Homeರಾಜ್ಯಎಸ್‌‍ಐಆರ್‌ನಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ : ಸಿಎಂ ಡಿಕೆಶಿ

ಎಸ್‌‍ಐಆರ್‌ನಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ : ಸಿಎಂ ಡಿಕೆಶಿ

State government did not interfere in SIR: CM DK Shivakumar

ಬೆಂಗಳೂರು, ಜು.6- ದೇಶದ ಯಾವ ರಾಜ್ಯದಲ್ಲೂ ಇಲ್ಲದಷ್ಟು ಸಹಕಾರವನ್ನು ಚುನಾವಣಾ ಆಯೋಗಕ್ಕೆ ಕರ್ನಾಟಕದಲ್ಲಿ ಎಸ್‌‍ಐಆರ್‌ ನಡೆಸಲು ನೀಡಲಾಗಿದೆ. ಬಿಜೆಪಿ ಮತ್ತು ಜೆಡಿಎಸ್‌‍ನವರು ದೊಡ್ಡ ಕುತಂತ್ರ ಮಾಡಿ ಬಡವರಿಗೆ, ಅಲ್ಪಸಂಖ್ಯಾತರಿಗೆ ತೊಂದರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್‌ ಅವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಎಸ್‌‍ಐಆರ್‌ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ನಮದೂ ಭಿನ್ನಭಿಪ್ರಾಯಗಳಿವೆ. ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಅದರನುಸಾರ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಆಯೋಗ ನಿಗದಿ ಪಡಿಸಿರುವ ಕಾಲ ಮಿತಿಯ ಬಗ್ಗೆ ತಗಾದೆಗಳಿವೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಕರ್ನಾಟಕದಷ್ಟು ಸಹಕಾರವನ್ನು ಬೇರೆ ಯಾವ ರಾಜ್ಯಗಳೂ ಚುನಾವಣಾ ಆಯೋಗಕ್ಕೆ ನೀಡಿಲ್ಲ. ನಾವು ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮತಗಳು ಉಳಿದರೆ, ಜನರ ಬದುಕು ಉಳಿಯುತ್ತದೆ. ಹೀಗಾಗಿ ಪ್ರತಿಯೊಬ್ಬರ ಬದುಕಿನ ರಕ್ಷಣೆ ನಮ ಕರ್ತವ್ಯ ಎಂದು ಹೇಳಿದರು.ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಸ್‌‍ಐಆರ್‌ ನಡೆಯುತ್ತಿದೆ. ಮತ ಹಕ್ಕು ರಕ್ಷಣೆಗೆ ಸರ್ಕಾರ ಜನಜಾಗೃತಿ ಮೂಡಿಸುತ್ತಿದೆ. ಇದು ಬಿಜೆಪಿ ಮತ್ತು ಜೆಡಿಎಸ್‌‍ನವರಿಗೆ ಆತಂಕ ಮೂಡಿಸಿದೆ. ಈ ಮೊದಲು ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ, ಕರ್ನಾಟಕದಲ್ಲೂ ಸಂಚು ನಡೆಸಿದ್ದರು. ಆದರೆ ಅದು ಅವರಿಂದ ಸಾಧ್ಯವಾಗಿಲ್ಲ, ಅದಕ್ಕಾಗಿ ದೂರು ನೀಡಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್‌‍ನವರಿಗೆ ಚುನಾವಣೆ ಆಯೋಗದ ಮೇಲೆ ನಂಬಿಕೆಯಿಲ್ಲ, ಅದಕ್ಕಾಗಿ ಅಡ್ಡಿ ಪಡಿಸುತ್ತಿದ್ದಾರೆ. ರಾಜ್ಯದಲ್ಲಿ 4.5 ಕೋಟಿ ಜನ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ತಹಸೀಲ್ದಾರ್‌ ಮತ್ತು ಉಪ ತಹಸೀಲ್ದಾರ್‌ರವರಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡಲು ಅಧಿಕಾರ ನೀಡಲಾಗಿದೆ. 2002ರ ಮತದಾರರ ಪಟ್ಟಿ ದಾಖಲೆಗಳನ್ನು ಹುಡುಕಲು ಕೆಲವರಿಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.

ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರು ಯಾರು?, ಬಾಂಗ್ಲಾದವರು ಹೇಗೆ ನುಸುಳಿ ಬಂದರು?, ಅವರನ್ನು ಇಷ್ಟು ದಿನ ಗಡಿಪಾರು ಮಾಡದೇ ಇದ್ದದ್ದೇಕೆ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

ಇಲ್ಲಿ ಯಾರೂ ಬಾಂಗ್ಲಾ ದೇಶದವರು ಇಲ್ಲ, ವಿರೋಧ ಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯೆ, ಬುದ್ಧಿ ಇಲ್ಲದ ಜನರಿಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದ್ದು, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ಇದ್ದವರಿಗೆ ಪಡಿತರ ನೀಡುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜಾರಿಗೊಳಿಸಲಾಗಿದೆ.

ನಮ ಈ ನಿರ್ಧಾರಗಳು ಸರಿ ಎಂದು ಬಿಜೆಪಿ ಹಾಗೂ ಇತರ ಪಕ್ಷದವರು ಒಪ್ಪಿಕೊಂಡು ಬೇರೆ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರುತ್ತಿದ್ದಾರೆ. ಬಿಹಾರದಲ್ಲಿ 10 ತಿಂಗಳ ಹಣವನ್ನು ಒಮೆಲೆ ಕೊಟ್ಟಿದ್ದಾರೆ ಎಂದು ಹೇಳಿದರು.ಎಸ್‌‍ಐಆರ್‌ಗಾಗಿ ಪ್ರತಿ ಬೂತ್‌ನಲ್ಲೂ ಹೆಲ್‌್ಪ ಡೆಸ್ಕ್‌ಗಳನ್ನು ಆರಂಭಿಸಲಾಗಿದೆ. ಸಚಿವರು, ಶಾಸಕರ ಜೊತೆ ಚರ್ಚೆ ಮಾಡಿ ಎಚ್ಚರದಿಂದಿರುವಂತೆ ಸೂಚಿಸಿದ್ದೇವೆ. ನಮ ಈ ಕೆಲಸಗಳಿಗೆ ಅಭಿನಂದನೆ ಸಲ್ಲಿಸಬೇಕಿತ್ತು. ಆದರೆ ಟೀಕೆಗಳು ಮಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದರು.

ಈಗ ನಡೆದಿರುವ ಎಸ್‌‍ಐಆರ್‌ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆ ಬಗ್ಗೆ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು. ಅದು ನಮ ಕೆಲಸ ಅಲ್ಲ. ಜನರ ಹಕ್ಕುಗಳನ್ನು ರಕ್ಷಿಸುವುದು ನಮ ಕೆಲಸ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ ಎಂದರು. ಬಸವಣ್ಣನ ನಾಡು, ಬಸವ ಕಲ್ಯಾಣದಿಂದ ಇಂದಿನಿಂದ ತಾವು ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ಕಲಬುರಗಿಯಲ್ಲಿ ಬರ ಪರಿಸ್ಥಿತಿಯ ಪ್ರಗತಿ ಪರಿಶೀಲನೆ ನಡೆಸುತ್ತೇನೆ.

ಎರಡು, ಮೂರು ದಿನಗಳಿಂದ ಮಳೆಯಾಗಿ ಆಲಮಟ್ಟಿ, ತುಂಗಭದ್ರಾ ಅಣೆಕಟ್ಟುಗಳು ತುಂಬುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗಿದೆ. ಕೆರೆಗಳನ್ನು ತುಂಬಿಸುವುದು, ನೀರು ಪೂರೈಕೆ ನಮ ಆದ್ಯತೆ ಎಂದು ಹೇಳಿದರು.ಬಾಬು ಜಗಜೀವನ್‌ ರಾಮ್‌ ಪುಣ್ಯಸರಣೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೆ.ಎಚ್‌.ಮುನಿಯಪ್ಪ, ಡಾ.ಯತೀಂದ್ರ, ಶಾಸಕರಾದ ಟಿ.ಬಿ.ಜಯಚಂದ್ರ, ರಿಜ್ವಾನ್‌ ಅರ್ಷದ್‌, ಮಾಜಿ ಸಚಿವ ಎಚ್‌.ಆಂಜನೇಯ ಉಪಸ್ಥಿತರಿದ್ದರು.

RELATED ARTICLES
spot_img

Latest News