ನವದೆಹಲಿ, ಜು.23- ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಅನುಷ್ಠಾನದಲ್ಲಿ ವಿಳಂಬವಾಗಲು ಖಾಸಗಿ ಭೂಸ್ವಾಧೀನ ಹಾಗೂ ರಾಜ್ಯ ಸರ್ಕಾರದ ಭೂಮಿ ವರ್ಗಾವಣೆಯಲ್ಲಿ ಉಂಟಾದ ವಿಳಂಬವೇ ಪ್ರಮುಖ ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ರೈಲ್ವೆ ಸಚಿವರು, 148.17 ಕಿ.ಮೀ. ಉದ್ದದ ಬೆಂಗಳೂರು ಉಪನಗರ ಸಾರಿಗೆ ಯೋಜನೆ (ಬಿಎಸ್ಟಿಪಿ)ಯನ್ನು ಕೆ-ರೈಡ್ ಸಂಸ್ಥೆ ಜಾರಿಗೊಳಿಸುತ್ತಿದ್ದು, ಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರದ ಶೇ.51ರಷ್ಟು ಪಾಲುದಾರಿಕೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಯೋಜನೆಗೆ 15,767 ಕೋಟಿ ವೆಚ್ಚ ಮಂಜೂರಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟು ಹಣಕಾಸು ಒದಗಿಸುತ್ತಿವೆ. ಉಳಿದ ಶೇ.60ರಷ್ಟನ್ನು ಸಾಲದ ಮೂಲಕ ಭರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಯೋಜನೆಯ ಅನುಷ್ಠಾನ ವಿಳಂಬಕ್ಕೆ ಖಾಸಗಿ ಭೂಸ್ವಾಧೀನ ಪೂರ್ಣಗೊಳ್ಳದಿರುವುದು ಹಾಗೂ ಕರ್ನಾಟಕ ಸರ್ಕಾರದಿಂದ ಸರ್ಕಾರಿ ಭೂಮಿಯನ್ನು ಕೆ-ರೈಡ್ಗೆ ವರ್ಗಾಯಿಸದಿರುವುದು ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದರ ಜೊತೆಗೆ, ಕೆ-ರೈಡ್ ಸಂಸ್ಥೆಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗದಿರುವುದೂ ಯೋಜನೆಯ ವೇಗ ಕುಂಠಿತಗೊಳ್ಳಲು ಕಾರಣವಾಗಿದೆ. ರಾಜ್ಯ ಸರ್ಕಾರ ಇದೀಗ ಪೂರ್ಣಾವಧಿ ಎಂಡಿಯನ್ನು ನೇಮಕ ಮಾಡಿರುವುದರಿಂದ ಕಾಮಗಾರಿ ವೇಗ ಪಡೆಯುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಾರಿಡಾರ್ಗಳ ಕಾಮಗಾರಿ ಸ್ಥಿತಿ:
ಕಾರಿಡಾರ್-1 ಮಾರ್ಗಕ್ಕೆ ಸಂಪಿಗೆ ಎಂದು ನಾಮಕರಣ ಮಾಡಲಾಗಿದೆ. ಕೆಎಸ್ಆರ್ ಬೆಂಗಳೂರು ನಗರ ದೇವನಹಳ್ಳಿ 41.4 ಕಿ.ಮೀ. ಉದ್ದವಿದೆ. ಅಲೈನ್ಮೆಂಟ್ ಅನುಮೋದನೆಗೊಂಡಿದೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಪ್ರಗತಿಯಲ್ಲಿದೆ. ಸಿಗ್ನಲಿಂಗ್, ದೂರಸಂಪರ್ಕ ಹಾಗೂ ವಿದ್ಯುತ್ ಸೌಲಭ್ಯಗಳ ಸ್ಥಳಾಂತರ ಕಾಮಗಾರಿ ಆರಂಭವಾಗಿದೆ ಎಂದು ವಿವರಿಸಲಾಗಿದೆ.
ಕಾರಿಡಾರ್-2 ಮಲ್ಲಿಗೆ ಎಂದು ನಾಮಕರಣ ಮಾಡಲಾಗಿದ್ದು, ಬೈಯಪ್ಪನಹಳ್ಳಿ ಚಿಕ್ಕಬಾಣಾವರದ ವರೆಗೂ 25.01 ಕಿ.ಮೀ. ಉದ್ದವಿದೆ. ಭೂಸ್ವಾಧೀನ ಸಂಪೂರ್ಣ ಪೂರ್ಣಗೊಂಡಿದೆ. ನಿಲ್ದಾಣ ಕಟ್ಟಡಗಳ ಕಾಮಗಾರಿಗೆ ಪ್ರತ್ಯೇಕ ಗುತ್ತಿಗೆ ನೀಡಲಾಗಿದ್ದು ನಿರ್ಮಾಣ ಕಾರ್ಯ ನಡೆಯುತ್ತಿದೆ. ಉಳಿದ ಕಾಮಗಾರಿಗಳಿಗೂ ಗುತ್ತಿಗೆ ನೀಡಿ ಅನುಷ್ಠಾನ ಆರಂಭಿಸಲಾಗಿದೆ ಎಂದು ತಿಳಿಸಲಾಗಿದೆ.
