Homeರಾಜ್ಯಕೆಪಿಎಸ್‌‍ಸಿ ಅಧ್ಯಕ್ಷರನ್ನು ನೇಮಿಸಿದ್ದು ಬಿಜೆಪಿ ಸರ್ಕಾರ : ಯತೀಂದ್ರ ಸಿದ್ದರಾಮಯ್ಯ ಕಿಡಿ

ಕೆಪಿಎಸ್‌‍ಸಿ ಅಧ್ಯಕ್ಷರನ್ನು ನೇಮಿಸಿದ್ದು ಬಿಜೆಪಿ ಸರ್ಕಾರ : ಯತೀಂದ್ರ ಸಿದ್ದರಾಮಯ್ಯ ಕಿಡಿ

ಬೆಂಗಳೂರು, ಜು.27- ಕೆಪಿಎಸ್‌‍ಸಿಯ ನೇಮಕಾತಿಯಲ್ಲಿ ಸಾಕಷ್ಟು ಹಗರಣಗಳಾಗಿವೆ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಬಿಜೆಪಿಯವರ ಕಾಲದಲ್ಲಿ. ಅಧ್ಯಕ್ಷರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌‍ಸಿಗೆ ಅಧ್ಯಕ್ಷರನ್ನು ನೇಮಿಸಿದ್ದು, ಕಾಂಗ್ರೆಸ್‌‍ ಪಕ್ಷವಲ್ಲ, ಹಗರಣ ಬೆಳಕಿಗೆ ಬಂದ ಬಳಿಕ ರಾಜ್ಯಪಾಲರು ಕೆಪಿಎಸ್‌‍ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿದ್ದಾರೆ ಎಂದರು.

ಜಾತಿ ಮತ್ತು ಅದಾಯ ಪತ್ರ ಸಲ್ಲಿಕೆಯಲ್ಲಿ ಕೆೆಪಿಎಸ್‌‍ಸಿ ಅಧ್ಯಕ್ಷರು ತಪ್ಪು ಮಾಡಿದ್ದಾರೆ. ಭ್ರಷ್ಟ ಕೆಪಿಎಸ್‌‍ಸಿ ಅಧ್ಯಕ್ಷರನ್ನು ರಕ್ಷಣೆ ಮಾಡಲು ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ನವರು ಯತ್ನಿಸುತ್ತಿದ್ದಾರೆ. ಅವರ ವಕೀಲರುಗಳೇ ವಕಾಲತು ವಹಿಸಿದ್ದಾರೆ.

ಒಂದೆಡೆ ಕೆಪಿಎಸ್‌‍ಸಿ ಅಧ್ಯಕ್ಷರನ್ನು ಟೀಕೆ ಮಾಡುವುದು, ಮತ್ತೊಂದೆಡೆ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡುವುದು ಬಿಜೆಪಿಯ ದಂದ್ವನಿಲುವನ್ನು ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿರುವವರಿಗೆ ತಾವು ಏನೇ ಮಾಡಿದರೂ ನಡೆಯುತ್ತದೆ. ರಾಜೀನಾಮೆ ನೀಡಬೇಕಾಗಿಲ್ಲ ಎಂಬ ಭ್ರಮೆ ಇತ್ತು. ಆದರೆ ನೀಟ್‌ ಪರೀಕ್ಷೆಯಲ್ಲಿ ಯುವಕರ ಹೋರಾಟ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಯನ್ನು ಪಡೆಯುವಂತೆ ಮಾಡಿದೆ ಎಂದರು. ಚಾಮುಂಡಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರದ ಎರಡನೇ ವಾರದ ಪೂಜೆಯಲ್ಲಿ ಹೆಚ್ಚಿನ ವಾಹನಗಳು ಬಂದಿವೆ. ಇದರಿಂದ ಕೊಂಚ ತೊಂದರೆಯಾಗಿದ್ದು ಮುಂದಿನ ವಾರದಲ್ಲಿ ಈ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು.

ಸಾಲ ವಸೂಲಿಯ ಹೆಸರಿನಲ್ಲಿ ಹಣಕಾಸು ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಬಾರದೆಂದು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ. ಎಲ್ಲಿಯಾದರೂ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ತಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ನಿರ್ಣಯ ಕೈಗೊಂಡಿದ್ದರು. ಒಮೆ ಅವರು ತೀರ್ಮಾನ ತೆಗೆದುಕೊಂಡರೆೆ ಅದನ್ನು ಬದಲಾಯಿಸುವುದಿಲ್ಲ, ಯಾರ ಮಾತನ್ನೂ ಕೇಳುವುದಿಲ್ಲ. ಚುನಾವಣಾ ರಾಜಕೀಯದಿಂದ ಅವರು ನಿವೃತ್ತರಾದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತಾರೆ. ಶೋಷಿತರ ಪರವಾದ ಹೋರಾಟವನ್ನು ಮುಂದುವರೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರ ಮಗನಾಗಿ ನಾನು 80ನೇ ವರ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳುವುದಿಲ್ಲ. ಈಗಲಾದರೂ ಅವರು ವಿಶ್ರಾಂತಿ ಪಡೆದು ಆರೋಗ್ಯದತ್ತ ಗಮನ ಹರಿಸಲಿ. ರಾಜಕಾರಣ, ಕೆಲಸ ಕಾರ್ಯಗಳೆಂದು ಅವರು ಒತ್ತಡಕ್ಕೆ ಸಿಲುಕುವುದು ಬೇಡ ಎಂದರು. ಮೈಸೂರಿನಲ್ಲಿ ಮಾದಕ ವಸ್ತುಗಳ ಉತ್ಪಾದನಾ ಘಟಕಗಳು ಪತ್ತೆಯಾಗಿದ್ದನ್ನು ಯಾರೂ ಅಲ್ಲಗೆಳೆಯಲಾಗುವುದಿಲ್ಲ. ಮಾದಕ ವಸ್ತುಗಳ ಜಾಲದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಮೈಸೂರು ದಸರಾದಲ್ಲಿ ಕಂಬಳ ನಡೆಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಜಿಲ್ಲಾಡಳಿತದಿಂದ ಪೂರ್ವ ತಯಾರಿಗಳು ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರೆ ಕಂಬಳ ನಡೆಯಲಿದೆ ಎಂದರು.

RELATED ARTICLES

Latest News