Homeರಾಷ್ಟ್ರೀಯಹೆಚ್ಚಿನ ಹೊರಹರಿವು, ವಿದೇಶಗಳಲ್ಲಿ ಭಾರತೀಯ ಸಂಸ್ಥೆಗಳ ಹೂಡಿಕೆಯಿಂದಾಗಿ ನಿವ್ವಳ ಎಫ್‌ಡಿಐನಲ್ಲಿ ಕುಸಿತ

ಹೆಚ್ಚಿನ ಹೊರಹರಿವು, ವಿದೇಶಗಳಲ್ಲಿ ಭಾರತೀಯ ಸಂಸ್ಥೆಗಳ ಹೂಡಿಕೆಯಿಂದಾಗಿ ನಿವ್ವಳ ಎಫ್‌ಡಿಐನಲ್ಲಿ ಕುಸಿತ

Net FDI remains low due to high outflows, investment by Indian firms abroad

ನವದೆಹಲಿ, ಜು.30- ಕಳೆದ ಕೆಲವು ವರ್ಷಗಳಲ್ಲಿ ಭಾರತಕ್ಕೆ ಆಗಮಿಸಿರುವ ನಿವ್ವಳ ವಿದೇಶಿ ನೇರ ಹೂಡಿಕೆ ಎಫ್‌ಡಿಐನಲ್ಲಿ ತೀವ್ರ ಕುಸಿತ ಕಂಡಿದ್ದು, ವಿದೇಶಿ ಹೂಡಿಕೆದಾರರು ಭಾರತದಿಂದ ಹೂಡಿಕೆ ಹಿಂಪಡೆಯುವ ಪ್ರಮಾಣ ಮಾತ್ರ ನಿರಂತರ ಏರಿಕೆ ಕಂಡಿದೆ ಎಂಬ ಮಾಹಿತಿ ಕೇಂದ್ರ ಸರ್ಕಾರವೇ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಬಹಿರಂಗವಾಗಿದೆ.

ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಡಾ.ಜಾನ್‌ ಬ್ರಿಟ್ಟಾಸ್‌‍ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಉತ್ತರ ನೀಡಿದ್ದು, 2022-23ರಿಂದ 2025-26ರವರೆಗಿನ ನಿವ್ವಳ ಎಫ್‌ಡಿಐ, ವಿದೇಶಿ ಹೂಡಿಕೆದಾರರ ಹೂಡಿಕೆ ಹಿಂಪಡೆಯುವಿಕೆ ಹಾಗೂ ಅದರ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಉತ್ತರದ ಪ್ರಕಾರ, ಭಾರತಕ್ಕೆ ಬಂದ ನಿವ್ವಳ ವಿದೇಶಿ ನೇರ ಹೂಡಿಕೆ 2022-23ರಲ್ಲಿ 27.99 ಬಿಲಿಯನ್‌ ಅಮೆರಿಕನ್‌ ಡಾಲರ್‌ ಆಗಿದ್ದರೆ, 2023-24ರಲ್ಲಿ ಅದು 10.13 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. 2024-25ರಲ್ಲಿ ಮತ್ತಷ್ಟು ಕುಸಿದು ಕೇವಲ 0.96 ಬಿಲಿಯನ್‌ ಡಾಲರ್‌ಗೆ ತಲುಪಿದ್ದು, 2025-26ರಲ್ಲಿ ಸ್ವಲ್ಪ ಚೇತರಿಕೆ ಕಂಡು 6.95 ಬಿಲಿಯನ್‌ ಡಾಲರ್‌ ದಾಖಲಾಗಿದೆ.

2022-23ರಲ್ಲಿ 27.99, 2023-24ರಲ್ಲಿ 10.13, 2024-25ರಲ್ಲಿ 0.96, 2025-26ರಲ್ಲಿ 6.95 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹೂಡಿಕೆಯಾಗಿದೆ. ಈ ಅಂಕಿಅಂಶಗಳ ಪ್ರಕಾರ, 2022-23ರೊಂದಿಗೆ ಹೋಲಿಸಿದರೆ 2024-25ರಲ್ಲಿ ನಿವ್ವಳ ಎಫ್‌ಡಿಐ ಸುಮಾರು ಶೇ.97ರಷ್ಟು ಕುಸಿತ ಕಂಡಿದೆ.

ಇದೇ ವೇಳೆ, ವಿದೇಶಿ ಹೂಡಿಕೆದಾರರು ಭಾರತದಿಂದ ಮರುಪಾವತಿ ಹಾಗೂ ಹೂಡಿಕೆ ಹಿಂಪಡೆಯುವಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.2022-23ರಲ್ಲಿ 29.35, 2023-24ರಲ್ಲಿ 44.47, 2024-25ರಲ್ಲಿ 51.49, 2025-26ರಲ್ಲಿ 54.04 ಬಿಲಿಯನ್‌ ಅಮೆರಿಕನ್‌ ಡಾಲರ್‌
ಎಫ್‌ಡಿಐ ಹೂಡಿಕೆ ಹಿಂಪಡೆಯಲಾಗಿದೆ.

