ಮುಂಬೈ,ಜು.6- ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ. ಮಳೆಯ ಆರ್ಭಟಕ್ಕೆ ನಗರದ ವಿವಿಧ ಕಡೆಗಳಲ್ಲಿ ಸಂಭವಿಸಿದ ಅವಘಡಗಳು ಮತ್ತು ಕಟ್ಟಡ ಕುಸಿತದಿಂದಾಗಿ ಈವರೆಗೆ ಒಟ್ಟು 13 ಮಂದಿ ಸಾವನ್ನಪ್ಪಿ, ಜನಜೀವನ ಅಸ್ತವ್ಯಸ್ತಗೊಂಡಿದೆ.ಮುಂಬೈನಲ್ಲಿ ದಾಖಲಾದ ಮಳೆಯ ಪ್ರಮಾಣವು ಕಳೆದ 50 ವರ್ಷಗಳಲ್ಲೇ ಜುಲೈ ತಿಂಗಳ ಒಂದೇ ದಿನದಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸೋಮವಾರ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿರಂತರ ಮಳೆ ಮತ್ತು ದಟ್ಟವಾದ ಮೋಡಗಳಿಂದಾಗಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿದ್ದು, ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರಸ್ತೆಗಳಲ್ಲಿ ಮಳೆನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರ ದಟ್ಟಣೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ನಾಗರಿಕರು ಪರದಾಡುವಂತಾಗಿದೆ. ಸಾರ್ವಜನಿಕರು ಅಗತ್ಯ ಕೆಲಸಗಳಿದ್ದರಷ್ಟೇ ಮನೆಯಿಂದ ಹೊರಬರಬೇಕೆಂದು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಮುಂಬೈ ಮಹಾನಗರ ಪಾಲಿಕೆ ಹಾಗೂ ವಿಪತ್ತು ನಿರ್ವಹಣಾ ಪಡೆ ಮನವಿ ಮಾಡಿವೆ.
ಕುರ್ಲಾ ಪ್ರದೇಶದ ಗೋಮ್ಸೌ ಗೌನ್ನ ನವಪಾದ ಪ್ರದೇಶದಲ್ಲಿ 63 ವರ್ಷದ ಯೂನಸ್ ಕುಂದಾವಾಲ ಎಂಬ ವ್ಯಕ್ತಿಯ ಅಂಗಡಿ ಮೇಲೆ ಭಾರೀ ಮರ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ 18 ವರ್ಷದ ಕುಮಾರ್ಹಸನ್ ರಾಜಾ ಮರದ ಕೊಂಬೆ ಬಿದ್ದು, ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋದರೂ ಜೀವ ಉಳಿಯಲಿಲ್ಲ.ಇದಕ್ಕೂ ಮೊದಲು, ಸ್ಕೂಲ್ ವ್ಯಾನ್ ಮೇಲೆ ಮರ ಬಿದ್ದು, 11 ವರ್ಷದ ಹುಡುಗ, ಆಹಾನ್ ಶ್ರೀವಾತ್ಸವ್ ಮೃತಪಟ್ಟಿದ್ದರು. 60 ವರ್ಷದ ವ್ಯಕ್ತಿ ಮ್ಯಾನ್ ಹೋಲ್ಗೆ ಬಿದ್ದು ಸಾವನ್ನಪ್ಪಿದ್ದರು.
