ಚೆನ್ನೈ,ಜು.26- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಎಂ. ಕರುಣಾನಿಧಿ ಅವರ ಮೊಮ್ಮಗಳು ಹಾಗೂ ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ ಅವರ ಪುತ್ರಿ ಕಾಯಲ್ವಿಳಿ, ಎಸ್ಬಿಐ ಶಾಖೆಯ ವಸ್ಥಾಪಕರೊಂದಿಗೆ ತೀವ್ರ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಪೂರ್ಣ ಕೃತ್ಯ ಬ್ಯಾಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಚೆನ್ನೈನ ಪ್ರತಿಷ್ಠಿತ ಅಡ್ಯಾರ್ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎನ್ಆರ್ಐ ಶಾಖೆಯು ಕಾಯಲ್ವಿಳಿ ಅವರಿಗೆ ಸೇರಿದೆ ಎನ್ನಲಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಟ್ಟಡದಲ್ಲಿದ್ದ ಲಿಫ್್ಟ ಪದೇಪದೇ ಕೆಟ್ಟುಹೋಗುತ್ತಿದ್ದು, ಇದರ ಅಸಮರ್ಪಕ ನಿರ್ವಹಣೆ ಹಾಗೂ ತಾಂತ್ರಿಕ ದೋಷದ ಕುರಿತು ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಕಟ್ಟಡದ ಮಾಲೀಕರ ನಡುವೆ ವಿವಾದವಿತ್ತು ಎನ್ನಲಾಗಿದೆ.
ಈ ಕುರಿತು ಚರ್ಚಿಸಲು ಬ್ಯಾಂಕ್ ಶಾಖೆಗೆ ಆಗಮಿಸಿದ ಕಾಯಲ್ವಿಳಿ, ವ್ಯವಸ್ಥಾಪಕರ ಕಚೇರಿಯೊಳಗೆ ಅವರೊಂದಿಗೆ ಮಾತನಾಡುವ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕಾಯಲ್ವಿಳಿ ಅವರು ಶಾಖಾ ವ್ಯವಸ್ಥಾಪಕರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡುಬರುತ್ತದೆ. ವಾಗ್ವಾದದ ರಭಸದಲ್ಲಿ ಅವರು ವ್ಯವಸ್ಥಾಪಕರ ನಿಲುವನ್ನು ಅನುಕರಿಸಿ ಅಪಹಾಸ್ಯ ಮಾಡುತ್ತಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಆಕ್ರೋಶಗೊಂಡ ಕಾಯಲ್ವಿಳಿ, ಏಕಾಏಕಿ ಬ್ಯಾಂಕ್ ವ್ಯವಸ್ಥಾಪಕರ ಕೆನ್ನೆಗೆ ಬಾರಿಸಿದ್ದಾರೆ (ಕಪಾಳಮೋಕ್ಷ ಮಾಡಿದ್ದಾರೆ). ಈ ವೇಳೆ ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಕಾಯಲ್ವಿಳಿಯವರ ಕೈ ಹಿಡಿದು ಅವರನ್ನು ಸಮಾಧಾನಪಡಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುವುದು ದೃಶ್ಯದಲ್ಲಿದೆ.
ಪೊಲೀಸ್ ತನಿಖೆ ಮತ್ತು ಎಫ್ಐಆರ್ :
ಘಟನೆ ನಡೆದ ಕೂಡಲೇ ಎಸ್ಬಿಐ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದಂತೆ, ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪಗಳ ಅಡಿಯಲ್ಲಿ ಕಾಯಲ್ವಿಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದು, ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಅಧಿಕಾರಿಯ ಮೇಲೆ ಆಗಿರುವ ಈ ಹಲ್ಲೆ ಪ್ರಕರಣವು ತಮಿಳುನಾಡಿನಲ್ಲಿ ಭಾರೀಚರ್ಚೆಗೆ ಗ್ರಾಸವಾಗಿದೆ.
