Homeರಾಷ್ಟ್ರೀಯಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬೇಡಿಕೆ : ಸರ್ಕಾರ ಮತ್ತು ಸಿಜೆಪಿ ನಡುವೆ ಇಂದು ನಿರ್ಣಾಯಕ ಮಾತುಕತೆ

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬೇಡಿಕೆ : ಸರ್ಕಾರ ಮತ್ತು ಸಿಜೆಪಿ ನಡುವೆ ಇಂದು ನಿರ್ಣಾಯಕ ಮಾತುಕತೆ

Dharmendra Pradhan's resignation demand: Crucial talks between government and CJP today

ನವದೆಹಲಿ,ಜು.25- ನೀಟ್‌‍-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ತೀವ್ರ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ನಡುವಿನ ಮೂರನೇ ಸುತ್ತಿನ ನಿರ್ಣಾಯಕ ಮಾತುಕತೆ ಇಂದು ನಡೆಯಲಿದೆ.ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್‌ ಜನತಾ ಪಾರ್ಟಿ ಹಾಗೂ ಕೇಂದ್ರ ಸರ್ಕಾರದ ಹಿರಿಯ ಸಚಿವರ ನಡುವೆ ನಡೆಯುತ್ತಿರುವ ಮಾತುಕತೆಗಳು ನಿರ್ಣಾಯಕ ತಿರುವು ಪಡೆದುಕೊಂಡಿವೆ.

ವಿಠ್ಠಲಭಾಯಿ ಪಟೇಲ್‌ ಹೌಸ್‌‍ನಲ್ಲಿ ನಡೆದ ಹಿಂದಿನ ಸುತ್ತಿನ ಸಭೆಗಳ ಮುಂದುವರಿದ ಭಾಗವಾಗಿ ಇಂದು ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಹಾಗೂ ಪ್ರತಿಭಟನಾ ನಿರತ ಸಂಘಟನೆಗಳು ಪಟ್ಟುಹಿಡಿದಿದ್ದರೂ, ಕೇಂದ್ರ ಸರ್ಕಾರವು ಸಚಿವರ ರಾಜೀನಾಮೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅತ್ಯಂತ ಸುಲಭದ ಮಾರ್ಗ ಹಾಗೂ ಜವಾಬ್ದಾರಿಯಿಂದ ಓಡಿಹೋದಂತೆ ಎಂದು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಜನತೆ ನೀಡಿರುವ ಜನಾದೇಶದಂತೆ ನಾವು ಸಮಸ್ಯೆಗಳನ್ನು ಎದುರಿಸಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ವ್ಯವಸ್ಥೆ ಸುಧಾರಣೆ ತರಲು ಬದ್ಧವಾಗಿದ್ದೇವೆ ಹೊರತು ಪಲಾಯನವಾದ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನೀಟ್‌ ಪತ್ರಿಕೆ ಸೋರಿಕೆ ವಿಷಯವಾಗಿ ವಿರೋಧ ಪಕ್ಷಗಳು ಸತತವಾಗಿ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವುದರಿಂದ ಕಲಾಪಗಳು ಪದೇ ಪದೇ ಮುಂದೂಡಲ್ಪಡುತ್ತಿವೆ. ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೇರಿದಂತೆ ಪ್ರಮುಖ ನಾಯಕರು ಸಹ ಸಚಿವರ ರಾಜೀನಾಮೆಯನ್ನು ಬಹಿರಂಗವಾಗಿ ಆಗ್ರಹಿಸಿರುವುದು ಸರ್ಕಾರದ ಮೇಲಿನ ರಾಜಕೀಯ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.

