Homeಇದೀಗ ಬಂದ ಸುದ್ದಿ2028ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಸಿದ್ದು ರಾಜಕೀಯ ನಿವೃತ್ತಿ ಇಂಗಿತ

2028ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಸಿದ್ದು ರಾಜಕೀಯ ನಿವೃತ್ತಿ ಇಂಗಿತ

ಬೆಂಗಳೂರು, ಜು.26- ಮುಖ್ಯಮಂತ್ರಿ ಸ್ಥಾನದಿಂದ ಗೌರವಯುತವಾಗಿ ನಿರ್ಗಮಿಸಿದ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೃಷ್ಣ ಅವರ 86ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಕೆ.ಆರ್‌.ಪೇಟೆ ಕೃಷ್ಣ ಅವರು ರಾಜಕೀಯವಾಗಿ ಸೈದ್ಧಾಂತಿಕ ಬದ್ಧತೆಯೊಂದಿಗೆ ಜೀವಿಸಿದ್ದರು. ಶಾಸಕರಾಗಿದ್ದಾಗಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಅವರು, ಅದರಂತೆಯೇ ನಡೆದುಕೊಂಡರು. ಈಗ ನಾನು ಶಾಸಕನಾಗಿದ್ದೇನೆ ಎಂದು ಸಿದ್ದರಾಮಯ್ಯ ಮತ್ತೇನನ್ನೋ ಹೇಳಲು ಮುಂದಾದರು.

ಆ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಮುಖಂಡರೊಬ್ಬರು ಮುಂದಿನ 10 ವರ್ಷವೂ ನೀವೆ ಶಾಸಕರಾಗಿರುತ್ತೀರಾ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆ ರೀತಿ ನಾನು ಹೇಳಲು ಹೋಗುವುದಿಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಏಕಾಏಕಿ ಘೋಷಿಸಿದರು. ರಾಜಕೀಯವಾಗಿ ಸಿದ್ದರಾಮಯ್ಯ ಅವರ ಸಂಘರ್ಷದ ಜೀವನ ಅನೇಕರಲ್ಲಿ ಅಭಿಮಾನ ಹುಟ್ಟಿಸಿದೆ. ಜಾತ್ಯತೀತತೆ ಮತ್ತು ಸಮಾನತೆಯ ಸೈದ್ಧಾಂತಿಕ ಅಚಲ ಬದ್ಧತೆಯನ್ನು ಹೊಂದಿದ್ದ ಸಿದ್ದರಾಮಯ್ಯ ಅವರು, ಜನತಾದಳದಿಂದ ಹೊರ ಬಂದ ಬಳಿಕ ಕಾಂಗ್ರೆಸ್‌‍ಗೆ ಸೇರಿದ್ದರು. ಅದಕ್ಕೂ ಮುನ್ನ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಕಾಂಗ್ರೆಸ್‌‍ಗೆ ಸಿದ್ದರಾಮಯ್ಯ ಅವರ ಸೇರ್ಪಡೆ ಆನೆ ಬಲ ತಂದುಕೊಟ್ಟಿತ್ತು.

2013ರಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ ಕಾಂಗ್ರೆಸ್‌‍ ಪಕ್ಷ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಗಳಿಸಿತ್ತು. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು 5 ವರ್ಷ ಆಡಳಿತ ನಡೆಸಿ, ಜನ ಮನ್ನಣೆ ಗಳಿಸಿದ್ದರು. ತಮ ಆಡಳಿತಾವಧಿಯಲ್ಲಿ ನಂಬಿದ ಸಿದ್ಧಾಂತಗಳ ಅನುಸಾರವಾಗಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಒಂದು ಹಂತದಲ್ಲಿ ಸಿದ್ದರಾಮಯ್ಯ ಎಂದರೆ ಕಾಂಗ್ರೆಸ್‌‍, ಕಾಂಗ್ರೆಸ್‌‍ ಎಂದರೆ ಸಿದ್ದರಾಮಯ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಚುನಾವಣಾ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದರು. ಆದರೆ ಪಕ್ಷದ ಒತ್ತಡ ಮತ್ತು ಪರಿಸ್ಥಿತಿ ಅನುಗುಣವಾಗಿ 2018ರಲ್ಲಿ ಚುನಾವಣೆಯನ್ನು ನಿಭಾಯಿಸಿದ್ದರು.

ಬಹುತೇಕ ಏಕ ವ್ಯಕ್ತಿ ನಾಯಕತ್ವದ ಪ್ರಯೋಗ ನಡೆಯಿತು. ಮುಖ್ಯಮಂತ್ರಿಯಾಗಿದ್ದುಕೊಂಡು ಇಡೀ ರಾಜ್ಯ ಪ್ರವಾಸ ಕೈಗೊಂಡರು. ಆದರೆ ಜನ ನಿರೀಕ್ಷಿಸಿದ ಬೆಂಬಲ ನೀಡಲಿಲ್ಲ. ಕಾಂಗ್ರೆಸ್‌‍ ಪಕ್ಷ ಜೆಡಿಎಸ್‌‍ ಜೊತೆ ಸೇರಿ ಸಮಿಶ್ರ ಸರ್ಕಾರ ನಡೆಸುವ ಪರಿಸ್ಥಿತಿ ಬಂತು. 20219ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍-ಜೆಡಿಎಸ್‌‍ನ ಮೈತ್ರಿ ಕೂಟಕ್ಕೆ ಭಾರೀ ಹಿನ್ನಡೆಯಾಯಿತು. ಅದರ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಆಗ ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಹೈಕಮಾಂಡ್‌ ಅದನ್ನು ಅಂಗೀಕರಿಸದೇ ಹುದ್ದೆಯಲ್ಲಿ ಮುಂದುವರೆಸಿತ್ತು.

ಅನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಮತ್ತೊಂದು ಬಾರಿ ಭರ್ಜರಿ ಬಹುಮತ ದೊರೆತಾಗ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಪಡೆದರು.ಆದರೆ ಆ ಸಂದರ್ಭದಲ್ಲಿ ನಡೆದಿದ್ದ ಅಧಿಕಾರ ಹಂಚಿಕೆಯ ಒಳ ಒಪ್ಪಂದದ ಅನುಸಾರ ಇತ್ತೀಚೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‌‍ ಪಕ್ಷ ಅವರನ್ನು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯಸ್ಥಾನಕ್ಕೆ ನೇಮಕ ಮಾಡಿದ್ದರೂ ಅಧಿಕಾರ ತ್ಯಾಗದ ಬಳಿಕ ಸಿದ್ದರಾಮಯ್ಯ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಒಂದು ಕಾಲದ ದಿವಂಗತ ಸ್ನೇಹಿತ ಕೆ.ಆರ್‌. ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಯೇ ಸಂದರ್ಭೋಚಿತವಾಗಿ ಮಾತನಾಡಿ ತಮ ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.

RELATED ARTICLES

Latest News