Homeರಾಜ್ಯಎಸ್‌‍ಐಆರ್‌ : ರಾಜ್ಯದಲ್ಲಿ 47 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಸಾಧ್ಯತೆ..!

ಎಸ್‌‍ಐಆರ್‌ : ರಾಜ್ಯದಲ್ಲಿ 47 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಸಾಧ್ಯತೆ..!

SIR: More than 47 lakh voters' names likely to be deleted in the state

ಬೆಂಗಳೂರು,ಜು.24-ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ರಾಜಕೀಯ ಸಮರಕ್ಕೆ ಎಡೆ ಮಾಡಿಕೊಟ್ಟಿದ್ದ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌)ಯಲ್ಲಿ ಸುಮಾರು 47 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಇಲ್ಲವೇ ಅಳಿಸುವ( ಡಿಲೀಟ್‌) ಹಾಕುವ ಸಾಧ್ಯತೆ ಇದೆ. ಇದು ರಾಜ್ಯದ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಈ ಪರಿಷ್ಕರಣೆಯ ಹೆಸರಿನಲ್ಲಿ ಒಟ್ಟು 47 ಲಕ್ಷಕ್ಕೂ ಅಧಿಕ (47,02,092) ಮತದಾರರ ಹೆಸರುಗಳನ್ನು ಸಂಭಾವ್ಯ ಅಳಿಸುವಿಕೆಗಾಗಿ ಗುರುತಿಸಲಾಗಿದೆ. ಚುನಾವಣಾ ಆಯೋಗದ ವರದಿ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 47.02 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಸಂಭಾವ್ಯ ಡಿಲೀಟ್‌ ಅಥವಾ ಪರಿಶೀಲನಾ ಪಟ್ಟಿಯಡಿ ಗುರುತಿಸಲಾಗಿದೆ.

ಈ ವಿಶೇಷ ಪರಿಷ್ಕರಣೆಯಲ್ಲಿ 2002ರ ಹಳೆಯ ಮತದಾರರ ಪಟ್ಟಿಯೊಂದಿಗೆ ಈಗಿನ ಮತದಾರರ ವಿವರಗಳನ್ನು ತಾಳೆ ಮಾಡಲಾಗುತ್ತಿದ್ದು, ಅನೇಕರ ಹೆಸರು ಅಥವಾ ಕುಟುಂಬದ ವಂಶಾವಳಿ ದತ್ತಾಂಶಗಳು ತಾಳೆಯಾಗದೆ ಗೊಂದಲ ಉಂಟಾಗಿದೆ. 2002ರ ಡೇಟಾಬೇಸ್‌‍ನಲ್ಲಿ ಲಭ್ಯವಿಲ್ಲದ ಮತ್ತು ವಿವರಗಳು ಸಿಗದ ಲಕ್ಷಾಂತರ ಮತದಾರರಿಗೆ ಚುನಾವಣಾ ಆಯೋಗದಿಂದ ನೋಟಿಸ್‌‍ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ಕಳವಳಕಾರಿ ಸ್ಥಿತಿ:

ಇಡೀ ರಾಜ್ಯಕ್ಕೆ ಹೋಲಿಸಿದರೆ ಕೇವಲ ಬೆಂಗಳೂರು ನಗರ ಒಂದರಲ್ಲೇ ಅತಿ ಹೆಚ್ಚು ಅಂದರೆ ಲಕ್ಷಾಂತರ ಮಂದಿಯ ಹೆಸರುಗಳು 2002ರ ದಾಖಲೆಗಳಲ್ಲಿ ಪತ್ತೆಯಾಗದೆ ಗೊಂದಲಕ್ಕೀಡಾಗಿವೆ.ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಸ್ಪಷ್ಟನೆಯ ಪ್ರಕಾರ, ಪ್ರಸ್ತುತ ಗುರುತಿಸಲಾಗಿರುವ 47 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ನೇರವಾಗಿ ಡಿಲೀಟ್‌ ಆದದ್ದಲ್ಲ, ಬದಲಿಗೆ ಇವು ಪರಿಶೀಲನಾ ಹಂತದಲ್ಲಿರುವ ಪ್ರಕರಣಗಳಾಗಿವೆ.

ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟರು (ಬಿಎಲ್‌ಎ) ಜಂಟಿಯಾಗಿ ಹಾಗೂ ಚುನಾವಣಾ ನೋಂದಣಾಧಿಕಾರಿಗಳು ಕಟ್ಟುನಿಟ್ಟಾದ ಪರಿಶೀಲನೆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ದಾಖಲೆಗಳನ್ನು ಒದಗಿಸುವ ಮೂಲಕ ಅರ್ಹ ಮತದಾರರು ತಮ ಹೆಸರನ್ನು ಉಳಿಸಿಕೊಳ್ಳಲು ಅವಕಾಶವಿರುತ್ತದೆ. ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಮನೆ-ಮನೆ ತೆರಳಿ ಮತದಾರರ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಾಗಿದೆ.

