ಬೆಂಗಳೂರು, ಜು.14- ಕಸ ವಿಲೇವಾರಿ ನಿಯಮ ಉಲ್ಲಂಘಿಸಿರುವ ಸುಮಾರು 5 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ 7 ದಿನಗಳೊಳಗೆ ಉತ್ತರ ನೀಡದಿದ್ದರೆ ಹಾಗೂ ನಿಯಮ ಪಾಲಿಸದಿದ್ದರೆ 15 ಸಾವಿರದವರೆಗೆ ದಂಡ, ಮರು ಉಲ್ಲಂಘನೆ ಮಾಡಿದರೆ 30 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಂಡಳಿಯ ಸೂಚನೆಯಂತೆ ಹೋಟೆಲ್‌ಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಚೌಲ್ಟ್ರಿಗಳು ಹಾಗೂ ಐಟಿ ಕಂಪನಿಗಳು ತಮ್ಮ ತ್ಯಾಜ್ಯವನ್ನು ಸ್ಥಳದಲ್ಲೇ ಸಂಸ್ಕರಿಸಬೇಕು ಅಥವಾ ಅಧಿಕೃತ ವೆಂಡರ್‌ಗಳಿಗೆ ಮಾತ್ರ ಹಸ್ತಾಂತರಿಸಬೇಕು. ಈ ಎರಡೂ ಸಾಧ್ಯವಾಗದಿದ್ದರೆ ಮಾತ್ರ ಜಿಬಿಎ ಕಸದ ವಾಹನಗಳಿಗೆ ತ್ಯಾಜ್ಯ ನೀಡಬೇಕು.
ನೋಟಿಸ್ ಪಡೆದವರು ಸ್ಥಳದಲ್ಲೇ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದ್ದಾರೆಯೇ, ಅಧಿಕೃತ ವೆಂಡರ್‌ಗೆ ನೀಡುತ್ತಿದ್ದಾರೆಯೇ ಅಥವಾ ಜಿಬಿಎ ಮೂಲಕ ವಿಲೇವಾರಿ ಮಾಡುತ್ತಿದ್ದಾರೆಯೇ ಎಂಬ ವಿವರವನ್ನು 7 ದಿನಗಳೊಳಗೆ ಲಿಖಿತವಾಗಿ ತಿಳಿಸಬೇಕು ಎಂದು ಸೂಚಿಸಲಾಗಿದೆ.
ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡುವವರನ್ನು ಗುರುತಿಸಿ ಕಸದ ಪ್ರಮಾಣಕ್ಕೆ ಅನುಗುಣವಾಗಿ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಮಂಡಳಿ ಮುಂದಾಗಿದೆ. ನಗರದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