ನಾಲ್ಕು ವರ್ಷಗಳ ಅವಧಿಯಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು 179.35 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳನ್ನು ಮರುಪಾವತಿ ಮತ್ತು ಹೂಡಿಕೆ ಹಿಂಪಡೆಯುವಿಕೆ ಮೂಲಕ ಭಾರತದಿಂದ ಹೊರತೆಗೆದಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

ರಾಜ್ಯವಾರು ಮತ್ತು ವಲಯವಾರು ನಿವ್ವಳ ಎಫ್‌ಡಿಐ ಮಾಹಿತಿಯನ್ನು ಸರ್ಕಾರ ಪ್ರತ್ಯೇಕವಾಗಿ ನಿರ್ವಹಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಎಫ್‌ಡಿಐ ಇಕ್ವಿಟಿ ಹೂಡಿಕೆಯ ರಾಜ್ಯವಾರು (ಮೊದಲ 15 ರಾಜ್ಯಗಳು) ಹಾಗೂ ವಲಯವಾರು (ಮೊದಲ 15 ಕ್ಷೇತ್ರಗಳು) ಮಾಹಿತಿಯನ್ನು ಪ್ರತ್ಯೇಕ ಅನುಬಂಧದಲ್ಲಿ ನೀಡಲಾಗಿದೆ.

ಹೂಡಿಕೆ ಹಿಂಪಡೆಯುವಿಕೆ ಹೆಚ್ಚಾಗಿರುವ ಕಾರಣಗಳ ಕುರಿತು ಸರ್ಕಾರ ನೀಡಿದ ವಿವರಣೆಯಲ್ಲಿ, 2025-26ರಲ್ಲಿ ಭಾರತ ದಾಖಲೆಯ 94.84 ಬಿಲಿಯನ್‌ ಅಮೆರಿಕನ್‌ ಡಾಲರ್‌ ಒಟ್ಟು ಎಫ್‌ಡಿಐ ಹರಿವು ದಾಖಲಿಸಿದ್ದು, ಇದು 2024-25ರ 80.61 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ನಿವ್ವಳ ಎಫ್‌ಡಿಐ ಕುಸಿತಕ್ಕೆ ವಿದೇಶಿ ಹೂಡಿಕೆದಾರರ ಮರುಪಾವತಿ ಮತ್ತು ಹೂಡಿಕೆ ಹಿಂಪಡೆಯುವಿಕೆ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ, 2022ರಲ್ಲಿ ಉದಾರೀಕರಿಸಲಾದ ಸಾಗರೋತ್ತರ ನೇರ ಹೂಡಿಕೆ ನಿಯಮಗಳ ಪರಿಣಾಮವಾಗಿ ಭಾರತೀಯ ಕಂಪನಿಗಳು ವಿದೇಶಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವುದರಿಂದ ಹೊರಹರಿವು ಕೂಡ ಹೆಚ್ಚಾಗಿದೆ ಎಂದು ವಿವರಿಸಿದೆ.
ವಿದೇಶಗಳಲ್ಲಿ ಭಾರತೀಯ ಕಂಪನಿಗಳ ಹೂಡಿಕೆ ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ವ್ಯವಹಾರ ವಿಸ್ತರಣೆ ಹಾಗೂ ಸ್ಪರ್ಧಾತಕ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದ್ದು, ಇದು ದೀರ್ಘಾವಧಿಯಲ್ಲಿ ಭಾರತೀಯ ಆರ್ಥಿಕತೆಗೆ ಅನುಕೂಲಕರವಾಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುವ ಪ್ರಮಾಣ ಹೆಚ್ಚಾಗಿರುವುದು ಭಾರತದಲ್ಲಿ ಅವರು ಉತ್ತಮ ಲಾಭ ಗಳಿಸಿರುವುದನ್ನು ಸೂಚಿಸುತ್ತಿದ್ದು, ಭಾರತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿರುವುದಕ್ಕೂ ಇದು ಸಾಕ್ಷಿಯಾಗಿದೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.

ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ನಂತರ ಗುಜರಾತ್‌, ದೆಹಲಿ, ತಮಿಳುನಾಡು, ಹರಿಯಾಣ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಕೇರಳ, ಆಂದ್ರಪ್ರದೇಶ, ಪಂಜಾಬ್‌, ಮಧ್ಯಪ್ರದೇಶ ರಾಜ್ಯಗಳು ಕ್ರಮಾಂಕದಲ್ಲಿ ವಿದೇಶಿಯ ಹೂಡಿಕೆಯನ್ನು ಆಕರ್ಷಿಸಿವೆ.

ಸೇವಾವಲಯ ಕಂಪ್ಯೂಟರ್‌ ಸಾಫ್ಟವೇರ್‌ ಮತ್ತು ಹಾರ್ಡ್‌ವೇರ್‌, ರೇಡಿಂಗ್‌, ಆಟೋಮೊಬೈಲ್‌, ಟೆಲಿ ಕಮ್ಯೂನಿಕೇಷನ್‌, ನಿರ್ಮಾಣ, ಔಷಧಿ, ಇಂಧನ, ಹೋಟೆಲ್‌ ಟೂರಿಸಂ, ಆಹಾರ ಸಂಸ್ಕರಣೆ ಸೇರಿದಂತೆ ಕೆಲವು ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿವೆ ಎಂದು ವಿವರಿಸಲಾಗಿದೆ.

RELATED ARTICLES

Latest News