Homeರಾಜ್ಯಅಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ

ಅಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ

All preparations in Chamundi Hills for Ashadh Friday

ಮೈಸೂರು, ಜು.15- ಅಷಾಢ ಮಾಸದ ಶುಕ್ರವಾರಗಳು ಮತ್ತು ಚಾಮುಂಡೇಶ್ವರಿ ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಕಾಂತ ರೆಡ್ಡಿ ಜಿ ತಿಳಿಸಿದರು. ಚಾಮುಂಡಿ ಬೆಟ್ಟದಲ್ಲಿ ಪರಿಶೀಲನೆ ನಡೆಸಿ ನಂತರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಜು. 17, 24, 31 ಮತ್ತು ಆ.7 ರಂದು 4 ಅಷಾಢ ಶುಕ್ರವಾರಗಳು ಜರುಗಲಿವೆ. ಆ. 4 ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಆಚರಣೆ ನಡೆಯಲಿದೆ ಎಂದು ಅವರು ಹೇಳಿದರು.

ಬಸ್‌‍ ಮತ್ತು ಕಾಲ್ನಡಿಗೆ ವ್ಯವಸ್ಥೆ :
ಅಷಾಢದ 4 ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಲಿತ ಮಹಲ್‌ ಹೆಲಿಪ್ಯಾಡ್‌ ಮತ್ತು ಕೆ.ಎಸ್‌‍.ಆರ್‌.ಟಿ.ಸಿ ನಗರ ಬಸ್‌‍ ನಿಲ್ದಾಣದಿಂದ ಬೆಳಿಗ್ಗೆ 6.30 ಕ್ಕೆ ಬಸ್‌‍ ಸಂಚಾರ ಆರಂಭವಾಗಲಿದೆ. ರಾತ್ರಿ 8.30 ಕ್ಕೆ ಕೊನೆಯ ಬಸ್‌‍ ಇರಲಿದೆ.ಬೆಟ್ಟದ ಪಾದದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಳಿಗ್ಗೆ 5 ಗಂಟೆಯ ನಂತರ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರು ಬೆಳಿಗ್ಗೆ 5 ಗಂಟೆಗೆ ಮೊದಲು ಬಂದು ಕಾಯುವುದು ಬೇಡ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಚಪ್ಪಲಿ ಸ್ಟಾಂಡ್‌ ವ್ಯವಸ್ಥೆ ಇರುವುದಿಲ್ಲ :
ಚಾಮುಂಡಿ ಬೆಟ್ಟದ ಮೇಲೆ ಯಾವುದೇ ಚಪ್ಪಲಿ ಸ್ಟಾಂಡ್‌ ವ್ಯವಸ್ಥೆ ಇರುವುದಿಲ್ಲ. ಭಕ್ತರು ಲಲಿತ ಮಹಲ್‌ ಹೆಲಿಪ್ಯಾಡ್‌ ಮತ್ತು ನಗರ ಬಸ್‌‍ ನಿಲ್ದಾಣದಲ್ಲಿ ಇರುವ ಚಪ್ಪಲಿ ಸ್ಟಾಂಡ್‌ಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿ.ಐ.ಪಿ ದರ್ಶನ ಮತ್ತು ವಾಹನ ನಿರ್ಬಂಧ :
ಶಿಷ್ಟಾಚಾರದಡಿ ಬರುವ ಗಣ್ಯರು, ವಿ.ಐ.ಪಿ ಗಳಿಗೆ ಬೆಳಿಗ್ಗೆ 5.30 ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ. ಬೆಳಿಗ್ಗೆ 10 ಗಂಟೆಯ ನಂತರ ಎಲ್ಲಾ ಗಣ್ಯರ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು.ಅಷಾಢ ಶುಕ್ರವಾರ ಮತ್ತು ವರ್ಧಂತಿ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧ. ಡ್ಯೂಟಿ ಪಾಸ್‌‍ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ಇರುತ್ತದೆ.

ಕಂಟ್ರೋಲ್‌ ರೂಂ ಮತ್ತು ಇತರೆ ವ್ಯವಸ್ಥೆ :
ಸಾರ್ವಜನಿಕ ದರ್ಶನ ಮತ್ತು 2000 ರೂಪಾಯಿ ವಿಶೇಷ ದರ್ಶನದ ಸರತಿ ಸಾಲುಗಳ ಮೇಲುಸ್ತುವಾರಿಗೆ ಕಂಟ್ರೋಲ್‌ ರೂಂ ಸ್ಥಾಪಿಸಲಾಗುವುದು. ನಗರ ಪೊಲೀಸ್‌‍ ಉಪ ಆಯುಕ್ತೆ, ಕೆ.ಎಸ್‌‍.ಆರ್‌.ಟಿ.ಸಿ ಜಿಲ್ಲಾ ನಿಯಂತ್ರಣಾಧಿಕಾರಿ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸೇರಿದ 3 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.

ಸರದಿ ಸಾಲಿನಲ್ಲಿ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವಂತೆ ಮತ್ತು 2000 ರೂಪಾಯಿ ಟಿಕೆಟ್‌ ಇಲ್ಲದವರು ಆ ಸಾಲಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು. ಅಂದಾಜು ದರ್ಶನ ಸಮಯದ ಮಾಹಿತಿ ಫಲಕವನ್ನು ಅಳವಡಿಸಲು ತಿಳಿಸಲಾಯಿತು. ಅಗತ್ಯವಿರುವ ಕಡೆ ಮೊಬೈಲ್‌ ಶೌಚಾಲಯ, ಕಸದ ಬುಟ್ಟಿ ಮತ್ತು ಸರತಿ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು.

ಸಭೆಯಲ್ಲಿ ಮೈಸೂರು ನಗರ ಪೊಲೀಸ್‌‍ ಆಯುಕ್ತೆ ಸೀಮಾ ಲಾಟ್ಕರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ ಕುಮಾರ್‌, ನಗರ ಪೊಲೀಸ್‌‍ ಉಪ ಆಯುಕ್ತೆ ಹರ್ಷ ಪ್ರಿಯಾವರ್ಧನ, ಡಿಸಿಪಿ ಸುಂದರ್‌ ರಾಜ್‌, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News