭಾಕಾರವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.ಈ ವರ್ಷ ಬೆಂಗಳೂರಿನ ಯಶವಂತ ಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮುಂದಿನ ವರ್ಷದಿಂದ ಬೆಂಗಳೂರಿನ 28 ಕ್ಷೇತ್ರದಲ್ಲೂ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಆದೇಶ ನೀಡಲಾಗಿದೆ.
ರಾಜ್ಯದ 224 ಕ್ಷೇತ್ರ, ಬೆಂಗಳೂರಿನ 369 ವಾರ್ಡ್‌ಗಳಲ್ಲೂ ಸರ್ಕಾರಿ ಕಾರ್ಯಕ್ರಮವಾಗಿ ಕೆಂಪೇಗೌಡರ ಜಯಂತಿ ಆಚರಿಸಬೇಕು ಎಂದು ಆದೇಶಿಸಿದ್ದೇನೆ. ಇಂದು ಆಚರಣೆ ಸಾಧ್ಯವಾಗದಿದ್ದರೂ, ಈ ತಿಂಗಳ ಒಳಗೆ ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕೆಂಪೇಗೌಡರ ಸರಣೆಯಾಗಬೇಕು ಎಂದು ತಿಳಿಸಿದರು.
ಇ-ಖಾತಾ ಆಂದೋಲನ ಬೆಂಗಳೂರಿನ ಜನರಿಗೆ ಆಸ್ತಿ ದಾಖಲೆಗಳನ್ನು ಕ್ರಮ ಬದ್ಧಗೊಳಿಸಿಕೊಳ್ಳಲು ಸಹಕಾರಿಯಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆ 1.25 ಲಕ್ಷ ಕೋಟಿ ರೂಪಾಯಿಯಷ್ಟು ಮೊತ್ತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕೆಂಪೇಗೌಡರ ಜಯಂತಿ ಒಕ್ಕಲಿಗರಿಗೆ ಸೀಮಿತವಾಗಬಾರದು, ವಿಶ್ವಮಾನವ ಸಂದೇಶದಂತೆ ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ನಾಡಪ್ರಭು ಕೆಂಪೇಗೌಡರು ವಿಶ್ವಮಾನವ ಚಿಂತನೆ ಹೊಂದಿದ್ದರು. ನಾವು ಬೆಂಗಳೂರನ್ನು ಕಟ್ಟಿಲ್ಲ. ಹಿರಿಯರು ಕಟ್ಟಿದ್ದನ್ನು ಉಳಿಸಿಕೊಳ್ಳಬೇಕಿದೆ. ಬೆಂಗಳೂರಿನಲ್ಲಿರುವ ಎಲ್ಲರಿಗೂ ಅವರ ಧರ್ಮ, ಆಚರಣೆ, ವಿಚಾರಕ್ಕನುಗುಣವಾಗಿ ನಡೆದುಕೊಳ್ಳಲು ಅವಕಾಶ ಇದೆ ಎಂದು ಹೇಳಿದರು.
ಇಂದಿನ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಿರುಬಿಸಿಲು ಇತ್ತು. ಈಗ ಮೋಡ ಕವಿದು ತಂಪಾಗಿದೆ. ಪ್ರಕೃತಿಯೂ ಕಾರ್ಯಕ್ರಮಕ್ಕೆ ಆಶೀರ್ವಾದ ಮಾಡಿದೆ. ಕಳೆದ ಮೂರು ವರ್ಷ ಉತ್ತಮ ಮಳೆಯಾಗಿದೆ. ಈ ವರ್ಷ ಮಳೆಯ ಕೊರತೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾಗಲಿದೆ. ರೈತರನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ತುಂಗಾ ಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಖಾತೆ ಸಚಿವ ಸಿ.ಆರ್.ಪಾಟೀಲ್ ಸಮುಖದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ತಾವು ಚರ್ಚೆ ನಡೆಸಿ, ಮೂರು ರಾಜ್ಯಗಳ ರೈತರ ಹಿತರಕ್ಷಣೆಗೆ ಪೂರಕವಾದ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದರು.
