ನವದೆಹಲಿ,ಜು.25- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಲೆದಂಡವಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಪ್ರತಿಪಕ್ಷಗಳು ಸೇರಿದಂತೆ ಶಿಕ್ಷಣ ವಲಯದಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದರಿಂದ ಅನ್ಯ ಮಾರ್ಗವಿಲ್ಲದೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಒಂದು ಪುಟದ ಪತ್ರ ಬರೆದಿರುವ ಸಚಿವರು, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ತಕ್ಷಣವೇ ಅಂಗೀಕರಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ನನ್ನ ಮನಸ್ಸಿಗೆ ತುಂಬ ನೋವಾಗಿದೆ. ವಿದ್ಯಾರ್ಥಿ ಚಳುವಳಿಯಿಂದ ಬಂದ ನಾನು ಅವರ ಭಾವನೆಗಳಿಗೆ ಧಕ್ಕೆ ತರಲಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾರೆ. ಕೂಡಲೇ ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕೆಂದು ಕೋರಿದ್ದಾರೆ.
ನಾನು ಯಾವಾಗಲೂ ವಿದ್ಯಾರ್ಥಿಗಳ ಪರವಾಗಿಯೇ ನಿಲ್ಲುತ್ತೇನೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಾನೇ ಹೊರುತ್ತೇನೆ ಎಂದು ಅವರು ಹೇಳಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಗೆ ನಾನು ಸಮರ್ಪಿಸಿಕೊಂಡಿದ್ದೇನೆ. ನಾನು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾರೆ. ಕೇಂದ್ರ ಸರ್ಕಾರ ಯಾವುದೇ ತನಿಖೆಗೆ ವಹಿಸಿದರೂ ಅದನ್ನು ನಾನು ಎದುರಿಸಲು ಸಿದ್ಧನಿದ್ದೇನೆ.
2026ರ ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ಬಳಿಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಇದರಲ್ಲಿ ಭಾಗಿಯಾದ ಅನೇಕರನ್ನು ಈಗಾಗಲೇ ಬಂಧಿಸಿ ಜೈಲಿಗೆ ಹಾಕಲಾಗಿದೆ. ನೀಟ್ ಪರೀಕ್ಷೆ ಸುಧಾರಣೆಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಆಧಾರಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಇದು ಪಾರದರ್ಶಕತೆಗೆ ಒತ್ತು ಕೊಟ್ಟು ಪರೀಕ್ಷೆಯಲ್ಲಿ ಅಕ್ರಮಗಳ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದರು. ಇದನ್ನು ನಾವು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಾಗಲೂ ಕೆಲವು ಕಡೆ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತು. ಮರು ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೂ.20ರಂದು ಮರು ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ.
ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುವುದು ನಮ ಜವಾಬ್ದಾರಿಯಾಗಿತ್ತು. ಅದರಂತೆ ಮರು ಪರೀಕ್ಷೆ ನಡೆದ ಮೇಲೆ ಜು.16ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಇದರಲ್ಲಿ ಒಂದೇ ಒಂದು ಸಣ್ಣ ಅಕ್ರಮವೂ ನಡೆದಿಲ್ಲ ಎಂದು ಪ್ರಧಾನ್ ಸಮರ್ಥಿಸಿಕೊಂಡಿದ್ದಾರೆ.
