Homeರಾಜ್ಯಆ.3ರಂದು ಕಾವೇರಿ ಕುರಿತು ತಮಿಳುನಾಡು ಸಿಎಂ ವಿಜಯ್‌- ಡಿಕೆಶಿ ಚರ್ಚೆ

ಆ.3ರಂದು ಕಾವೇರಿ ಕುರಿತು ತಮಿಳುನಾಡು ಸಿಎಂ ವಿಜಯ್‌- ಡಿಕೆಶಿ ಚರ್ಚೆ

Cauvery water dispute | DK Shivakumar, Tamil Nadu CM Vijay to hold bilateral talks

ಬೆಂಗಳೂರು, ಜು.24- ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರ ಮನವಿಯ ಮೇರೆಗೆ ಆಗಸ್ಟ್‌ 3ರಂದು ಭೇಟಿಗೆ ಸಮಯ ನೀಡುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂದೇಶ ರವಾನಿಸಿದ್ದಾರೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಸುಪ್ರೀಂಕೋರ್ಟ್‌ನ ತೀರ್ಪಿನ ಅನುಸಾರ ತಮಿಳುನಾಡಿಗೆ ವರ್ಷಕ್ಕೆ 177 ಟಿಎಂಸಿ ನೀರು ಹರಿಸಬೇಕಿದೆ. ಆದರೆ ಈ ವರ್ಷ ಮಳೆ ಕೊರತೆಯ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಬಿಡಲು ಸಾಧ್ಯವಾಗಿಲ್ಲ.

ರಾಜ್ಯದ ಅಣೆಕಟ್ಟೆಗಳಲ್ಲಿ ನೀರು ಇಂಗಿದೆ. ಸಂಗ್ರಹ ಇರುವ ನೀರು ಕುಡಿಯುವ ನೀರಿನ ಉದ್ದೇಶಕ್ಕಷ್ಟೇ ಬಳಸಲು ಸಾಧ್ಯ? ಕೇಂದ್ರ ಜಲ ನಿರ್ವಹಣಾ ಮಂಡಳಿ ಈವರೆಗೂ ಮೂರು ಬಾರಿ ವಿಚಾರಣೆ ನಡೆಸಿ ವಾಸ್ತವ ಸ್ಥಿತಿಯ ಆಧಾರದ ಮೇಲೆ ನೀರು ಬಿಡುವಂತೆ ನಿರ್ದೇಶನ ನೀಡದೆ ಕೈ ತೊಳೆದುಕೊಂಡಿದೆ.

ಕಳೆದವಾರ ಇದೇ ಜೋಸೆಫ್‌ ವಿಜಯ್‌ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದು ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಆಗಸ್ಟ್‌ 3ರಂದು ಆಗಮಿಸುವಂತೆ ಸಲಹೆ ನೀಡಿದ್ದರು. ಇದೇ ವೇಳೆ ವಿಜಯ್‌ ಅಭಿನಯದ ಜನ ನಾಯಗನ್‌ ಚಲನಚಿತ್ರ ಬಿಡುಗಡೆಯಾಗಿದೆ.

ರಾಜ್ಯದಲ್ಲಿ ಚಿತ್ರ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ವಿಜಯ್‌ ಅವರು ಚಲನಚಿತ್ರ ಉದ್ದೇಶಕ್ಕಾಗಿ ಬೆಂಗಳೂರಿಗೆ ಭೇಟಿ ನೀಡಬಹುದು, ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಜಯ್‌ ಅವರ ಕಚೇರಿಯಿಂದ ಕರ್ನಾಟಕದ ಭೇಟಿಯ ಬಗ್ಗೆ ಈವರೆಗೂ ಅಧಿಕೃತವಾದ ಮಾಹಿತಿ ಹೊರ ಬಿದ್ದಿಲ್ಲ.

ವಿಜಯ್‌ ಒಂದು ವೇಳೆ ಕರ್ನಾಟಕಕ್ಕೆ ಆಗಮಿಸಿ, ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದರೆ, ಆ ವೇಳೆ ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರವಾಗಿ ಚರ್ಚೆಯಾಗಬಹುದು. ಕರ್ನಾಟಕದ ಕಡೆಯಿಂದ ಮೇಕೆದಾಟು ಯೋಜನೆಗೆ ಸಹಕರಿಸುವಂತೆ ಮನವಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.ಆದರೆ ಪತ್ರ ಬರೆದು ಸಮಯ ಕೇಳಿದ್ದ ವಿಜಯ್‌ ಅವರು ಈವರೆಗೂ ಕರ್ನಾಟಕ ಭೇಟಿಯ ಬಗ್ಗೆ ಸ್ಪಷ್ಟತೆ ನೀಡಿಲ್ಲ ಎಂದು ಹೇಳಲಾಗಿದೆ.

RELATED ARTICLES

Latest News