Homeರಾಷ್ಟ್ರೀಯಪ್ರತಿಭಟನೆಗಳ ಮೇಲೆ ಪೊಲೀಸರ ಬಲಪ್ರಯೋಗ ಸಮರ್ಥಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪ್ರತಿಭಟನೆಗಳ ಮೇಲೆ ಪೊಲೀಸರ ಬಲಪ್ರಯೋಗ ಸಮರ್ಥಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

Peaceful protests cannot justify police lathi charge: Supreme Court

ನವದೆಹಲಿ,ಜು.27- ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಕೇವಲ ಆಂದೋಲನ ನಡೆಯಿತು ಎಂಬ ಮಾತ್ರಕ್ಕೆ ಪೊಲೀಸರ ಅತಿಯಾದ ಬಲಪ್ರಯೋಗ ಅಥವಾ ದೌರ್ಜನ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ದೇಶಾದ್ಯಂತ ಉಂಟಾದ ಘರ್ಷಣೆಗಳ ಹಿನ್ನೆಲೆಯಲ್ಲಿ, ಪ್ರತಿಭಟನೆಗಳನ್ನು ನಿರ್ವಹಿಸಲು ಏಕರೂಪದ ರಾಷ್ಟ್ರವ್ಯಾಪಿ ಶಿಷ್ಟಾಚಾರ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.

ನವದೆಹಲಿಯ ಜಂತರ್ ಮಂತರ್ ಹಾಗೂ ಸಂಸತ್ ಭವನದ ಕಡೆಗೆ ನಡೆದ ಪ್ರತಿಭಟನೆಗಳ ವೇಳೆ ಹಾಗೂ ಬಿಹಾರದ ವಿವಿಧಡೆ ನಡೆದ ಘಟನೆಗಳಲ್ಲಿ ಪೊಲೀಸರ ಅತಿವೃಷ್ಟಿ ಹಾಗೂ ಬಲಪ್ರಯೋಗದ ಕುರಿತಾದ ಅರ್ಜಿಗಳ ವಿಚಾರಣೆ ವೇಳೆ, ಕೇವಲ ಆಂದೋಲನ ಅಥವಾ ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕಷ್ಟೇ ಪೊಲೀಸರು ಲಾಠಿ ಚಾರ್ಜ್ ಮಾಡುವಂತಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.

ಪ್ರತಿಯೊಬ್ಬ ನಾಗರಿಕನನ್ನು ರಕ್ಷಿಸಬೇಕು. ಮಿತಿಮೀರಿದ ಕೃತ್ಯಗಳು ನಡೆದರೆ, ಅದನ್ನು ತಡೆಯಬೇಕು. ಶಿಷ್ಟಾಚಾರಗಳು ಇರಬೇಕು. ಇದು ದೆಹಲಿಯ ಬಗ್ಗೆ ಮಾತ್ರವಲ್ಲ. ವಿವಿಧ ಸ್ಥಳಗಳಲ್ಲಿ ಆಂದೋಲನ ನಡೆಸಲಾಗಿದೆ. ಕೇವಲ ಆಂದೋಲನ ಇರುವುದರಿಂದ ಲಾಠಿಚಾರ್ಜ್ ಮಾಡಲಾಗುವುದಿಲ್ಲ. ಹಾಗೆಯೇ, ಪ್ರತಿಭಟನಾಕಾರರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಜತೆಗೆ, ಕಾನೂನು ಸುವ್ಯವಸ್ಥೆ ಮತ್ತು ಸ್ವಯಂ-ಶಿಸ್ತು ಕೂಡ ಪ್ರಜಾಪ್ರಭುಷ್ಟ ವ್ಯವಸ್ಥೆಯಲ್ಲಿ ಅಷ್ಟೇ ಮುಖ್ಯ. ಪ್ರತಿಭಟನೆಗಳ ವೇಳೆ ಪೊಲೀಸರಿಗೂ ಕೂಡ ಅಗತ್ಯ ರಕ್ಷಣೆ ಮತ್ತು ಮಾರ್ಗಸೂಚಿಗಳು ಇರಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಈ ಕುರಿತ ಸಮಗ್ರ ಅರ್ಜಿಗಳ ವಿಚಾರಣೆಯನ್ನು ಮುಂದುವರೆಸಲಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ಮತ್ತು ಏಕರೂಪದ ಶಿಷ್ಟಾಚಾರ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ನ್ಯಾಯಾಲಯ ಗಂಭೀರ ಚಿಂತನೆ ನಡೆಸಿದೆ.
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಲಭ್ಯವಿದ್ದು, ಅದನ್ನು ರಕ್ಷಿಸಬೇಕಿದೆ. ಪ್ರತಿಭಟನಾಕಾರರ ಮೇಲಿನ ಹಲ್ಲೆ ಹಾಗೂ ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿಗೆ ಆಗುವ ಗಾಯಗಳೆರಡೂ ನ್ಯಾಯಾಲಯಕ್ಕೆ ಸಮಾನವಾದ ಕಾಳಜಿಯ ವಿಷಯಗಳಾಗಿವೆ. ಪ್ರತಿಭಟನಾಕಾರರು ಮತ್ತು ಕಾನೂನು ಜಾರಿ ಮಾಡುವ ಪೊಲೀಸರು ಇಬ್ಬರೂ ತಮದೇ ಆದ ಸ್ವಯಂ ಶಿಸ್ತನ್ನು ಕಾಯ್ದುಕೊಳ್ಳುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅನಿವಾರ್ಯ ಎಂದು ಹೇಳಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್ನಲ್ಲಿ ಜುಲೈ 20 ರಂದು ನಡೆದ ಸಂಸದ್ ಚಲೋ ಮೆರವಣಿಗೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಲಾಠಿಚಾರ್ಜ್ ಮತ್ತು ದಮನಕಾರಿ ಕ್ರಮಗಳ ವಿರುದ್ಧ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ದೆಹಲಿ ಮಾತ್ರವಲ್ಲದೆ ಬಿಹಾರದ ಸಿವಾನ್ ಮತ್ತು ಜೆಹಾನಾಬಾದ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ಹಿಂಸಾತಕ ತಿರುವು ಪಡೆದಿದ್ದವು.

ಬಿಹಾರದ ಸಿವಾನ್ನಲ್ಲಿ ಪ್ರತಿಭಟನೆಯ ವೇಳೆ ಗುಂಡಿನ ದಾಳಿ ನಡೆದಿದ್ದು, ಎಕೆ-47 ಬಳಕೆಯಾಗಿರುವ ಬಗ್ಗೆಯೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಹಾಗೂ ವೀಡಿಯೋಗ್ರಫಿ ದಾಖಲೆಗಳನ್ನು ಭದ್ರಪಡಿಸುವಂತೆ ಈ ಹಿಂದೆ ಹೈಕೋರ್ಟ್ ನಿರ್ದೇಶಿಸಿತ್ತು. ಇದೀಗ ಉನ್ನತ ಮಟ್ಟದ ತನಿಖೆ ಹಾಗೂ ರಾಷ್ಟ್ರವ್ಯಾಪಿ ಒಂದೇ ರೀತಿಯ ಮಾರ್ಗಸೂಚಿಗಳ ರೂಪಿಸುವಿಕೆಗೆ ಸುಪ್ರೀಂ ಕೋರ್ಟ್ ಮುಂದಾಗಿದ್ದು, ಮುಂದಿನ ಹಂತದ ವಿಚಾರಣೆ ಮುಂದುವರಿದಿದೆ.

RELATED ARTICLES

Latest News