ಬೇಲೂರು, ಜು.7- ಕಲ್ಲಿದ್ದಲು ತುಂಬಿಕೊಂಡು ಸಾಗುತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಲಾರಿ ಹೊತ್ತಿ ಉರಿದ ಘಟನೆ ತಾಲೂಕಿನ ಹೆಬ್ಬಾಳು ಸಮೀಪದ ಬೇಲೂರು-ಹಳೇಬೀಡು ರಸ್ತೆಯಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಗಳೂರಿನಿಂದ ಹಿರಿಯೂರು ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ಗಮನಿಸಿದ ಚಾಲಕ ತಕ್ಷಣವೇ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಳಗಿಳಿದು ಏನಾಯಿತು ಎಂದು ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಲಾರಿಯ ಕ್ಯಾಬಿನ್‌ಗೆ ಬಹುತೇಕ ಬೆಂಕಿ ವ್ಯಾಪಿಸಿ ಚಾಲಕನ ಕಣ್ಣೆದುರೆ ಸುಟ್ಟುಹೋಗಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ನಿಯಂತ್ರಣಕ್ಕೆ ತಂದರೂ ಲಾರಿ ಮುಂಭಾಗ ಮಾತ್ರ ಪೂರ್ತಿ ಸುಟ್ಟು ಹೋಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
