ನವದೆಹಲಿ, ಜು. 12- ರಷ್ಯಾದ ಒಟ್ಟಾರೆ ತೈಲ ರಫ್ತು ಆದಾಯ ಕುಸಿದಿದ್ದರೂ, ಭಾರತವು ಜೂನ್ ತಿಂಗಳಲ್ಲಿ ರಷ್ಯಾದಿಂದ ದಾಖಲೆಯ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಇಂಧನ ಮತ್ತು ಶುದ್ಧ ವಾಯು ಸಂಶೋಧನಾ ಕೇಂದ್ರದ (ಸಿಆರ್‌ಇಎ) ವರದಿ ತಿಳಿಸಿದೆ.
ವರದಿಯ ಪ್ರಕಾರ, ಭಾರತವು ಜೂನ್‌ನಲ್ಲಿ 4.5 ಬಿಲಿಯನ್ ಯುರೋ ಮೌಲ್ಯದ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ. ಇದು ಭಾರತದ ಒಟ್ಟು 5.5 ಬಿಲಿಯನ್ ಯುರೋ ಮೌಲ್ಯದ ರಷ್ಯಾದ ಪಳೆಯುಳಿಕೆ ಇಂಧನ (ಫಾಸಿಲ್ ಫ್ಯುಯೆಲ್) ಆಮದುಗಳಲ್ಲಿ ಶೇಕಡಾ 83ರಷ್ಟು ಪಾಲು ಹೊಂದಿದೆ. ಈ ಮೂಲಕ ಅತಿದೊಡ್ಡ ಖರೀದಿದಾರ ರಾಷ್ಟ್ರಗಳಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ.
ಭಾರತದ ಒಟ್ಟಾರೆ ಕಚ್ಚಾ ತೈಲ ಆಮದು ಮೇ ತಿಂಗಳಿಗೆ ಹೋಲಿಸಿದರೆ ಶೇಕಡಾ 5.4ರಷ್ಟು ಏರಿಕೆಯಾಗಿದ್ದು, ಪ್ರಮುಖ ಸಂಸ್ಕರಣಾಗಾರಗಳಿಗೆ ರಷ್ಯಾದಿಂದ ತೈಲ ಪೂರೈಕೆ ಗಣನೀಯವಾಗಿ ಹೆಚ್ಚಾಗಿದೆ.
ರಿಲಯನ್‌್ಸ ಇಂಡಸ್ಟ್ರೀಸ್‌ನ ಜಾಮ್‌ನಗರ ಸಂಸ್ಕರಣಾಗಾರಕ್ಕೆ ರಷ್ಯಾದಿಂದ ಆಗಮಿಸಿದ ಕಚ್ಚಾ ತೈಲ ಪೂರೈಕೆ ಮೇ ತಿಂಗಳಿಗೆ ಹೋಲಿಸಿದರೆ ಶೇಕಡಾ 150ರಷ್ಟು ಹೆಚ್ಚಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಪರದೀಪ್ ಸಂಸ್ಕರಣಾಗಾರದಲ್ಲಿ ಶೇಕಡಾ 126ರಷ್ಟು, ಭಾರತ್ ಪೆಟ್ರೋಲಿಯಂನ ಕೊಚ್ಚಿ ಸಂಸ್ಕರಣಾಗಾರದಲ್ಲಿ ಶೇಕಡಾ 83ರಷ್ಟು ಹಾಗೂ ನಾಯರಾ ಎನರ್ಜಿ ಸಂಸ್ಥೆಯ ವಡಿನಾರ್ ಸಂಸ್ಕರಣಾಗಾರದಲ್ಲಿ ಶೇಕಡಾ 45ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಲಾದ ಪೆಟ್ರೋಲಿಯಂ ಉತ್ಪನ್ನಗಳ ಜಾಗತಿಕ ವ್ಯಾಪಾರದಲ್ಲೂ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತ, ಟರ್ಕಿ, ಬ್ರೂನೈ ಮತ್ತು ಜಾರ್ಜಿಯಾದ ಸಂಸ್ಕರಣಾಗಾರಗಳು ಜೂನ್‌ನಲ್ಲಿ ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಸೇರಿದಂತೆ ರಷ್ಯಾ ಮೇಲೆ ನಿರ್ಬಂಧ ಹೇರಿರುವ ದೇಶಗಳಿಗೆ ಒಟ್ಟು 814 ಮಿಲಿಯನ್ ಯುರೋ ಮೌಲ್ಯದ ತೈಲ ಉತ್ಪನ್ನಗಳನ್ನು ರಫ್ತು ಮಾಡಿವೆ. ಇದರಲ್ಲಿ ಸುಮಾರು 369 ಮಿಲಿಯನ್ ಯುರೋ ಮೌಲ್ಯದ ಉತ್ಪನ್ನಗಳು ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಲ್ಪಟ್ಟಿದ್ದವು.
ಅಲ್ಲದೆ, ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಿದ ಡೀಸೆಲ್ ಮತ್ತು ವಿಮಾನ ಇಂಧನ (ಜೆಟ್ ಫ್ಯುಯೆಲ್) ಆಮದಿಗೆ ನೀಡಿದ್ದ ವಿನಾಯಿತಿ ಬಳಿಕ, ಭಾರತದ ಜಾಮ್‌ನಗರ ಸಂಸ್ಕರಣಾಗಾರದಿಂದ ಸುಮಾರು 63 ಮಿಲಿಯನ್ ಯುರೋ ಮೌಲ್ಯದ ಮೊದಲ ಜೆಟ್ ಇಂಧನ ಸರಕನ್ನು ಬ್ರಿಟನ್‌ನ ಥೇಮ್ಸೌ ಹೇವನ್ ಮತ್ತು ಐಲ್ ಆಫ್ ಗ್ರೇನ್ ಬಂದರುಗಳಿಗೆ ಜೂನ್‌ನಲ್ಲಿ ತಲುಪಿಸಲಾಗಿದೆ ಎಂದು ವರದಿ ತಿಳಿಸಿದೆ.
ರಷ್ಯಾದ ಸಮುದ್ರ ಮಾರ್ಗದ ತೈಲ ರಫ್ತಿನಲ್ಲಿ ನಿರ್ಬಂಧಕ್ಕೊಳಗಾಗಿರುವ ಶಾಡೋ ಫ್ಲೀಟ್ ಟ್ಯಾಂಕರ್‌ಗಳ ಪಾತ್ರವೂ ಮುಂದುವರಿದಿದ್ದು, ಜೂನ್‌ನಲ್ಲಿ ರಷ್ಯಾದ ಸಮುದ್ರ ಮಾರ್ಗದ ತೈಲ ರಫ್ತಿನ ಶೇಕಡಾ 54ರಷ್ಟು ಇಂತಹ ಟ್ಯಾಂಕರ್‌ಗಳ ಮೂಲಕ ಸಾಗಿಸಲಾಗಿದೆ. ಇನ್ನೂ ಶೇಕಡಾ 43ರಷ್ಟು ತೈಲವನ್ನು ಜಿ.7 ರಾಷ್ಟ್ರಗಳ ವಿಮೆ ಅಥವಾ ಮಾಲೀಕತ್ವ ಹೊಂದಿರುವ ಹಡಗುಗಳು ಸಾಗಿಸಿವೆ ಎಂದು ವರದಿ ತಿಳಿಸಿದೆ.
