ಬೆಂಗಳೂರು, ಜೂ.29- ಸಚಿವ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡುವುದು, ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ತಲೆ ನೋವಾಗಿದ್ದು, ಒತ್ತಡದ ನಡುವೆಯೂ ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ವರಿಷ್ಠ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಹಾಗೂ ವಿಧಾನ ಪರಿಷತ್‌ನಲ್ಲಿ ತೆರವಾಗುವ 4 ಸ್ಥಾನಗಳಿಗೆ ನಾಮ ನಿರ್ದೇಶನ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟದಲ್ಲಿ ಹಿರಿಯರ ಜೊತೆಗೆ ಕಿರಿಯರಿಗೂ ಅವಕಾಶ ನೀಡಬೇಕು. ಅದರಲ್ಲೂ ಹೊಸ ಮುಖಗಳಿಗೆ ಮಣೆ ಹಾಕಬೇಕೆಂಬ ಒತ್ತಡ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೊರತು ಪಡಿಸಿ, ಉಳಿದೆಲ್ಲರೂ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದರು.
ಪಕ್ಷದಲ್ಲಿ ಅವಕಾಶಗಳು ಸಿಕ್ಕವರಿಗೇ ಸಿಗುತ್ತಿವೆ. ಪಕ್ಷ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ಹಲವಾರು ಮಂದಿ ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಈವರೆಗೂ ಸಂಪುಟ ಸೇರಲಾಗಿಲ್ಲ. ಈ ರೀತಿ ಸುಮಾರು 40ಕ್ಕೂ ಹೆಚ್ಚು ಮಂದಿ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅವರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರ ಮುಂದಿದೆ.
ಆದರೆ ಈ ಹಿಂದೆ 6 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆಯಲ್ಲಿ ಯಾರ ಸಾಮಾರ್ಥ್ಯ ಎಷ್ಟು? ಮತ್ತು ಪಕ್ಷ ಸಂಘಟನೆಯ ಪ್ರಕ್ರಿಯೆಯಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತಿದ್ದರು ಎಂಬ ಸ್ಪಷ್ಟ ಮಾಹಿತಿ ಹೊಂದಿದ್ದಾರೆ. ಎಷ್ಟೇ ಲಾಬಿ ಮಾಡಿದರೂ, ಒತ್ತಡ ತಂದರೂ ಡಿ.ಕೆ.ಶಿವಕುಮಾರ್ ಅವರು ಅಳೆದು-ತೂಗಿ ಮುಂದಿನ ಚುನಾವಣೆಗೆ ಅನುಕೂಲವಾಗುವಂತಹ ಶಾಸಕರುಗಳನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ ಶಾಸಕರ ಜನಪ್ರಿಯತೆ, ಸಮುದಾಯದ ನಾಯಕತ್ವ ಹಾಗೂ ಆರ್ಥಿಕ ಹಿನ್ನೆಲೆಯನ್ನು ಮಾನದಂಡವಾಗಿ ಇಟ್ಟುಕೊಂಡು, ಬಳಿಕ ಸಾಮಾಜಿಕ ನ್ಯಾಯ, ಭೌಗೋಳಿಕ ಆದ್ಯತೆ ಅನುಸಾರ ಸಂಭವನೀಯ ಸಚಿವರ ಕರಡು ಪಟ್ಟಿ ತಯಾರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಪರ್ಯಾಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ಪ್ರತ್ಯೇಕ ಪಟ್ಟಿಯನ್ನು ಸಜ್ಜುಗೊಳಿಸಲಿದ್ದು, ಡಾ.ಪರಮೇಶ್ವರ್ ಅವರು ತಮ ಬೆಂಬಲಿಗರಿಗೆ ಅವಕಾಶ ಕೊಡಿಸಲು ಲಾಬಿ ನಡೆಸುವ ಸಾಧ್ಯತೆ ಇದೆ.
ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೃಪಾ ಕಟಾಕ್ಷದಲ್ಲಿರುವವರೆಗೂ ಅವಕಾಶ ನೀಡಬೇಕಾದ ಪರಿಸ್ಥಿತಿ ಬಂದೊದಗಲಿದೆ. ಇದರ ನಡುವೆ 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಸವಾಲನ್ನು ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ.
ಈ ಟಾಸ್ಕ್ ಪೂರ್ಣಗೊಳ್ಳಬೇಕಾದರೆ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುವ ಯುವ ಉತ್ಸಾಹಿ ಮತ್ತು ಬದ್ಧತೆಯ ತಂಡವೊಂದು ಅಗತ್ಯವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಸ್ತುತ ಸಂಪುಟ ವಿಸ್ತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಲಾಬಿಗಳಿಗೆ ಮಣಿಯದೆ ಡಿ.ಕೆ.ಶಿವಕುಮಾರ್ ತಮದೇ ಆದ ತಂಡ ಕಟ್ಟಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜಕೀಯ ಈವರೆಗೂ ಅತ್ಯಂತ ಶಾಂತರೂಪದಲ್ಲಿ ಮುನ್ನಡೆಯುತ್ತಿವೆ. ಶಾಸಕರಲ್ಲಿ ಅಸಮಾಧಾನಗಳಾಗಲಿ, ಅಪಸ್ವರಗಳಾಗಲಿ ಕಂಡು ಬರುತ್ತಿಲ್ಲ. ಆದರೆ ಭವಿಷ್ಯದಲ್ಲೂ ಇದೇ ರೀತಿಯ ವಾತಾವರಣ ಇರಲಿದೆಯೇ ಎಂಬ ಅನುಮಾನಗಳಿವೆ. ಸಂಪುಟಕ್ಕೆ ಸೇರಲು ಹಿರಿಯ ಹಾಗೂ ಪ್ರಭಾವಿ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಅವಕಾಶ ಸಿಗದೇ ಇದ್ದರೆ ಅವರು ತಟಸ್ಥರಾಗಿ ಇರುವ ಸಾಧ್ಯತೆಗಳಂತೂ ಇಲ್ಲ.
2028ರ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವುದರಿಂದಾಗಿ ಶಾಸಕರ ವಲಸೆ, ಪಕ್ಷ ಅದಲು-ಬದಲಿನ ಆಟ ಜೋರಾಗಲಿದೆ. ಹೀಗಾಗಿ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೊಸ ಸವಾಲನ್ನು ತಂದೊಡ್ಡಲಿದೆ.
