ನವದೆಹಲಿ, ಜು.30- ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಭಾರೀ ಬಜೆಟ್‌ನ ಚಲನಚಿತ್ರವೆನಿಸಿರುವ ರಾಮಾಯಣ ಭಾಗ 1 ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಟ್ರೇಲರ್ ಟ್ರೆಂಡಿಂಗ್‌ನಲ್ಲಿದ್ದು, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಲುಕ್‌ಗಳು ಅಭಿಮಾನಿಗಳ ಮನಗೆದ್ದಿವೆ.
ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬ್ರಹಾಂಡ ಕಾವ್ಯ ಕೇವಲ ಒಂದು ಚಲನಚಿತ್ರವಾಗಿರದೆ, ಭಾರತೀಯ ಸನಾತನ ಸಂಸ್ಕೃತಿಯ ಸಾಕ್ಷೀಕರಣವಾಗಿ ರೂಪುಗೊಳ್ಳುತ್ತಿದೆ ಎಂಬುದು ಟ್ರೇಲರ್‌ನ ಪ್ರತಿ ಫ್ರೇಮ್‌ನಲ್ಲಿಯೂ ನೈಜತೆ ಗೋಚರಿಸುತ್ತದೆ. ಬಿಡುಗಡೆಯಾದ ಕ್ಷಣದಿಂದಲೇ ಎಕ್‌್ಸ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ದೃಶ್ಯ ವೈಭವ, ಕಲಾ ನಿರ್ದೇಶನ ಹಾಗೂ ಪಾತ್ರವರ್ಗದ ನಟನೆಯ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಪ್ರಶಂಸೆಗಳು ಹರಿದುಬರುತ್ತಿವೆ.
ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲದೆ ಲಾರಾ ದತ್ತಾ (ಕೈಕೇಯಿ), ವಿವೇಕ್ ಒಬೆರಾಯ್ (ವಿದ್ಯುತ್ಜಿಹ್ವಾ), ರಾಕುಲ್ ಪ್ರೀತ್ ಸಿಂಗ್ (ಶೂರ್ಪನಖಾ) ಸೇರಿದಂತೆ ಘಟಾನುಘಟಿ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಎಕ್ಸ್ ವೇದಿಕೆಯಲ್ಲಿ ಪ್ರೇಕ್ಷಕರಿಂದ ಈ ಟ್ರೇಲರ್‌ಗೆ ಮಿಶ್ರ ಹಾಗೂ ಸಕಾರಾತಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಿಂದಿನ ಕೆಲವು ಪೌರಾಣಿಕ ಸಿನಿಮಾಗಳಲ್ಲಿ ಕಂಡುಬಂದ ಕಳಪೆ ಗ್ರಾಫಿಕ್ಸ್ ಬಗ್ಗೆ ಪ್ರೇಕ್ಷಕರಲ್ಲಿ ಆತಂಕವಿತ್ತು. ಆದರೆ, ರಾಮಾಯಣ ಭಾಗ 1 ಟ್ರೇಲರ್‌ನಲ್ಲಿ ಬಳಸಲಾದ ವಿಎಫ್‌ಎಕ್‌್ಸ ಅತ್ಯಂತ ನೈಜವಾಗಿಯೂ, ಅತಿ ಎನಿಸದಂತೆಯೂ ಮೂಡಿಬಂದಿದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ರಣಬೀರ್ ಕಪೂರ್ (ಶ್ರೀರಾಮ- ಸಾಂಪ್ರದಾಯಿಕ ಮುಗ್ಧತೆ, ಗಂಭೀರತೆ ಮತ್ತು ದೇವತ್ವದ ಕಳೆ ತುಂಬಿದ ರಣಬೀರ್ ಕಪೂರ್ ಅವರ ರಾಮನ ಪಾತ್ರದ ಲುಕ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಯುದ್ಧಭೂಮಿಯ ಸನ್ನಿವೇಶಗಳಲ್ಲಿ ಅವರ ಹಾವಭಾವಗಳು ನಿರೀಕ್ಷೆಗೂ ಮೀರಿದ ನಿಖರತೆಯನ್ನು ಹೊಂದಿವೆ. ಸೀತಾಮಾತೆ-ಸಹಜ ಸೌಂದರ್ಯಕ್ಕೆ ಹೆಸರಾದ ಸಾಯಿ ಪಲ್ಲವಿ, ಸೀತಾಮಾತೆಯ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವತುಂಬಿದ್ದಾರೆ. ಅವರ ಮುಖದಲ್ಲಿನ ತ್ಯಾಗ, ಭಕ್ತಿ ಹಾಗೂ ತೇಜಸ್ಸುಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಯಶ್ (ರಾವಣ)- ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಅಂದರೆ ರಾಕಿಂಗ್ ಸ್ಟಾರ್ ಯಶ್. ಲಂಕಾಧಿಪತಿ ರಾವಣನ ಪಾತ್ರದಲ್ಲಿ ಅವರ ಗಡಸು ಧ್ವನಿ, ನಿಲುವು ಮತ್ತು ಕ್ರೂರತೆಯ ಜೊತೆಗಿನ ವಿದ್ವತ್ತು ಟ್ರೇಲರ್‌ನಲ್ಲಿ ಪ್ರಮುಖ ಹೈಲೈಟ್ ಆಗಿದೆ.ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ಅವರ ಗಾಂಭೀರ್ಯದ ರಾಮನ ಪಾತ್ರ ಹಾಗೂ ಯಶ್ ಅವರ ರಾವಣನ ಖಡಕ್ ಲುಕ್ ಔರಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
