ಬೆಂಗಳೂರು,ಜು.6-ಬೆಳ್ಳಂಬೆಳಗ್ಗೆ ಚಿಂತಾಮಣಿ ಪಟ್ಟಣದಲ್ಲಿ ಅಕ್ಕ-ತಂಗಿಯರ ಜೋಡಿ ಕೊಲೆ ನಡೆದಿದ್ದು, ಸ್ಥಳೀಯ ಜನತೆ ಬೆಚ್ಚಿಬಿದ್ದಿದ್ದಾರೆ.ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿ ಹಾಗೂ ನಾದಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಂತಾಮಣಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಕೋಲಾರ ನಿವಾಸಿ ಶಮಾ (30) ಹಾಗೂ ಚಿಂತಾಮಣಿಯ ಜೆಜೆ ಕಾಲೋನಿ ನಿವಾಸಿ ರೇಷಾ (20) ಕೊಲೆಯಾದ ದುರ್ದೈವಿಗಳು. ಇವರಿಬ್ಬರು ಸಹೋದರಿಯರು. ಕೋಲಾರ ಟೌನ್ ನಿವಾಸಿಯಾಗಿರುವ ಆರೋಪಿ ಏಜಾಝ್ಖಾನ್ ಪೇಂಟರ್ ಕೆಲಸ ಮಾಡಿಕೊಂಡಿದ್ದಾನೆ. ಏಜಾಝ್ ಮತ್ತು ಶಮಾ ದಂಪತಿಗೆ ಮೂವರು ಮಕ್ಕಳಿದ್ದಾರೆ.
ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಎರಡು ತಿಂಗಳ ಹಿಂದೆ ಕೌಟುಂಬಿಕ ವಿಚಾರಕ್ಕೆ ಮನೆಯಲ್ಲಿ ಜೋರಾದ ಗಲಾಟೆಯಾಗಿದ್ದರಿಂದ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಕೋಲಾರದಿಂದ ಚಿಂತಾಮಣಿಯ ಜೆಜೆ ನಗರದಲ್ಲಿ ವಾಸವಿರುವ ಸಹೋದರಿ ರೇಷಾ ಮನೆಗೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.
ಇದರಿಂದ ಪತಿ ಏಜಾಝ್ಖಾನ್ ಕೋಪಗೊಂಡಿದ್ದನು. ಇಷ್ಟು ದಿನಗಳಾದರೂ ಮನೆಗೆ ವಾಪಸ್ ಬಾರದ ಪತ್ನಿ ಮೇಲೆ ಹಲ್ಲು ಮಸಿಯುತ್ತಿದ್ದ. ಇಂದು ಬೆಳ್ಳಂಬೆಳಗ್ಗೆ ಆತನಿಗೆ ಏನಾಯಿತೋ ಗೊತ್ತಿಲ್ಲ. ಚಾಕು ತೆಗೆದುಕೊಂಡು ಕೋಲಾರದಿಂದ ಚಿಂತಾಮಣಿಯ ನಾದಿನಿ ಮನೆಗೆ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಬಂದಿದ್ದಾನೆ.
ಆ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಮನೆಗೆ ಬರುವಂತೆ ಪತ್ನಿಗೆ ಹೇಳಿದ್ದಾನೆ. ಆದರೆ ಆಕೆ ಇದಕ್ಕೆ ಒಪ್ಪದ ಕಾರಣ ದಂಪತಿ ನಡುವೆ ಮತ್ತೆ ಜಗಳವಾಗಿದೆ.ಗಲಾಟೆ ವಿಕೋಪಕ್ಕೆ ಹೋದಾಗ ಚಾಕುವಿನಿಂದ ಪತ್ನಿ ಶಮಾ ಕುತ್ತಿಗೆಗೆ ಇರಿದಿದ್ದಾನೆ. ಅದನ್ನು ತಡೆಯಲು ಮಧ್ಯೆ ಬಂದ ನಾದಿನಿ ರೇಷಾ ಕುತ್ತಿಗೆಗೂ ಚಾಕುವಿನಿಂದ ಇರಿದಿದ್ದಾನೆ.
ಸಹೋದರಿಯರಿಬ್ಬರೂ ತೀವ್ರ ರಕ್ತ ಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಏಜಾಝ್ಖಾನ್ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಇವರ ಮನೆಯಲ್ಲಿ ಗಲಾಟೆಯಾಗುತ್ತಿರುವು ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಮನೆ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸಹೋದರಿಯರು ಬಿದ್ದಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಚಿಂತಾಮಣಿ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಇಬ್ಬರೂ ಕೊಲೆಯಾಗಿರುವುದು ಕಂಡು ಬಂದಿದೆ. ನೆರೆಹೊರೆಯವರಿಂದ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
ಬೆಳ್ಳಂಬೆಳಗ್ಗೆ ಅಕ್ಕ-ತಂಗಿಯರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆಯಿಂದ ಸ್ಥಳೀಯ ಜನತೆ ಆತಂಕಗೊಂಡಿದ್ದಾರೆ.