3 ಷರತ್ತುಗಳು :
ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ : ಯಾವುದೇ ರಾಜಿ ಇಲ್ಲದ ಮುಖ್ಯ ಬೇಡಿಕೆಯಾಗಿದ್ದು, ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು.ನೀಟ್‌ ಅಕ್ರಮ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯದಿಂದ ಮನನೊಂದು ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರ ಲಾಠಿಚಾರ್ಜ್‌ಗೆ ಒಳಗಾದ ವಿದ್ಯಾರ್ಥಿಗಳ ಮೇಲಿರುವ ಎಲ್ಲಾ ಎಫ್‌ಐಆರ್‌ಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು.ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಪ್ರತಿಭಟನಾಕಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್‌‍ ಪಡೆಯುವ ವಿಚಾರದಲ್ಲಿ ಸರ್ಕಾರವು ಸಕಾರಾತಕವಾಗಿ ಸ್ಪಂದಿಸಿದೆ.

ಆದರೆ, ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ವಿಚಾರದಲ್ಲಿ ಉನ್ನತ ನಾಯಕತ್ವದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಸರ್ಕಾರ ಕಾಲಾವಕಾಶ ಕೋರಿದೆ. ಶುಕ್ರವಾರ ನಡೆದ ಎರಡನೇ ಸುತ್ತಿನ ಸಭೆಯಲ್ಲಿ, ವಿದ್ಯಾರ್ಥಿಗಳ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವುದು ಮತ್ತು ಪರಿಹಾರ ನೀಡುವ ಸಿಜೆಪಿಯ ಎರಡು ಪ್ರಮುಖ ಬೇಡಿಕೆಗಳಿಗೆ ಕೇಂದ್ರವು ತಾತ್ವಿಕ ಒಪ್ಪಿಗೆ ಸೂಚಿಸಿದೆ.

ಆದರೆ, ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರವು ಇಂದಿನವರೆಗೆ ಸಮಯಾವಕಾಶ ಕೋರಿದೆ. ಸರ್ಕಾರದ ಕಡೆಯಿಂದ ಸಚಿವರ ರಾಜೀನಾಮೆಗೆ ಸ್ಪಷ್ಟನೆ ಸಿಗದಿದ್ದರೆ ಮುಂದಿನ ಚರ್ಚೆಗಳಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಿಜೆಪಿ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಜಾಲಗಳಿಗೆ ಕಡಿವಾಣ ಹಾಕಲು ಕನಿಷ್ಠ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ.ವರೆಗೆ ದಂಡ ವಿಧಿಸುವ ಕರಡು ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ತ್ವರಿತ ನ್ಯಾಯಾಲಯಗಳ ಸ್ಥಾಪನೆಗೂ ನಿರ್ಧರಿಸಲಾಗಿದೆ.ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 47 ಅಧಿಕಾರಿಗಳನ್ನು ವಜಾಗೊಳಿಸಿದ್ದು, ಸಂಸ್ಥೆಯ ಸಂಪೂರ್ಣ ಕೂಲಂಕುಷ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ:
ಜಂತರ್‌ ಮಂತರ್‌ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ನಿಗಮವು ಮಧ್ಯ ದೆಹಲಿಯ ಪ್ರಮುಖ 18 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಜೊತೆಗೆ, ದೆಹಲಿ ಸರ್ಕಾರದ ನಿರ್ದೇಶನದಂತೆ ವಾರಾಂತ್ಯದವರೆಗೆ ರಾತ್ರಿ 8 ಗಂಟೆಯೊಳಗೆ ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಸೋನಮ್‌ ವಾಂಗ್‌ಚುಕ್‌ ಉಪವಾಸ ಅಂತ್ಯ:
ಕೇಂದ್ರದೊಂದಿಗೆ ನಡೆದ ಸುದೀರ್ಘ ಮಾತುಕತೆ ಮತ್ತು ಪ್ರಮುಖ ಬೇಡಿಕೆಗಳ ಈಡೇರಿಕೆಯ ಭರವಸೆಯ ಹಿನ್ನೆಲೆಯಲ್ಲಿ, ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅವರು ತಮ್ಮ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದ್ದಾರೆ. ಇಂದಿನ ಮೂರನೇ ಸುತ್ತಿನ ಸಭೆಯ ನಂತರ ಕೇಂದ್ರ ಸರ್ಕಾರವು ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಕುರಿತು ಯಾವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂಬುದು ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

RELATED ARTICLES

Latest News