ಬೆಂಗಳೂರು ಉತ್ತರ ಭಾಗದಲ್ಲಿ ಒಕ್ಕಲಿಗರ ಸಂಘಕ್ಕೆ ಗೃಹ ಮಂಡಳಿಯ ಜಾಗವನ್ನು ಶೇ.10ರಷ್ಟು ರಿಯಾಯಿತಿ ದರದಲ್ಲಿ ಒದಗಿಸಿಕೊಡುವುದಾಗಿ ಘೋಷಿಸಿದರು. ವಿಮಾನ ನಿಲ್ದಾಣ ರಸ್ತೆಯಲ್ಲಿ ಬೆಂಗಳೂರು ಉತ್ತರ ಪಾಲಿಕೆಯ ಬೃಹತ್ ಕಚೇರಿಯನ್ನು ನಿರ್ಮಿಲಾಗುವುದು ಎಂದು ತಿಳಿಸಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ನಮ ಸಮುದಾಯದ ಹೆಮೆಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡರ ಆಡಳಿತ ದಿನಗಳನ್ನು ನೆನಪು ಮಾಡಿಕೊಳ್ಳುವಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ.
ಯಲಹಂಕದಲ್ಲಿ ಮೋಡ ಕವಿದ ವಾತಾವಣ ಇತ್ತು. ಮುಖ್ಯಮಂತ್ರಿಯವರು ಆಗಮಿಸಿದ್ದರಿಂದ ಪ್ರಖರವಾದ ಬೆಳಕು ಬಂದಿದೆ. ಮುಂದಿನ ದಿನಗಳಲ್ಲೂ ಯಲಹಂಕಕ್ಕೆ ಇದೇ ರೀತಿ ಬೆಳಕು ಬರುತ್ತದೆ ಎಂದು ಸೂಚ್ಯವಾಗಿ ಹೇಳಿದರು.ಕೆಂಪೇಗೌಡರ ಸಂಕಲ್ಪ, ಕನಸು ಹಾಗೂ ಮುಂದಾಲೋಚನೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ವಿಶ್ವದ ಎಲ್ಲಾ ನಗರಗಳು ನದಿ ದಂಡೆಯಲ್ಲಿ ನಿರ್ಮಾಣವಾಗಿವೆ. ಬೆಂಗಳೂರಿಗೆ ಯಾವುದೇ ನದಿ ಮೂಲ ಇಲ್ಲದಿದ್ದರೂ ಅದ್ಭುತವಾಗಿ ಬೆಳೆದಿದೆ. ಇದಕ್ಕೆ ಕೆಂಪೇಗೌಡರ ಭವಿಷ್ಯದ ಪರಿಕಲ್ಪನೆಯೇ ಕಾರಣ ಎಂದರು.
ನಾಡಪ್ರಭು ಆಳ್ವಿಕೆ ಎಲ್ಲಾ ಜನಾಂಗಗಳಿಗೂ ಪೂರಕವಾಗಿತ್ತು. ಯಾವುದೇ ರಾಜ ಅಹಂಕಾರದಿಂದ ಆಳ್ವಿಕೆ ಮಾಡಬಾರದು. ಜನರನ್ನು ಪ್ರೀತಿ ವಿಶ್ವಾಸದಿಂದ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಜನ ಪ್ರತಿನಿಧಿಗಳು ಕೂಡ ಅದೇ ರೀತಿ ವರ್ತಿಸಬೇಕು. ಯಲಹಂಕದಲ್ಲಿ ಒಕ್ಕಲಿಗರೂ ಇತರ ಜಾತಿಗಳ ಜೊತೆ ಹಾಲು ಜೇನಿನಂತೆ ಬೆರೆಯುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷದ ಅವಧಿಯಲ್ಲಿ ಯಲಹಂಕ ಹಾಗೂ ರಾಜ್ಯಕ್ಕೆ ಉತ್ತಮ ಆಡಳಿತ ನೀಡಲಿ. ಒಕ್ಕಲಿಗ ಸಂಘಕ್ಕೆ ಗೃಹ ಮಂಡಳಿ ವತಿಯಿಂದ ಶೇ.10ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ಕೊಟ್ಟು, ಕೆಂಪೇಗೌಡರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು. ಈ ಭಾಗಕ್ಕೆ ಕುಡಿಯುವ ನೀರು ಸರಬರಾಜಿಗೆ ಪೂರಕವಾದ ಎತ್ತಿನಹೊಳೆ ಯೋಜನೆಯನ್ನೂ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನಮಠದ ಡಾ.ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಶಾಸಕ ಗಂಟಗಾನಹಳ್ಳಿ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