ಮುಂಬೈನಲ್ಲಿ ನಿರಂತರ ಮಳೆಗೆ ಒಂದೇ ವಾರದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮರಗಳು ಉರುಳಿವೆ. 15 ಕ್ಕೂ ಹೆಚ್ಚು ಕಡೆ ಶಾರ್ಟ್ ಸಕ್ರ್ಯೂಟ್ ಆಗಿದೆ.24 ಗಂಟೆ ಅವಧಿಯಲ್ಲಿ ಮುಂಬೈ ನಗರದಲ್ಲಿ 200 ಮಿ.ಮೀಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಸಂಚಾರ ಅಸ್ತ್ಯವಸ್ತ
ಭಾರೀ ಮಳೆಯ ಹಿನ್ನೆಲೆ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೂಕುಸಿತದಿಂದಾಗಿ ಮುಂಬೈ-ಪುಣೆ ಎಕ್್ಸಪ್ರೆಸ್ವೇಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮುಂಬೈ ಮತ್ತು ಪುಣೆಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೃಹತ್ ಮುಂಬೈ ಕಾರ್ಪೊರೇಷನ್ ಮುಂಬೈ, ರಾಯಘಡ, ಥಾಣೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆ ಎಲ್ಲಾ ಸರಕಾರಿ, ಖಾಸಗಿ ಹಾಗೂ ನಾಗರಿಕ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪುಣೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವಾರು ಮನೆಗಳು ನೆಲಸಮವಾಗಿವೆ. ಮೂವರು ಅವಶೇಷಗಳಡಿ ಸಿಲುಕಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಭಾರೀ ಮಳೆಯಿಂದಾಗಿ ಮಾವಲ್ನ ದೂರದ ಹಳ್ಳಿಯಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದು, ಒಂದು ಮನೆ ಅವಶೇಷಗಳಡಿ ಹೂತುಹೋಗಿದೆ. ಇಂದು ಮುಂಜಾನೆ ಭೂಕುಸಿತ ಉಂಟಾಗಿದ್ದು ಪರಿಣಾಮ ಮನೆ ಹಾನಿಗೀಡಾಗಿದ್ದು, ಮನೆಯಲ್ಲಿ ಮೂವರು ಇದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಲೋನಾವಾಲ ವಿಭಾಗ) ಗಜಾನನ್ ಟೊಂಪೆ ತಿಳಿಸಿದ್ದಾರೆ. ಪುಣೆಯಲ್ಲಿ ನೆಲೆಗೊಂಡಿರುವ ಎನ್ಡಿಆರೆಫ್ನ 5ನೇ ಬೆಟಾಲಿಯನ್ನ 30 ಸದಸ್ಯರ ವಿಶೇಷ ತಂಡವನ್ನು ಪುಣೆಯ ಪಠಾಣ್ ಗ್ರಾಮಕ್ಕೆ ತ್ವರಿತವಾಗಿ ನಿಯೋಜಿಸಲಾಗಿದೆ.
ಸೋಮವಾರ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಮುಂಬೈ-ಪುಣೆ ಎಕ್್ಸಪ್ರೆಸ್ವೇ ಮತ್ತು ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಸುರಕ್ಷತಾ ಅಪಾಯಗಳನ್ನು ಉಲ್ಲೇಖಿಸಿ, ಮುಂದಿನ ಸೂಚನೆ ಬರುವವರೆಗೂ ಮುಂಬೈ ಮತ್ತು ಪುಣೆ ನಡುವೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಜನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾಗರಿಕರು ಪುಣೆ ಮತ್ತು ಮುಂಬೈ ನಡುವಿನ ಅನಿವಾರ್ಯವಲ್ಲದ ಪ್ರಯಾಣವನ್ನು ಮುಂದೂಡಲು ಮತ್ತು ಅಧಿಕಾರಿಗಳು ನೀಡುವ ಸಂಚಾರ ನವೀಕರಣಗಳು ಮತ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಲು ವಿನಂತಿಸಲಾಗಿದೆ ಎಂದು ಸಲಹಾ ಸಂಸ್ಥೆ ತಿಳಿಸಿದೆ. ಖಂಡಾಲಾ ನಿರ್ಗಮನದ ಬಳಿ ಮುಂಬೈ-ಪುಣೆ ಎಕ್್ಸಪ್ರೆಸ್ವೇಯ ಮಿಸ್ಸಿಂಗ್ ಲಿಂಕ್ ವಿಭಾಗದಲ್ಲಿ ಪ್ರಮುಖ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ, ಮುಂಬೈಗೆ ಹೋಗುವ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೃಹನುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತೀವ್ರ ಮಳೆ, ಬಲವಾದ ಗಾಳಿ ಮತ್ತು ಉಬ್ಬರವಿಳಿತದ ಬಗ್ಗೆ ಹವಾಮಾನ ಎಚ್ಚರಿಕೆ ನೀಡಿದೆ.ಮುಂಬೈ ಮತ್ತು ನೆರೆಯ ಥಾಣೆ ಮತ್ತು ರಾಯಗಢ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಿದ್ದು, ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಜಲಪ್ರಳಯ ಮತ್ತು ಭೂಕುಸಿತದಿಂದಾಗಿ ರೈಲು ಸೇವೆಗಳು ಬಾಧಿತವಾಗಿವೆ, ಆದರೆ ಮುಂದಿನ ಸೂಚನೆ ಬರುವವರೆಗೂ ಮುಂಬೈ ಮತ್ತು ಪುಣೆ ನಡುವೆ ಪ್ರಯಾಣಿಸುವುದನ್ನು ತಪ್ಪಿಸಲು ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.
