Homeರಾಜಕೀಯರಾಜ್ಯ ಬಿಜೆಪಿಯಲ್ಲಿ ಮತ್ತೆ ವಿಜಯೇಂದ್ರ ಬದಲಾವಣೆಯ ಗುಸುಗುಸು

ರಾಜ್ಯ ಬಿಜೆಪಿಯಲ್ಲಿ ಮತ್ತೆ ವಿಜಯೇಂದ್ರ ಬದಲಾವಣೆಯ ಗುಸುಗುಸು

Rumors of Vijayendra change in state BJP again

ಬೆಂಗಳೂರು,ಜು.28- ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗುಸು ಗುಸು ಕೇಳಿ ಬರುತ್ತಿರುವ ಬೆನ್ನಲ್ಲೇ, ಉಸ್ತುವಾರಿ ತಲೆ ತಂಡಕ್ಕೂ ಒತ್ತಡ ಹೆಚ್ಚಾಗುತ್ತಿದೆ.ಬಿಜೆಪಿಯ ಸಂಘಟನಾತಕ ಹಿಡಿತ ಮತ್ತು ಮುಂಬರುವ ರಾಜಕೀಯ ಸವಾಲುಗಳ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.

ಅದರಲ್ಲೂ ವಿಶೇಷವಾಗಿ, ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾಮೋಹನ್‌ ಅಗರ್ವಾಲ್‌ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷದೊಳಗೆ ತಳಮಳ ಹಾಗೂ ಅಸಮಾಧಾನ ಸ್ಫೋಟಗೊಂಡಿದೆ.
ವಿಧಾನ ಪರಿಷತ್‌ ಚುನಾವಣೆಗಳಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆಳವಣಿಗೆಗಳು ಮತ್ತು ಹಿರಿಯ ಮುಖಂಡರ ಬಹಿರಂಗ ವಾಕ್ಸಮರಗಳು ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ದಾಸ್‌‍ ಅಗರ್ವಾಲ್‌ ಅವರ ಕಾರ್ಯವೈಖರಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮುಖಂಡತ್ವದ ಬಗ್ಗೆ ಕಮಲ ಪಾಳಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ರಾಜ್ಯದಲ್ಲಿ ಪಕ್ಷವನ್ನು ಒಗ್ಗಟ್ಟಾಗಿ ಕೊಂಡೊಯ್ಯುವಲ್ಲಿ ಮತ್ತು ಭಿನ್ನಮತವನ್ನು ಶಮನ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಪಕ್ಷದ ಕೆಲ ಹಿರಿಯ ನಾಯಕರು ಹಾಗೂ ಸ್ಥಳೀಯ ಘಟಕಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಈ ಅಸಮಾಧಾನಗಳನ್ನು ಆರಂಭದಲ್ಲೇ ಹತ್ತಿಕ್ಕಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಲ್ಲಿ ಡಾ. ರಾಧಾಮೋಹನ್‌ ಅಗರ್ವಾಲ್‌ ಅವರ ರಣತಂತ್ರಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂಬುದು ಪ್ರಮುಖ ನಾಯಕರ ಅಳಲು. ಬಂಡಾಯದ ಮುಖಗಳನ್ನು ಸಮಾಧಾನಪಡಿಸುವ ಬದಲು, ಏಕಪಕ್ಷೀಯ ನಿರ್ಧಾರಗಳು ಪಕ್ಷದೊಳಗೆ ಮತ್ತಷ್ಟು ಬಿರುಕು ಮೂಡಲು ಕಾರಣವಾಗಿವೆ ಎಂಬುದು ಪ್ರಮುಖ ದೂರು.

ಚಿಕ್ಕಬಳ್ಳಾಪುರ ಸಂಸತ್‌ ಸದಸ್ಯ ಕೆ.ಸುಧಾಕರ್‌ ಹಾಗೂ ಯಲಹಂಕ ಶಾಸಕ ಎಸ್‌‍.ಆರ್‌.ವಿಶ್ವನಾಥ್‌ ಸೇರಿದಂತೆ ಹಲವು ಪ್ರಮುಖರು ಮಾಧ್ಯಮಗಳ ಮುಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಪಕ್ಷಕ್ಕೆ ಮುಜುಗರ ತಂದಿದೆ.

ಆಡಿಯೋ ವಿವಾದ ಮತ್ತು ಅಸಮಾಧಾನ :
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಹೆಸರಿನಲ್ಲಿ ವೈರಲ್‌ ಆದ ಆಡಿಯೋ ವಿವಾದ ಹಾಗೂ ಬಂಡಾಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದ ನಿರಂತರ ಆಕ್ರೋಶವು ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಉಸ್ತುವಾರಿ ವಿಫಲತೆಯ ಆರೋಪ: ಪಕ್ಷದ ಹಿರಿಯರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ಹಾಗೂ ಬಂಡಾಯವನ್ನು ಹತ್ತಿಕ್ಕುವಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ದಾಸ್‌‍ ಅಗರ್ವಾಲ್‌ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅವರ ಬದಲಾವಣೆಗೆ ದೆಹಲಿ ಮಟ್ಟದಲ್ಲಿ ಕಸರತ್ತು ಆರಂಭವಾಗಿದೆ.

