ಬೆಂಗಳೂರು,ಜು.6-ಇಸ್ರೋ ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು.ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ರಸ್ತೆಯಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಅನ್ನು ರಾತ್ರಿ ದುಷ್ಕರ್ಮಿಗಳು ಕಳುಹಿಸಿದ್ದಾರೆ.
ಇಂದು ಬೆಳಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಇ-ಮೇಲ್ ಪರಿಶೀಲಿಸುತ್ತಿದ್ದಾಗ ತಮಿಳು ಭಾಷೆಯಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಗಮನಿಸಿ ಆತಂಕಗೊಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್ ನಂತಹ ವಸ್ತುಗಳು ಪತ್ತೆಯಾಗಿಲ್ಲ. ಇಸ್ರೋ ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆಯೂ ಕೂಡ ಈ ಕೇಂದ್ರಕ್ಕೆ ಇದೇ ರೀತಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ಆ ಸಂದರ್ಭದಲ್ಲಿ ಸಹ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯದಳ ಪರಿಶೀಲಿಸಿದಾಗ ಯಾವುದೇ ಸ್ಫೋಟಕದಂತಹ ವಸ್ತುಗಳು ಕಂಡು ಬಂದಿರಲಿಲ್ಲ.
ಇದನ್ನು ಗಂಭೀರವಾಗಿ ಪರಿಗಣಿಸಿ ಇ-ಮೇಲೆ ಸಂದೇಶ ಎಲ್ಲಿಂದ ಬಂದಿದೆ ಎಂಬುವುದನ್ನು ಪೊಲೀಸರು ತನಿಖೆ ಕೈಗೊಂಡಾಗ ದೆಹಲಿಯ ಗಾಜೀಯಾಬಾದ್ ನಿಂದ ಬಂದಿರುವ ಬಗ್ಗೆ ಮಾಹಿತಿ ಕಲೆಹಾಕಿ ಒಂದು ತಂಡ ಅಲ್ಲಿಗೆ ಹೋಗಿ ಒಬ್ಬನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಒಂದು ವಾರದೊಳಗೆ ಇದು ಎಡನೇ ಬಾರಿ ಬೆದರಿಕೆಯ ಸಂದೇಶ ಕಳುಹಿಸಿರುವುದು ಆತಂಕಕಾರಿಯಾಗಿದೆ.
ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ರೋ ಕೇಂದ್ರದ ಶಾಖಾ ಕಚೇರಿ ಇದ್ದು, ಅಲ್ಲಿಯೂ ಸಹ ತಪಾಸಣೆ ಮಾಡಲಾಗಿದ್ದು ಏನೂ ಪತ್ತೆಯಾಗಿಲ್ಲ. ಇದು ಹುಸಿ ಸಂದೇಶ ಎಂಬುವುದು ಗೊತ್ತಾಗಿದೆ.
ಈ ಸಂದೇಶವನ್ನು ಎಲ್ಲಿಂದ ಕಳುಹಿಸಲಾಗಿದೆ, ಯಾರು ಏತಕ್ಕಾಗಿ ಕಳುಹಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
