ನವದೆಹಲಿ,ಜು.28- ನೀಟ್-ಯುಜಿ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಹಾಗೂ ಪೊಲೀಸರ ದೌರ್ಜನ್ಯದ ಆರೋಪಗಳ ಕುರಿತು ಸ್ವತಂತ್ರ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅದೇ ಸಮಯದಲ್ಲಿ, ಕಾನೂನನ್ನು ಕೈಗೆತ್ತಿಕೊಳ್ಳುವ ಅಥವಾ ಮಿತಿಮೀರಿದ ವರ್ತನೆ ತೋರುವ ಯಾರೇ ಆಗಲಿ, ಅವರು ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರ ವಿರುದ್ಧ ನಡೆದ ಪೊಲೀಸ್ ಕ್ರಮ ಮತ್ತು ಅಶ್ರುವಾಯು ಶೆಲ್ ಪ್ರಯೋಗದ ಕುರಿತು ಏಕೆ ಸ್ವತಂತ್ರ ತನಿಖೆ ನಡೆಸಬಾರದು ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕಾನೂನಿನ ಮಿತಿಗಳನ್ನು ಮೀರಿ ಮುಗ್ಧ ಜನರ ಮೇಲೆ ಬಲಪ್ರಯೋಗಿಸಿ ದೌರ್ಜನ್ಯ ಎಸಗಿದ ಯಾರೇ ಆಗಲಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಇಂದು ಎಚ್ಚರಿಕೆ ನೀಡಿದ್ದಾರೆ.ಜು.20 ರಂದು ನಡೆದಿದ್ದ ಸಂಸತ್ತು ಮೆರವಣಿಗೆಯ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಅತಿರೇಕದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ.ಮೋಹನ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯ ನೇತೃತ್ವ ವಹಿಸಿದೆ.
ವಿಚಾರಣೆ ವೇಳೆ ಮಾತನಾಡಿದ ಸಿಜೆಐ, ಈ ಸಂಪೂರ್ಣ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ತನಿಖೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿರಬೇಕು. ಹೊಣೆಗಾರಿಕೆಯನ್ನು ನಿಗದಿಪಡಿಸದಿದ್ದರೆ ಇಂತಹ ತನಿಖೆಗಳಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಈ ತನಿಖೆಯ ಸಂಯೋಜನೆ ಮತ್ತು ಸಮಿತಿಯ ಸ್ವರೂಪವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಯಾರೇ ಆಗಲಿ ಕಾನೂನನ್ನು ತಮ ಕೈಗೆ ತೆಗೆದುಕೊಂಡರೆ ಅಥವಾ ಮಿತಿಮೀರಿದ ಕೃತ್ಯಗಳನ್ನು ಎಸಗಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರತಿಭಟನೆಗಳ ಸಮಯದಲ್ಲಿ ನಿಗದಿತ ಶಿಷ್ಟಾಚಾರಗಳು ಮತ್ತು ನಿಯಮಗಳ ಉಲ್ಲಂಘನೆಯಾಗಿರುವ ಕುರಿತು ಚರ್ಚೆ ನಡೆಸಿರುವ ನ್ಯಾಯಪೀಠ, ಇಂತಹ ಪ್ರಕರಣಗಳನ್ನು ಕಾನೂನು ತನ್ನ ಹಾದಿಯಲ್ಲಿ ನೋಡಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದೆ.ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ರಾಜಕೀಯ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಿದ್ದವು. ಸಂಸದ್ ಚಲೋ ಮೆರವಣಿಗೆಯ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ದೆಹಲಿ ಪೊಲೀಸ್ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಪೊಲೀಸರ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ಪ್ರಜಾಸತ್ತಾತಕವಾಗಿ ಪ್ರತಿಭಟಿಸುವ ಹಕ್ಕಿಗೆ ಧಕ್ಕೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ನ್ಯಾಯಾಲಯ ಮತ್ತು ಆಡಳಿತ ಯಂತ್ರಗಳು ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಈ ಹಿಂದೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ತೋರಿದ ಅತಿರೇಕದ ವರ್ತನೆಗಳನ್ನು ಉಲ್ಲೇಖಿಸಿರುವ ಅರ್ಜಿದಾರರು, ಕೇವಲ ತಪ್ಪು ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ಭವಿಷ್ಯದಲ್ಲಿ ನಡೆಯುವ ಇಂತಹ ಶಾಂತಿಯುತ ಪ್ರತಿಭಟನೆಗಳಿಗೆ ದೇಶಾದ್ಯಂತ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.
ಇಂದಿನ ವಾಸ್ತವಿಕ ಪರಿಸ್ಥಿತಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಪ್ರತಿಭಟನಾ ಸ್ವಾತಂತ್ರ್ಯದ ರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ನ್ಯಾಯಾಲಯದ ಈ ಕಠಿಣ ನಿಲುವಿನಿಂದಾಗಿ ದೌರ್ಜನ್ಯ ಎಸಗಿದ ಹಿರಿಯ ಹಾಗೂ ಕೆಳಹಂತದ ಸಿಬ್ಬಂದಿಗಳಲ್ಲಿ ನಡುಕ ಹುಟ್ಟಿಸಿದೆ. ಮುಂದಿನ ದಿನಗಳಲ್ಲಿ ತನಿಖಾ ಸಮಿತಿಯ ರಚನೆ ಮತ್ತು ಸುಪ್ರೀಂ ಕೋರ್ಟ್ ನೀಡುವ ಅಂತಿಮ ನಿರ್ದೇಶನಗಳು ದೇಶದ ಕಾನೂನು ಸುವ್ಯವಸ್ಥೆ ಮತ್ತು ನಾಗರಿಕ ಹಕ್ಕುಗಳ ದೃಷ್ಟಿಯಿಂದ ಮಹತ್ವದ ತಿರುವನ್ನು ಪಡೆಯುವ ನಿರೀಕ್ಷೆಯಿದೆ.
ಸಂಸತ್ತಿನ ಪ್ರತಿಭಟನೆಗಳ ಹಿಂದೆ ಕೆಲವು ಬಾಹ್ಯ ಹಾಗೂ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಲಿಂಕ್‌ಗಳು ಇರಬಹುದೆಂಬ ಶಂಕೆಯ ಮೇರೆಗೆ ದೆಹಲಿ ಪೊಲೀಸರು ಪ್ರತ್ಯೇಕ ತನಿಖೆಯನ್ನು ಮುಂದುವರೆಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದ್ದಾರೆ.
