ಬೆಂಗಳೂರು, ಜುಲೈ 6: ಭಾರತದ ವೇಗವಾಗಿ ಬೆಳೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಆಧಾರಿತ ಇಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಕ ಓಬೆನ್ ಇಲೆಕ್ಟ್ರಿಕ್ ತನ್ನ ಹೊಸ ರೋರ್ ಇವೊ (Rorr EZ Evo) ಇಲೆಕ್ಟ್ರಿಕ್ ಮೋಟಾರ್ಸೈಕಲ್ನ ಗ್ರಾಹಕರಿಗೆ ವಿತರಣೆಯನ್ನು ಅಧಿಕೃತವಾಗಿ ಆರಂಭಿಸಿದೆ. ಬೆಂಗಳೂರಿನಲ್ಲಿ ನಡೆದ “ಫಸ್ಟ್ ಟು ರೋರ್” ಕಾರ್ಯಕ್ರಮದ ಮೂಲಕ ಮೊದಲ ಬ್ಯಾಚ್ ಗ್ರಾಹಕರಿಗೆ ವಾಹನ ಹಸ್ತಾಂತರಿಸಲಾಗಿದ್ದು, ಮುಂದಿನ ಕೆಲ ವಾರಗಳಲ್ಲಿ ದೇಶಾದ್ಯಂತ 150ಕ್ಕೂ ಹೆಚ್ಚು ಶೋರೂಮ್ಗಳ ಮೂಲಕ ವಿತರಣೆ ಹಂತ ಹಂತವಾಗಿ ಆರಂಭವಾಗಲಿದೆ.
ಕಂಪನಿಯ ಮಾಹಿತಿಯಂತೆ, ಮೇ 2026ರಲ್ಲಿ ಬಿಡುಗಡೆಯಾದ ಕೇವಲ 15 ದಿನಗಳಲ್ಲೇ ರೋರ್ ಇವೊಗೆ 25,000ಕ್ಕೂ ಅಧಿಕ ಬುಕ್ಕಿಂಗ್ಗಳು ದಾಖಲಾಗಿದ್ದು, ಇದು ಈ ವಿಭಾಗದಲ್ಲಿ ಅತ್ಯಂತ ವೇಗವಾಗಿ ಬೇಡಿಕೆ ಪಡೆದ ಇಲೆಕ್ಟ್ರಿಕ್ ಮೋಟಾರ್ಸೈಕಲ್ಗಳಲ್ಲಿ ಒಂದಾಗಿದೆ. ಈ ಹಿನ್ನೆಲೆ ವಾರ್ಷಿಕ 1 ಲಕ್ಷ ಮೋಟಾರ್ಸೈಕಲ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ತನ್ನ ಉತ್ಪಾದನಾ ಘಟಕದ ನೆರವಿನಿಂದ ಗ್ರಾಹಕರಿಗೆ ವೇಗವಾಗಿ ವಾಹನ ವಿತರಣೆ ಮಾಡಲು ಕಂಪನಿ ಮುಂದಾಗಿದೆ.
ಪ್ರಸ್ತುತ ಓಬೆನ್ ಇಲೆಕ್ಟ್ರಿಕ್ 18 ರಾಜ್ಯಗಳ 90ಕ್ಕೂ ಹೆಚ್ಚು ನಗರಗಳಲ್ಲಿ 150ಕ್ಕೂ ಹೆಚ್ಚು ಶೋರೂಮ್ಗಳು ಹಾಗೂ ಓಬೆನ್ ಕೇರ್ ಸೇವಾ ಕೇಂದ್ರಗಳ ಜಾಲವನ್ನು ಹೊಂದಿದ್ದು, ದೇಶಾದ್ಯಂತ ತನ್ನ ಮಾರಾಟ ಮತ್ತು ಸೇವಾ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.
ಇವಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೋಟಾರ್ಸೈಕಲ್ಗಳ ಪಾಲು ಸುಮಾರು 65 ಶೇಕಡಾ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಉತ್ತಮ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿರುವ ಇಲೆಕ್ಟ್ರಿಕ್ ಮೋಟಾರ್ಸೈಕಲ್ಗಳತ್ತ ಗ್ರಾಹಕರ ಒಲವು ಹೆಚ್ಚುತ್ತಿದ್ದು, ಇವು ದೇಶದ ಸ್ವಚ್ಛ ಸಾರಿಗೆ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿ ಸಿಇಒ ಹೇಳಿದ್ದೇನು?