ಟ್ರಬಲ್‌ ಶೂಟರ್‌ಗಳ ಬೇಡಿಕೆ :
ಕರ್ನಾಟಕ ಬಿಜೆಪಿಯ ಇತಿಹಾಸವನ್ನು ಅವಲೋಕಿಸಿದರೆ, ಇಲ್ಲಿನ ರಾಜಕೀಯ ಸಂಕೀರ್ಣತೆಯನ್ನು ನಿಭಾಯಿಸಲು ಹೈಕಮಾಂಡ್‌ ಹಿಂದಿನ ಕಾಲದಲ್ಲಿ ಪ್ರಖ್ಯಾತ ನಾಯಕರನ್ನು ಟ್ರಬಲ್‌ ಶೂಟರ್‌ಗಳಾಗಿ (ಸಮಸ್ಯೆ ಪರಿಹಾರಕರು) ಕಳುಹಿಸುತ್ತಿತ್ತು.ಅರುಣ್‌ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್‌ ಅವರಂತಹ ನುರಿತವರು ರಾಜ್ಯಕ್ಕೆ ಉಸ್ತುವಾರಿಯಾಗಿ ಬಂದಾಗ, ಸ್ಥಳೀಯ ನಾಯಕರ ಜೊತೆ ನಿರಂತರ ಮಾತುಕತೆ ನಡೆಸಿ, ಭಿನ್ನಮತಗಳನ್ನು ಇತ್ಯರ್ಥ ಪಡಿಸುತ್ತಿದ್ದರು.

ರಾಜ್ಯದ ನಾಯಕರ ನಡುವೆ ಸಮನ್ವಯ ಸಾಧಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವಲ್ಲಿ ಇಂತಹ ನಾಯಕರ ಶೈಲಿ ಅತ್ಯಂತ ಪರಿಣಾಮಕಾರಿಯಾಗಿತ್ತು. ಪ್ರಸ್ತುತ ದಿನಗಳಲ್ಲಿ ಅಂತಹ ಪ್ರಬಲ ನಾಯಕರ ಅಗತ್ಯವಿದೆ ಎಂಬುದು ಬಹುತೇಕರ ಆಗ್ರಹವಾಗಿದೆ.

ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಇತರ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಪ್ರಸ್ತುತ ಉಸ್ತುವಾರಿಗಳ ಕಾರ್ಯವೈಖರಿಯಲ್ಲಿ ಸಕಾರಾತಕ ಬದಲಾವಣೆ ತರಬೇಕು ಇಲ್ಲವೇ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಬಲ್ಲ, ಸಮರ್ಥವಾಗಿ ವಿವಾದಗಳನ್ನು ಬಗೆಹರಿಸಬಲ್ಲ ಪ್ರಭಾವಿ ರಾಷ್ಟ್ರೀಯ ನಾಯಕರನ್ನು ಹೊಸ ಉಸ್ತುವಾರಿಯನ್ನಾಗಿ ನೇಮಿಸಬೇಕು ಎಂದು ದೆಹಲಿ ಮಟ್ಟದ ನಾಯಕರಿಗೆ ರಾಜ್ಯದ ಪ್ರಮುಖ ಮುಖಂಡರು ತೀವ್ರ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಬಂಡಾಯಗಾರರಿಗೆ ಕಠಿಣ ಎಚ್ಚರಿಕೆ ಹಾಗೂ ಶಿಸ್ತಿನ ಪಾಠ ಮಾಡಲು ರಾಧಾ ಮೋಹನ್‌ ದಾಸ್‌‍ ಅಗರ್ವಾಲ್‌ ಪ್ರಯತ್ನಿಸಿದ್ದರೂ, ತಳಮಟ್ಟದಲ್ಲಿ ನಾಯಕರ ನಡುವಿನ ಮುಸುಕಿನ ಗುದ್ದಾಟ ಮಾತ್ರ ನಿಂತಿಲ್ಲ. ಇದು ಹೈಕಮಾಂಡ್‌ಗೂ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.

ರಾಜ್ಯ ನಾಯಕರನ್ನು ಒಗ್ಗೂಡಿಸಲು ವಿಫಲರಾಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ರಾಧಾ ಮೋಹನ್‌ ದಾಸ್‌‍ ಅಗರ್‌ವಾಲ್‌ ಅವರನ್ನು ಆ ಹುಲಿ-ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಬೇರೆ ಹಿರಿಯ ರಾಷ್ಟ್ರೀಯ ನಾಯಕರಿಗೆ (ಉದಾಹರಣೆಗೆ ಧರ್ಮೇಂದ್ರ ಪ್ರಧಾನ್‌ ಅಥವಾ ಇನ್ಯಾವುದೇ ಪ್ರಮುಖರಿಗೆ) ಕರ್ನಾಟಕದ ಉಸ್ತುವಾರಿ ಪಟ್ಟ ಕಟ್ಟಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಅಥವಾ ಸಮಿತಿಗಳ ರಚನೆಯಲ್ಲಿ ತಳಮಟ್ಟದ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ಕೊರತೆ ಎದ್ದು ಕಾಣುತ್ತಿದ್ದು, ರಾಜ್ಯದ ನಾಯಕತ್ವ ಮತ್ತು ಹೈಕಮಾಂಡ್‌ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಾದ ಉಸ್ತುವಾರಿಗಳು ಕೇವಲ ಸಾಂಸ್ಥಿಕ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.ಪಕ್ಷದ ಸಂಘಟನೆಗೆ ಹಿನ್ನಡೆಯಾಗದಂತೆ ತಡೆಯಲು ದೆಹಲಿ ಮಟ್ಟದಲ್ಲಿ ನಾಯಕರು ಯಾವ ರಣತಂತ್ರ ರೂಪಿಸಲಿದ್ದಾರೆ ಮತ್ತು ರಾಧಾ ಮೋಹನ್‌ ದಾಸ್‌‍ ಅಗರ್‌ವಾಲ್‌ ಅವರ ಮುಂದಿನ ಜವಾಬ್ದಾರಿ ಏನು ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News