ಈ ಪ್ರಕ್ರಿಯೆಯಡಿ ಬೂತ್‌ ಮಟ್ಟದ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಒಟ್ಟು 47,02,092 ಮತದಾರರನ್ನು (ಶೇಕಡಾ 8.48 ರಷ್ಟು ಮತದಾರರು) ಎಎಸ್‌‍ಡಿಡಿಒ ಅಂದರೆ ಸ್ಥಳದಲ್ಲಿಲ್ಲದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರಾದವರು, ನಕಲಿ ಅಥವಾ ಎರಡೂರು ಕಡೆ ಹೆಸರಿಸಿರುವವರು ಮತ್ತು ಇತರೆ ವರ್ಗಗಳಡಿ ಗುರುತಿಸಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಅನೂನ್ಯತ ನಮೂನೆಗಳು ಎಂದು ವರ್ಗೀಕರಿಸಲಾಗಿದೆ.

ಆಯೋಗದ ಸ್ಪಷ್ಟನೆ: ಈ ಆತಂಕದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು (ಸಿಇಒ), ಈ 47 ಲಕ್ಷ ಸಂಖ್ಯೆಯು ನೇರವಾಗಿ ಮತದಾರರ ಪಟ್ಟಿಯಿಂದ ರದ್ದಾಗುವವರ ಅಂತಿಮ ಸಂಖ್ಯೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ ಇವು ಕೇವಲ ಪರಿಶೀಲನೆಗೆ ಒಳಪಡಬೇಕಿರುವ ಸಂಭಾವ್ಯ ಪಟ್ಟಿಯಾಗಿದೆ.

ಮಟ್ಟ-ಹಂತದ ಪರಿಶೀಲನೆ: ಗುರುತಿಸಲಾದ ಪ್ರತಿಯೊಂದು ಪ್ರಕರಣವನ್ನು ರಾಜಕೀಯ ಪಕ್ಷಗಳು ನೇಮಿಸಿರುವ ಬೂತ್‌ ಮಟ್ಟದ ಏಜೆಂಟರು ಮರುಪರಿಶೀಲನೆ ನಡೆಸಲಿದ್ದಾರೆ. ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಚುನಾವಣಾ ನೋಂದಣಾಧಿಕಾರಿಗಳು (ಇಆರ್‌ಒ) ಪ್ರತಿಯ ಒಂದು ಅರ್ಜಿಯನ್ನೂ ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ.

ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಮತ್ತು ಅನರ್ಹರು ಉಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಆಯೋಗ ಭರವಸೆ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಯಾವಾಗಲೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಾ ಬಂದಿದೆ. ಹಿಂದೆ ಬೂತ್‌ ಮಟ್ಟದಲ್ಲಿ ಅಥವಾ ಸಮುದಾಯ ಭವನಗಳಲ್ಲಿ ಸಾಮೂಹಿಕವಾಗಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕೆಲವು ಕಡೆಗಳಲ್ಲಿ ಸರಿಯಾದ ಮನೆ-ಮನೆ ಸಮೀಕ್ಷೆ ನಡೆಯದೆ ನಿಯಮ ಉಲ್ಲಂಘನೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಹೊಸ ಮಾರ್ಗಸೂಕ್ತಿಗಳನ್ನು ಜಾರಿಗೊಳಿಸಿತು.

ಜೊತೆಗೆ 2002ರ ಹಿಂದಿನ ದಾಖಲೆಗಳು ಅಥವಾ ಕುಟುಂಬದ ವಂಶಾವಳಿ ಮ್ಯಾಪಿಂಗ್‌ ಪ್ರಕ್ರಿಯೆಯು ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ತೀವ್ರ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. 2002ರ ಪೂರಕ ಮತದಾರರ ಪಟ್ಟಿಗಳು ಆನ್‌ಲೈನ್‌ನಲ್ಲಿ ಸರಿಯಾಗಿ ಲಭ್ಯವಿಲ್ಲದಿರುವುದು ಹಾಗೂ ಹಳೆಯ ದಾಖಲೆಗಳನ್ನು ಒದಗಿಸುವುದು ಕಷ್ಟಕರವಾಗಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿದೆ.

ರಾಜಕೀಯ ಕೆಸರೆರಾಟ

ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳು ಮಾಯವಾಗುವ ಸಾಧ್ಯತೆಯಿದೆ ಎಂಬ ಈ ಬೆಳವಣಿಗೆಯನ್ನು ವಿರೋಧ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ವೈಫಲ್ಯ ಹಾಗೂ ಆಡಳಿತ ಪಕ್ಷದ ಕುಮಕ್ಕಿನಿಂದ ಮತದಾರರ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿವೆ. ಮತ್ತೊಂದೆಡೆ ಆಡಳಿತ ಪಕ್ಷದ ನಾಯಕರು ಅರ್ಹ ಮತದಾರರು ಕಡ್ಡಾಯವಾಗಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಅಕ್ಟೋಬರ್‌ ತಿಂಗಳಲ್ಲಿ ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯ ಮೊದಲು ಈ ಎಸ್‌‍ಐಆರ್‌ ಬಿರುಗಾಳಿಯು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನಸಾಮಾನ್ಯರು ತಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಅಲೆದಾಡುವಂತಾಗಿದೆ.

RELATED ARTICLES

Latest News