ಓಬೆನ್ ಇಲೆಕ್ಟ್ರಿಕ್ ಸಂಸ್ಥಾಪಕಿ ಹಾಗೂ ಸಿಇಒ ಮಧುಮಿತಾ ಅಗರ್ವಾಲ್ ಮಾತನಾಡಿ, “ಹೆಚ್ಚಿನ ಬೇಡಿಕೆ ಸಾಧಿಸುವುದು ಒಂದು ಮೈಲಿಗಲ್ಲಾದರೆ, ಆ ಬೇಡಿಕೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದು ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತದೆ. ರೋರ್ ಇವೊ ವಿತರಣೆಯ ಆರಂಭ ನಮ್ಮ ಪಾಲಿಗೆ ಮಹತ್ವದ ಘಟ್ಟವಾಗಿದೆ. ಭಾರತದ ಮೋಟಾರ್ಸೈಕಲ್ ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸುವ ದಿಸೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಗುಣಮಟ್ಟ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಅನುಭವ ನೀಡಲು ನಾವು ಬದ್ಧರಾಗಿದ್ದೇವೆ,” ಎಂದು ಹೇಳಿದರು.
ರೋರ್ ಇವೊ ವಿಶೇಷತೆಗಳು
₹1,24,999 (ಎಕ್ಸ್ ಶೋರೂಂ) ಬೆಲೆಯ ರೋರ್ ಇವೊ ಹಲವು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.
9 ಕಿಲೋವಾಟ್ ಸಾಮರ್ಥ್ಯದ ಮೋಟಾರ್
3.4 kWh ಎಲ್ಎಫ್ಪಿ ಬ್ಯಾಟರಿ
ಗರಿಷ್ಠ ವೇಗ: ಗಂಟೆಗೆ 110 ಕಿ.ಮೀ.
ಒಂದೇ ಚಾರ್ಜ್ನಲ್ಲಿ 180 ಕಿ.ಮೀ.ವರೆಗೆ ಚಾಲನಾ ಶ್ರೇಣಿ (ಕಂಪನಿ ಹೇಳಿಕೆ)
0 ರಿಂದ 40 ಕಿ.ಮೀ. ವೇಗವನ್ನು ಕೇವಲ 3 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯ
90 ನಿಮಿಷಗಳಲ್ಲಿ 0–80% ಫಾಸ್ಟ್ ಚಾರ್ಜಿಂಗ್
8 ವರ್ಷಗಳ ಬ್ಯಾಟರಿ ವಾರಂಟಿ
ಇದಲ್ಲದೆ, ಕಂಪನಿಯ SmartIQ™ ಎಐ ಆಧಾರಿತ ರೈಡ್ ಆಪ್ಟಿಮೈಸೇಶನ್ ತಂತ್ರಜ್ಞಾನ, 15% ವರೆಗೆ ಹೆಚ್ಚುವರಿ ರೇಂಜ್, ಪ್ರೊಜೆಕ್ಟರ್ ಹೆಡ್ಲ್ಯಾಂಪ್, 5 ಇಂಚಿನ ಬಣ್ಣದ TFT ಡಿಸ್ಪ್ಲೇ, ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಓಟಿಎ ಅಪ್ಡೇಟ್, ಜಿಯೋ-ಫೆನ್ಸಿಂಗ್, ತುರ್ತು ಎಸ್ಒಎಸ್, ಫಾಲ್ ಡಿಟೆಕ್ಷನ್ ಹಾಗೂ ರಿಮೋಟ್ ಇಮೊಬಿಲೈಸೇಶನ್ ಸೇರಿದಂತೆ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸ್ವದೇಶಿ ತಂತ್ರಜ್ಞಾನಕ್ಕೆ ಒತ್ತು
ಎಲ್ಎಫ್ಪಿ ಬ್ಯಾಟರಿ, ಮೋಟಾರ್, ವಾಹನ ನಿಯಂತ್ರಣ ಘಟಕ (VCU), ಚಾರ್ಜರ್ ಹಾಗೂ ಸಾಫ್ಟ್ವೇರ್ ಸೇರಿದಂತೆ ಪ್ರಮುಖ ಇವಿ ತಂತ್ರಜ್ಞಾನಗಳನ್ನು ಕಂಪನಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ಉತ್ಪಾದಿಸುತ್ತಿದೆ. ಇದರಿಂದ ಗುಣಮಟ್ಟ, ತಂತ್ರಜ್ಞಾನ ಹಾಗೂ ಪೂರೈಕೆ ಸರಪಳಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಓಬೆನ್ ಇಲೆಕ್ಟ್ರಿಕ್, ದೇಶಾದ್ಯಂತ ತನ್ನ ವಿಸ್ತರಣೆಗೆ ಸಜ್ಜಾಗಿದೆ.
