ಬೆಂಗಳೂರು, ಜೂ. 30- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಇಂದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗವಹಿಸಿದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ, ಕನಕಪುರ ತಹಸೀಲ್ದಾರ್ ಸೇರಿದಂತೆ 4 ಮಂದಿ ಎನ್ಯುಮರೇಷನ್ ಅಧಿಕಾರಿಗಳು ಹಾಗೂ ಎಸ್‌ಐಆರ್ ಸಲುವಾಗಿ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಯವರ ನಿವಾಸಕ್ಕೆ ಆಗಮಿಸಿದರು.
ಕುಟುಂಬದ ಪ್ರತಿಯೊಬ್ಬ ಸದಸ್ಯರ ಎನ್ಯುಮರೇಷನ್ ಅರ್ಜಿ ನಮೂನೆಗಳನ್ನು ಮುಖ್ಯಮಂತ್ರಿಯವರು ಖುದ್ದು ಪರಿಶೀಲಿಸಿದರು. ಹಾಗೆಯೇ ಮತದಾರರ ಪಟ್ಟಿಯ ಮೇಲೂ ಕಣ್ಣಾಡಿಸಿದರು. ಭರ್ತಿ ಮಾಡಲಾದ ಮಾಹಿತಿಗಳು ಸಮರ್ಪಕವಾಗಿದೆಯೇ ಎಂದು ಮತ್ತೊಮೆ ಗಮನಿಸಿದ ಮುಖ್ಯಮಂತ್ರಿಯವರು, ಡಿಲಿಟ್ ಆಗಿರುವವರ ಹೆಸರುಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಈ ವೇಳೆ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರು. ಅಧಿಕಾರಿಗಳು ತಮ ಫೋನ್‌ನಲ್ಲಿ ಪ್ರಕ್ರಿಯೆಗಳನ್ನು ವಿವರಿಸಲು ಹೋದಾಗ ನನ್ನ ಫೋನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಡಿ ಎಂದು ಖಡಕ್ ಸೂಚನೆ ನೀಡಿದರು.ಇದರಿಂದ ಅಧಿಕಾರಿಗಳು ತಬ್ಬಿಬ್ಬಾದರು.
ಮತದಾರರ ಗುರುತಿನ ಸಂಖ್ಯೆಯನ್ನು ಪರಿಶೀಲಿಸಿ ಭರ್ತಿ ಮಾಡಿದರು. ತಮ ಅರ್ಜಿ ನಮೂನೆಯಲ್ಲಿ ತಾವೇ ಪೂರ್ಣವಾಗಿ ಭರ್ತಿ ಮಾಡಿದರು. ಪತ್ನಿ ಉಷಾ ಅವರ ಅರ್ಜಿ ನಮೂನೆಯನ್ನು ಪರಿಶೀಲಿಸಲು ಅವರಿಗೆ ಸಲಹೆ ನೀಡಿದರು. ಪ್ರತಿಯೊಂದು ವಿವರಗಳನ್ನು ಖುದ್ದು ಪರಿಶೀಲಿಸಿ ಬಳಿಕ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಹೊರಗೆ ಕಳುಹಿಸಲು ಅಧಿಕಾರಿಗಳು ಮುಂದಾದಾಗ, ಎಸ್‌ಐಆರ್ ಎಷ್ಟು ಕಷ್ಟ ಇದೆ ಎಂದು ಜನರಿಗೂ ಗೊತ್ತಾಗಲಿ, ಮಾಧ್ಯಮದವರು ಇರಲಿ ಬಿಡಿ ಎಂದು ಅಧಿಕಾರಿಗಳನ್ನು ತಡೆದರು.
2002ರಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮತ್ತು 2008ರಲ್ಲಿನ ಮತದಾರರ ಪಟ್ಟಿಯ ಬಗ್ಗೆ ತಾಳೇ ಹಾಕುವಂತೆ ಮುಖ್ಯಮಂತ್ರಿ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ಚುನಾವಣಾ ಆಯೋಗ ಇಂದಿನಿಂದ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗಳನ್ನು ಆರಂಭಿಸಿದೆ.
