Homeರಾಜ್ಯಕಲ್ಲುಕ್ವಾರಿ ದುರಂತ : ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರಕ್ಕೆ ಶಾಸಕ ಎಸ್‌‍.ಟಿ.ಸೋಮಶೇಖರ್‌...

ಕಲ್ಲುಕ್ವಾರಿ ದುರಂತ : ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರಕ್ಕೆ ಶಾಸಕ ಎಸ್‌‍.ಟಿ.ಸೋಮಶೇಖರ್‌ ಒತ್ತಾಯ

Quarry tragedy: MLA S.T. Somashekhar demands Rs 1 crore each for the families of the deceased

ಬೆಂಗಳೂರು, ಜು.2- ಹುಳುಮೇನಹಳ್ಳಿಯ ಕಲ್ಲುಕ್ವಾರಿ ದುರಂತಕ್ಕೆ ಸಂಬಂಧಪಟ್ಟಂತೆ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಹಾಗೂ ಕಲ್ಲುಕ್ವಾರಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ಮೃತಪಟ್ಟವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್‌‍.ಟಿ.ಸೋಮಶೇಖರ್‌ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತ ನಡೆದ ಕ್ವಾರಿಗಳು ತಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಸುಮಾರು ಏಳೆಂಟು ಕ್ವಾರಿಗಳು ಅಲ್ಲಿ ನಡೆಯುತ್ತಿದ್ದು, ಅಕ್ಕಪಕ್ಕವಿರುವ ಎರಡು ಕ್ವಾರಿಗಳಲ್ಲಿ ಇಂದು ಬೆಳಗ್ಗೆ ದುರ್ಘಟನೆ ಸಂಭವಿಸಿದೆ ಎಂದಿದ್ದಾರೆ.

ಬೆಳಗ್ಗೆ 7 ಗಂಟೆಗೆ ಸುಮಾರು 10 ಜನ ಕಾರ್ಮಿಕರು ಕ್ವಾರಿಯಲ್ಲಿ ಕೆಲಸ ಮಾಡಲು ಹೋಗಿದ್ದಾರೆ. 100 ಮೀ. ಎತ್ತರದಲ್ಲಿ ಮತ್ತೊಂದು ಕ್ವಾರಿಯಿದ್ದು, ಅಲ್ಲಿ ಬಂಡೆ ಸ್ಫೋಟಕ್ಕಾಗಿ ಹಿಟಾಚಿ ಬಳಸಿ, ಸ್ವಚ್ಛಗೊಳಿಸಿ ತಯಾರಿಗೊಳಿಸಲಾಗಿತ್ತು. ಈ ವೇಳೆ ಹಿಟಾಚಿ ಸಹಿತವಾಗಿ ಕ್ವಾರಿಯ ಬಂಡೆಗಳು ಕುಸಿದಿವೆ. ಕೆಳಗೆ ಮತ್ತೊಂದು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆಗಳು ಬಿದ್ದಿವೆ. ಇದರಿಂದ 7 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮತ್ತೊಬ್ಬರು ಮೃತಪಟ್ಟಿರುವ ಮಾಹಿತಿ ಇದೆ ಎಂದು ಹೇಳಿದರು.

ಈ ಹಿಂದೆ ಕಲ್ಲುಕ್ವಾರಿಗಳಲ್ಲಿ ಸ್ಫೋಟ ಸಂಭವಿಸಿ ಗರ್ಭಿಣಿ ಚಿರತೆಯೊಂದು ಮೃತಪಟ್ಟ ಪ್ರಕರಣದಲ್ಲಿ ತಾವು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೆ, ವಿಧಾನಸಭೆಯಲ್ಲೂ ಚರ್ಚೆ ಮಾಡಿದ್ದೆ. ಆಗಿನ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ನನ್ನ ಪ್ರಶ್ನೆಗೆ ಉತ್ತರ ನೀಡಲು ವಿಧಾನಸಭೆಗೆ ಬರಲಿಲ್ಲ, ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದರು. ಅರಣ್ಯ ಇಲಾಖೆ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಯಾರೂ ಕೂಡ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.

ಕಲ್ಲುಕ್ವಾರಿಗಳ ಅಕ್ರಮಗಳಲ್ಲಿ ಅರಣ್ಯ, ಗಣಿ, ಭೂ ವಿಜ್ಞಾನ ಹಾಗೂ ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆ. ಈಗ ಸ್ಫೋಟಗೊಂಡಿರುವ ಗಣಿಯ ಮಾಲೀಕರು ಕರ್ನಾಟಕ ರಾಜ್ಯ ಗಣಿ ಮಾಲೀಕರ ಸಂಘದ ಅಧ್ಯಕ್ಷರ ಸಂಬಂಧಿಯಾಗಿದ್ದಾರೆ. ಹಣಕಾಸಿನ ವ್ಯವಸ್ಥೆಗಳಲ್ಲಿ ಸದೃಢರಾಗಿದ್ದು ಪ್ರಭಾವಿಗಳಾಗಿದ್ದಾರೆ.

ಕಾರ್ಮಿಕರ ಸಾವಿನ ಪ್ರಕರಣಗಳನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಅದಕ್ಕಾಗಿ ತಾವು ತಪ್ಪಿತಸ್ಥ ಅಧಿಕಾರಿಗಳ ಕ್ರಮಕ್ಕೆ ಆಗ್ರಹಿಸುತ್ತಿದ್ದೇನೆ ಎಂದರು. ಕ್ವಾರಿ ಮಾಲೀಕರು ಕೋಟ್ಯಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಮೃತಪಟ್ಟ ಕಾರ್ಮಿಕರಿಗೆ ತಲಾ ಒಂದು ಕೋಟಿ ರೂ. ಪರಿಹಾರವನ್ನು ಗಣಿ ಮಾಲೀಕರು ನೀಡಬೇಕು ಎಂದು ಆಗ್ರಹಿಸಿದರು.

RELATED ARTICLES

Latest News