ಕಾರಿಡಾರ್-3ಕ್ಕೆ ಪಾರಿಜಾತ ಎಂದು ಹೆಸರಿಸಲಾಗಿದ್ದು, ಕೆೆಂಗೇರಿ ವೈಟ್ಫೀಲ್ಡ್ವರೆಗೂ 35.52 ಕಿ.ಮೀ. ಉದ್ದವಿದೆ. ಅಲೈನಮೆಂಟ್ ಅನುಮೋದನೆಗೊಂಡಿದೆ. ಭೂಸ್ವಾಧೀನ ಹಾಗೂ ಯುಟಿಲಿಟಿ ಸ್ಥಳಾಂತರ ಕಾಮಗಾರಿ ಪ್ರಗತಿಯಲ್ಲಿದೆ.
ಕಾರಿಡಾರ್-4ಕ್ಕೆ ಕನಕ ಎಂದು ನಾಮಕರಣ ಮಾಡಲಾಗಿದೆ. ಎಲೆಕ್ಟ್ರಾನಿಕ್ಸಿಟಿ ಬಳಿಯ ಹೀಲಲಿಗೆಯಿಂದ ರಾಜಾನುಕುಂಟೆವರೆಗೂ 46.25 ಕಿ.ಮೀ. ಉದ್ದವಿದೆ. ಭೂಸ್ವಾಧೀನ ಕಾಮಗಾರಿ ಮುಂದುವರಿದಿದೆ. ಅಗತ್ಯವಿರುವ 57 ಎಕರೆ ಪೈಕಿ 43 ಎಕರೆ ಭೂಮಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ನಿಲ್ದಾಣ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಿ ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಕೆ-ರೈಡ್, ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ನಡುವೆ ನಿಯಮಿತ ಸಮನ್ವಯ ಸಭೆಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕಕ್ಕೆ ಕೇಂದ್ರದ ರೈಲ್ವೆ ಹೂಡಿಕೆ ಹೆಚ್ಚಳ:
ಸಚಿವರ ಉತ್ತರದಲ್ಲಿ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಲಾಗಿದೆ. 2009-14ರ ಅವಧಿಯಲ್ಲಿ ವಾರ್ಷಿಕ 835 ಕೋಟಿ ರೂ. ಇದ್ದ ರೈಲ್ವೆ ಬಜೆಟ್ ಹಂಚಿಕೆ 2026-27ರಲ್ಲಿ 7,748 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸುಮಾರು 9 ಪಟ್ಟು ಹೆಚ್ಚಳವಾಗಿದೆ ಎಂದು ವಿವರಿಸಲಾಗಿದೆ.
2014ರಿಂದ 2026ರವರೆಗೆ ಕರ್ನಾಟಕದಲ್ಲಿ 1,769 ಕಿ.ಮೀ. ಹೊಸ ರೈಲು ಮಾರ್ಗಗಳನ್ನು ಕಾರ್ಯಾರಂಭಗೊಳಿಸಲಾಗಿದ್ದು, 2009-14ರ ಅವಧಿಯಲ್ಲಿ ಇದು 565 ಕಿ.ಮೀ. ಮಾತ್ರವಾಗಿತ್ತು ಎಂದು ತಿಳಿಸಲಾಗಿದೆ.
2026ರ ಏಪ್ರಿಲ್ 1ರ ವೇಳೆಗೆ, ಕರ್ನಾಟಕದಲ್ಲಿ 15 ಹೊಸ ರೈಲು ಮಾರ್ಗಗಳು ಹಾಗೂ 10 ಡಬ್ಲಿಂಗ್ ಯೋಜನೆಗಳು ಸೇರಿದಂತೆ ಒಟ್ಟು 25 ರೈಲ್ವೆ ಯೋಜನೆಗಳು, 2,935 ಕಿ.ಮೀ. ವ್ಯಾಪ್ತಿಯಲ್ಲಿ 49,272 ಕೋಟಿ ವೆಚ್ಚದಲ್ಲಿ ಅನುಷ್ಠಾನ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಸಹಕಾರ ಅಗತ್ಯ:
ರೈಲ್ವೆ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಆದರೆ ಭೂಸ್ವಾಧೀನ, ಸರ್ಕಾರಿ ಭೂಮಿ ವರ್ಗಾವಣೆ, ಕಾನೂನುಬದ್ಧ ಅನುಮತಿಗಳು, ಯುಟಿಲಿಟಿ ಸ್ಥಳಾಂತರ ಹಾಗೂ ಇತರೆ ಅಗತ್ಯ ಅನುಮೋದನೆಗಳನ್ನು ರಾಜ್ಯ ಸರ್ಕಾರ ಸಮಯ ನೀಡಿದಾಗ ಮಾತ್ರ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಪುನರುಚ್ಚರಿಸಿದೆ.
