ಡೆಹ್ರಾಡೂನ್, ಅ.30- ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಬೆಂಗಳೂರಿನ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ತ್ರಧಾರ ಹೆಲಿಪೋರ್ಟ್‌ಗೆ ತೆರಳುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಶುಕ್ರವಾರ ಮಧ್ಯಾಹ್ನ 1.14ರ ಸುಮಾರಿಗೆ ಟೇಕಾಫ್ ಆಗಿತ್ತು. ಜೋಶಿಮಠ ಕಣಿವೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್‌ನ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಚಾಯಿ ಗ್ರಾಮದ ಸಮೀಪ ಗುಡ್ಡಕ್ಕೆ ಅಪ್ಪಳಿಸಿರುವ ಮಾಹಿತಿ ಲಭ್ಯವಾಗಿದೆ.
ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಐವರು ಪ್ರಯಾಣಿಕರು ಬೆಂಗಳೂರಿನವರು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಜೈನ್ ತಿಳಿಸಿದ್ದಾರೆ.
ಪ್ರಯಾಣಿಕರನ್ನು ಪ್ರತಾಪ್, ಅರುಣ್, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ ಎಂದು ಗುರುತಿಸಲಾಗಿದೆ. ಕ್ಯಾಪ್ಟನ್ ಹಿಮಾಂಶು ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದರು.ಹೆಲಿಕಾಪ್ಟರ್ ಪತ್ತೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಭಾರತೀಯ ಸೇನೆ, ಪೊಲೀಸರು ಹಾಗೂ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಜಂಟಿಯಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದ ಆರು ಮಂದಿಯ ಸ್ಥಿತಿಗತಿ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಆದರೆ ಎಲ್ಲ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ವರದಿಗಳು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನವೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಹಾಗೂ ಹಿಮಪಾತವಾಗುತ್ತಿದ್ದು, ಗೋಚರತೆ ಕಡಿಮೆಯಾಗಿದೆ. ಕೇದಾರನಾಥದಲ್ಲೂ ಋತುವಿನ ಮೊದಲ ಭಾರಿ ಹಿಮಪಾತ ಸಂಭವಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಸಂಪೂರ್ಣ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆಯ ಬಗ್ಗೆ ನಿರಂತರ ನಿಗಾ ವಹಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
